ಕಲ್ಚರ್ಪೆ: ಮಳೆಗೆ ಕಲ್ಚರ್ಪೆಯ ಕಸದ ರಾಶಿಗಳು ಕೊಚ್ಚಿ ಪಯಸ್ವಿನಿ ನದಿ ಸೇರುವ ಆತಂಕ ಇದೆ. ಪ್ರತಿ ಬಾರಿ ಈ ರೀತಿಯ ಆತಂಕ ಉಂಟಾಗುತ್ತಿದ್ದು ಇದಕ್ಕೆ ಶಾಶ್ವತ ಪರಿಹಾರ ಕಾಣಬೇಕು ಎಂದು ಸ್ಥಳೀಯರು ಪುತ್ತೂರು ಸಹಾಯಕ ಕಮೀಷನರ್ರಿಗೆ ಮನವಿ ಸಲ್ಲಿಸಿದ್ದಾರೆ. ಹೋರಾಟ ಸಮಿತಿಯ ಅಶೋಕ್ ಪೀಚೆಯವರು ಎಸಿ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಕಲ್ಚರ್ಪೆಯಲ್ಲಿ ವರ್ಷಂ ಪ್ರತಿ ಮಳೆಗಾಲದಲ್ಲಿ ಉಂಟಾಗುವ ಕಸದ ರಾಶಿಯ
ಸಮಸ್ಯೆ ಮತ್ತೆ ಸ್ಥಳೀಯರಿಗೆ ಸಮಸ್ಯೆಯನ್ನು ಉಂಟು ಮಾಡುತ್ತಿದೆ.
ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಕಸದ ರಾಶಿಗಳು ನೀರಿನ ರಭಸಕ್ಕೆ ಕೊಚ್ಚಿ ಪಯಸ್ವಿನಿ ನದಿ ಹಾಗೂ ಇತರ ನೀರಿನ ಮೂಲ ಸೇರುವ ಆತಂಕ ಎದುರಾಗಿದೆ.
ಕಳೆದ ಹಲವಾರು ವರ್ಷಗಳಿಂದ ಇರುವ ಈ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಲು ಸಂಬಂಧಪಟ್ಟವರು ಕ್ರಮ ಕೈಗೊಂಡಿಲ್ಲ.ಈ ಪರಿಸರದಲ್ಲಿ ಮೇಲ್ಭಾಗದಿಂದ ಹರಿದು ಬರುತ್ತಿರುವ ನೀರಿನ ತೋಡಲ್ಲಿ ಕಸದ ರಾಶಿಗಳು ತುಂಬಿದ್ದು ಅದರಲ್ಲಿರುವ ಪ್ಲಾಸ್ಟಿಕ್ ಹಾಗೂ ಇನ್ನಿತರ ತ್ಯಾಜ್ಯಗಳು ಪರಿಸರದಲ್ಲಿ ತುಂಬಿ ದುರ್ವಾಸನೆ ಬೀರುತ್ತಿದೆ. ಸೊಳ್ಳೆಗಳ ಕಾಟದಿಂದ ನಮ್ಮ ನಮ್ಮ ಮನೆಗಳಲ್ಲಿ ವಾಸಿಸಲು ಸಾಧ್ಯವಾಗುತ್ತಿಲ್ಲ ಎಂದು ಸ್ಥಳೀಯರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಿದ್ದಾರೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಉಪವಿಭಾಗಾಧಿಕಾರಿಗಳಿಗೆ ಮನವಿ ಮಾಡಿದ್ದು ಅವರು ಸ್ಪಂದಿಸುವ ಭರವಸೆಯನ್ನು ನೀಡಿದ್ದಾರೆ. ತಾತ್ಕಾಲಿಕ ಕೆಲಸವಲ್ಲ ಶಾಶ್ವತ ಪರಿಹಾರ ಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.