ಸುಳ್ಯ:ಜೆಸಿಐ ಸುಳ್ಯ ಪಯಸ್ವಿನಿ ಮತ್ತು ಪಯಸ್ವಿನಿ ಜೇಸಿಸ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಜೇಸಿಐ ಸಪ್ತಾಹ 2026 ‘ಸುಸ್ನಿಲ’ ಆ.30ರಿಂದ ಸೆ.15ರ ತನಕ ಆಯ್ದ ದಿನಗಳಲ್ಲಿ ನಡೆಯಲಿದೆ ಎಂದು ಜೇಸಿಐ ಸುಳ್ಯ ಪಯಸ್ವಿನಿ ಅಧ್ಯಕ್ಷೆ ಲತಾಶ್ರೀ ಸುಪ್ರೀತ್ ಮೋಂಟಡ್ಕ ತಿಳಿಸಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜೇಸಿಐ ಸಪ್ತಾಹ ಎಂಬುದು ಜೇಸಿಐ ಸಂಸ್ಥೆ ಪ್ರತಿವರ್ಷ ವಿಶ್ವದಾದ್ಯಂತ ಹಾಗೂ
ಭಾರತದಾದ್ಯಂತ ಸಂಭ್ರಮದಿಂದ ಆಚರಿಸುವ ಒಂದು ವಿಶೇಷ ವಾರ್ಷಿಕ ಕಾರ್ಯಕ್ರಮವಾಗಿದೆ. ಯುವಜನರಲ್ಲಿ ನಾಯಕತ್ವ ಗುಣಗಳನ್ನು ಬೆಳೆಸುವುದು, ವ್ಯಕ್ತಿತ್ವ ವಿಕಸನಕ್ಕೆ ಪ್ರೋತ್ಸಾಹ ನೀಡುವುದು ಹಾಗೂ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಜನೋಪಯೋಗಿ ಕಾರ್ಯಗಳ ಮೂಲಕ ಸಕಾರಾತ್ಮಕ ಬದಲಾವಣೆ ತರುವುದು ಜೇಸಿಐ ಸಪ್ತಾಹದ ಪ್ರಮುಖ ಉದ್ದೇಶವಾಗಿದೆ ಎಂದರು.
ಈ ವರ್ಷ ಪರಿಸರ ಸಂರಕ್ಷಣೆಯ ಅಂಗವಾಗಿ ಪ್ಲಾಸ್ಟಿಕ್ ಮುಕ್ತ ಅಭಿಯಾನ, ಸಿಂಗಲ್ ಯೂಸ್ ಪ್ಲಾಸ್ಟಿಕ್ ಬಾಟಲಿಗಳ ಬಳಕೆಯನ್ನು ತಡೆಗಟ್ಟಲು ಸ್ಟೇನ್ಲೆಸ್ ಸ್ಟೀಲ್ ವಾಟರ್ ಬಾಟಲ್ಗಳ ಬಳಕೆಗೆ ಉತ್ತೇಜನ,ನಾಯಕತ್ವ ತರಬೇತಿ, ವ್ಯಕ್ತಿತ್ವ ವಿಕಸನ ಶಿಬಿರ, ಆರೋಗ್ಯ ತಪಾಸಣಾ ಶಿಬಿರ, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳು, ಜಾಗೃತಿ ಜಾಥಾ, ರಕ್ತದಾನ ಶಿಬಿರ ಸೇರಿದಂತೆ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಆಗಸ್ಟ್ 30ರಂದು ಬೆಳಿಗ್ಗೆ 9.30ಕ್ಕೆ ಸುಳ್ಯ ಪಿಎಂಶ್ರೀ ಶಾಲೆಯಲ್ಲಿ ಸಪ್ತಾಹವನ್ನು ಜೇಸಿಐ ವಲಯ ಸಂಯೋಜಕ ಲೋಕೇಶ್ ಅಕ್ರಿಕಟ್ಟೆ ಉದ್ಘಾಟಿಸಲಿದ್ದಾರೆ.ಬಳಿಕ ಸುಳ್ಯ ತಾಲೂಕಿನ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ನಾಲ್ಕು ವಿಭಾಗಗಳಲ್ಲಿ ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗುತ್ತದೆ.ಅದೇ ದಿನ ಬೆಳಿಗ್ಗೆ 11.15ಕ್ಕೆ, ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಸಭಾಂಗಣದಲ್ಲಿ ಜೇಸಿಐ ಸೆನೆಟರ್ ಪೀಟರ್ ಅಂಟೋನಿ ಪಿಂಟೋ ವಿಶೇಷ ತರಬೇತಿ ಕಾರ್ಯಾಗಾರ ನಡೆಸಿಕೊಡಲ್ಲಿದ್ದಾರೆ.
ಸೆಪ್ಟೆಂಬರ್ 4ರಂದು ಬೃಹತ್ ರಕ್ತದಾನ ಶಿಬಿರ ಹಾಗು ಮಾನವ ಸೇವೆ ಮತ್ತು ಡಿಜಿಟಲ್ ಜಾಗೃತಿ ದಿನಾಚರಣೆ ಎಲಿಮಲೆ ಸರಕಾರಿ ಪ್ರೌಢಶಾಲೆಯಲ್ಲಿ ನಡೆಯಲಿದೆ. ಸೆ 5ರಂದು ನಂದಗೋಕುಲ ಮುದ್ದು ಕೃಷ್ಣ ಮತ್ತು ಯಶೋಧ ಕೃಷ್ಣ ಸ್ಪರ್ಧಾ ಮತ್ತು ಶಿಕ್ಷಕರ ದಿನಾಚರಣೆ ಪ್ರಯುಕ್ತ ಗುರುವಂದನಾ ಕಾರ್ಯಕ್ರಮ ಸುಳ್ಯದ ಅಂಜಲಿ ಸ್ಕೂಲ್ನಲ್ಲಿ ನಡೆಯಲಿದೆ. ಅದೇ ದಿನ ಸಂಜೆ ಹದಿಹರೆಯದವರ ಆರೋಗ್ಯ ಕಾರ್ಯಾಗಾರ ಸುಳ್ಯದ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯದಲ್ಲಿ ನಡೆಯಲಿದೆ.ಸೆ.6ರಂದು ‘ಸಸ್ಟೈನೇಬಲ್ ಶಿಪ್ಪಿಂಗ್’ ಡೇ ಮತ್ತು ಶಿಪ್ಪಿಂಗ್ ವಿತರಣಾ ಕಾರ್ಯಕ್ರಮ ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಸಭಾಂಗಣದಲ್ಲಿ ನಡೆಯಲಿದೆ.
ಸೆ.15 ಸಂಜೆ 6.30ಕ್ಕೆ ಜೇಸಿಐ ಸಪ್ತಾಹ ಸಮಾರೋಪ ಸಮಾರಂಭ, ಪ್ರಶಸ್ತಿ ಪ್ರದಾನ ಮತ್ತು ಕುಟುಂಬ ಸಮ್ಮಿಲನ ಕಾರ್ಯಕ್ರಮ ಅಂಬೆಟಡ್ಕದ ಆರೋಹಿ ಎನ್ಕ್ಲೇವ್ ಸಭಾಂಗಣದಲ್ಲಿ ನಡೆಯಲಿದೆ. ಜೇಸಿಐ ಸುಳ್ಯ ಪಯಸ್ವಿನಿಯಿಂದ ಕೊಡಮಾಡುವ ‘ಪಯಸ್ವಿನಿಶ್ರೀ’ ಪ್ರಶಸ್ತಿಯನ್ನು ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಲೀಲಾಧರ್ ಡಿ. ವಿ. ಯವರಿಗೆ, ಕಲಾಶ್ರೀ ಪ್ರಶಸ್ತಿಯನ್ನು ಗಾಯಕ ಶಶಿಧರ್ ಕೋಟೆಯವರಿಗೆ, ಕಮಲ ಪತ್ರ ಪುರಸ್ಕಾರವನ್ನು ಭೀಮರಾವ್ ವಾಷ್ಠರ್ ಅವರಿಗೆ,ಸಲ್ಯೂಟ್ ದಿ ಸೈಲೆಂಟ್ ಸ್ಟಾರ್ ಪ್ರಶಸ್ತಿಯನ್ನು
ಉಪತಹಶೀಲ್ದಾರ್ ಅವಿನ್ ರಂಗತ್ತಮಲೆ ಮತ್ತು ಮ್ಯಾರಥಾನ್ ಕ್ರೀಡಾಪಟು ವಿನಯ್ ನಾರಾಲು ಇವರಿಗೆ ಪ್ರದಾನ ಮಾಡಲಾಗುವುದು. ಬಳಿಕ ಜೆಸಿಐ ಸುಳ್ಯ ಪಯಸ್ವಿನಿಯ ಕುಟುಂಬ ಸಮ್ಮಿಲನ ಕಾರ್ಯಕ್ರಮವೂ ನಡೆಯಲಿದೆ ಎಂದು ಲತಾಶ್ರೀ ಸುಪ್ರೀತ್ ಮೋಂಟಡ್ಕ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜೇಸಿಐ ಕಾರ್ಯದರ್ಶಿ ತಾರಾ ಚೂಂತಾರು, ಸಪ್ತಾಹ ನಿರ್ದೇಶಕ ವಿನೋದ್ ಮೂಡಗದ್ದೆ, ಪ್ರಮುಖರಾದ ಮಹೇಶ್ ಮೇರ್ಕಜೆ, ಗುರುರಾಜ್ ಅಜ್ಜಾವರ, ಪ್ರಶಾಂತ್ ಅಂಬೆಕಲ್ಲು, ಸತ್ಯಶಾಂತಿ ತ್ಯಾಗಮೂರ್ತಿ, ಸುಪ್ರೀತ್ ಮೋಂಟಡ್ಕ, ಮಂಜುನಾಥ್ ಮಡ್ತಿಲ ಉಪಸ್ಥಿತರಿದ್ದರು.










