ದೋಹ: ಇಸ್ರೇಲ್ ಮತ್ತು ಇರಾನ್ ಮಧ್ಯೆಯ ಸಂಘರ್ಷದಲ್ಲಿ ಅಮೆರಿಕ ಎಂಟ್ರಿಯಾಗಿ ಇರಾನ್ ಮೇಲೆ ಬಾಂಬ್ ದಾಳಿ ನಡೆಸಿದ್ದ ಬೆನ್ನಲ್ಲೇ ಕತಾರ್ನಲ್ಲಿರುವ ಅಮೇರಿಕಾದ ವಾಯುನೆಲೆಯನ್ನು ಗುರಿಯಾಗಿಸಿಕೊಂಡು ಇರಾನ್ ಕ್ಷಿಪಣಿ ದಾಳಿ ನಡೆಸಿದೆ. ಅಮೆರಿಕದ ವಿರುದ್ಧ ಪ್ರತಿದಾಳಿ ಆರಂಭಿಸಿದ ಇರಾನ್ ಅಮೆರಿಕದ
ವಾಯು ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದೆ ಎಂದು ವರದಿಯಾಗಿದೆ. ಕತಾರ್ನ ದೋಹಾದಲ್ಲಿರುವ ಅಮೆರಿಕ ವಾಯುನೆಲೆ ಮೇಲೆ ಕ್ಷಿಪಣಿ ದಾಳಿಯಾಗಿದ್ದು ಈ ದಾಳಿ ಬಳಿಕ ಕತಾರ್ ತನ್ನ ವಾಯುಪ್ರದೇಶವನ್ನು ಬಂದ್ ಮಾಡಿದೆ. ಹೀಗಾಗಿ, ದೋಹಾಗೆ ತೆರಳುತ್ತಿದ್ದ ವಿಮಾನಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ಇರಾನಿನ ಪರಮಾಣು ಸೌಲಭ್ಯಗಳ ಮೇಲಿನ ಅಮೆರಿಕದ ದಾಳಿಗೆ ಶೀಘ್ರದಲ್ಲೇ ಪ್ರತೀಕಾರ ತೀರಿಸಿಕೊಳ್ಳಲಾಗುವುದು ಎಂಬ ಇರಾನಿನ ಎಚ್ಚರಿಕೆಗಳ ನಡುವೆ ಕತಾರ್ ತನ್ನ ವಾಯುಪ್ರದೇಶವನ್ನು ತಾತ್ಕಾಲಿಕವಾಗಿ ಮುಚ್ಚಿದ ಸ್ವಲ್ಪ ಸಮಯದ ನಂತರ ಈ ದಾಳಿ ನಡೆದಿದೆ. ಇಂದು ರಾತ್ರಿ ಕತಾರ್ನ ಆಕಾಶದಲ್ಲಿ ಸ್ಫೋಟಗಳು ಕಂಡುಬಂದವು. ಆದರೂ ಸಾವುನೋವುಗಳು ಅಥವಾ ಹಾನಿಯ ಬಗ್ಗೆ ವರದಿಯಾಗಿಲ್ಲ.