ಸುಳ್ಯ:ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ ದ.ಕ.ಜಿಲ್ಲೆ-2, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ದ.ಕ ಜಿಲ್ಲೆ 2 ಇದರ ಆಶ್ರಯದಲ್ಲಿ ಗಾಂಧಿ ಜಯಂತಿಯ ಆಚರಣೆಯ ಪ್ರಯುಕ್ತ ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಗಾಂಧಿ ಸ್ಮೃತಿ ಮತ್ತು ಬೃಹತ್ ಜನಜಾಗೃತಿ ಸಮಾವೇಶವು ಅ.5 ರಂದು ಸುಳ್ಯದ ಕೇರ್ಪಳ ಬೂಡು ಬಂಟರ ಸಮುದಾಯ ಭವನದಲ್ಲಿ ನಡೆಯಲಿದೆ ಎಂದು
ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಎನ್.ವಿಶ್ವನಾಥ ರೈ ಕಳಂಜ ಹೇಳಿದರು.ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಕಳೆದ 33 ವರ್ಷಗಳ ಹಿಂದೆ ದುಶ್ಚಟ ಮುಕ್ತ ಸಮಾಜಕ್ಕಾಗಿ ಸ್ಥಾಪಿತವಾದ ಜನಜಾಗೃತಿ ವೇದಿಕೆ ಪ್ರಸ್ತುತ 37 ಜಿಲ್ಲಾ ವೇದಿಕೆ, 16 ತಾಲೂಕು ವೇದಿಕೆಯ ಮೂಲಕ 7 ಸಾವಿರಕ್ಕೂ ಮಿಕ್ಕಿ ಸದಸ್ಯರನ್ನು ಹೊಂದಿದೆ. ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ವ್ಯಸನಮುಕ್ತ ಸಮಾಜದ ಕನಸು ಕಂಡವರು ಡಾ.ವೀರೇಂದ್ರ ಹೆಗ್ಗಡೆಯವರು.1997 ರಿಂದ 2139 ಮದ್ಯ ವರ್ಜನ ಶಿಬಿರಗಳನ್ನು ನಡೆಸಿ 1,40,983 ಜನರನ್ನು ವ್ಯಸನಮುಕ್ತಿ ಹೊಂದಲು ಅವಕಾಶ ಕಲ್ಪಿಸಿದೆ. ಅ.5 ರಂದು ನಡೆಯಲಿರುವ ಬೃಹತ್ ಸಮಾವೇಶದಲ್ಲಿ ಸುಮಾರು 3 ಸಾವಿರಕ್ಕೂ ಮಿಕ್ಕಿ ಮಂದಿ ಭಾಗವಹಿಸಲಿದ್ದಾರೆ ಎಂದು ವಿವರ ನೀಡಿದರು. ಸುಳ್ಯ ಕ್ಷೇತ್ರದ
ಶಾಸಕಿ ಭಾಗೀರಥಿ ಮುರುಳ್ಯ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಉಸ್ತುವಾರಿ ಸಚಿವರಾದ ಯು.ಟಿ ಖಾದರ್ ನವ ಜೀವನ ಸಮಿತಿ ಸದಸ್ಯರನ್ನು ಅಭಿನಂದಿಸಲಿದ್ದಾರೆ. ಸಂಸದ ಬ್ರಿಜೇಶ್ ಚೌಟರವರು ವಿವಿಧ ಅನುದಾನಗಳು ವಿತರಣೆ ಮಾಡಲಿದ್ದಾರೆ. ಜಿಲ್ಲಾ

ಜನ ಜಾಗೃತಿ ವೇದಿಕೆ ಅಧ್ಯಕ್ಷ ವಿಶ್ವನಾಥ ರೈ ಕಳಂಜ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ, ಯೋಜನೆಯ ಸಿ.ಇ.ಒ ಅನಿಲ್ ಕುಮಾರ್ ಎಸ್. ಎಸ್, ಜನಜಾಗೃತಿ ವೇದಿಕೆಯ ರಾಜ್ಯ ಸಂಘಟನಾಧ್ಯಕ್ಷ ನಟರಾಜ ಬಾದಾಮಿ, ಎ.ಒ.ಎಲ್.ಇ ಪ್ರದಾನ ಕಾರ್ಯದರ್ಶಿ ಅಕ್ಷಯ್ ಕೆ. ಸಿ, ಪುತ್ತೂರು ಪೋಲಿಸ್ ಉಪ ಅಧೀಕ್ಷಕ ಪ್ರಮೋದ್ ಕುಮಾರ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಯೋಜನೆಯ ಪ್ರಾದೇಶಿಕ ನಿರ್ದೇಶಕ ಬಾಬು ನಾಯ್ಕ್ ಮಾತನಾಡಿ ರಾಜ್ಯದಲ್ಲಿ ೩೧೦೦ ಕ್ಕೂ ಮಿಕ್ಕಿ ನವಜೀವನ ಸಮಿತಿ ಮೂಲಕ ಯೋಗ ಕ್ಷೇಮ ಚಿಂತನೆ ನಡೆಸಲಾಗುತ್ತಿದೆ. ಮದ್ಯ ಮುಕ್ತ ಊರು ನಮ್ಮದಾಗಬೇಕೆಂಬ ಆಶಯದೊಂದಿಗೆ ಹಕ್ಕೋತ್ತಾಯ ಮಂಡನೆ ಮಾಡಲಾಗುವುದು. ಈಗಾಗಲೇ ಶಾಲಾ ಕಾಲೇಜುಗಳಲ್ಲಿ ಜಾಗೃತಿ ಮೂಡಿಸುವ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಅ.೨ ರಿಂದ ೧೬ ರ ತನಕ ಜನಜಾಗೃತಿ ವೇದಿಕೆ ವತಿಯಿಂದ ದುಶ್ಚಟ ಮುಕ್ತ ಸಮಾಜ ನಿರ್ಮಾಣ ನಮ್ಮೆಲ್ಲರ ಹೊಣೆ ಎಂಬ ಧ್ಯೇಯ ವಾಕ್ಯದೊಂದಿಗೆ ಕಾರ್ಯಕ್ರಮ ಹಮ್ಮಿಕೊಳ್ಳಾಗುತ್ತಿದೆ ಎಂದು ತಿಳಿಸಿದರು.
ಅ.5 ರಂದು ಬೆಳಗ್ಗೆ ಸುಳ್ಳದ ಖಾಸಗಿ ಬಸ್ ನಿಲ್ದಾಣದಿಂದ ಚೆನ್ನಕೇಶವ ದೇವಸ್ಥಾನದ ರಥ ಬೀದಿ ಮಾರ್ಗವಾಗಿ ಕೇರ್ಪಳ ಬಂಟರ ಭವನಕ್ಕೆ ಆಕರ್ಷಕ ಬೃಹತ್ ಜನಜಾಗೃತಿ ಜಾಥಾವು ನವಜೀವನ ಸಮಿತಿಯ ಸದಸ್ಯರು, ಜ್ಞಾನವಿಕಾಸ ಮಹಿಳಾ ಕೇಂದ್ರದ ಸದಸ್ಯರು ,ಭಜಕರು, ತಾಲೂಕಿನ ಗಣ್ಯರು ಜನ ಜಾಗೃತಿ ವೇದಿಕೆ ಸದಸ್ಯರ ಸಮ್ಮುಖದಲ್ಲಿ ಆಕರ್ಷಕ ವೇಷಭೂಷಣಗಳು, ಸ್ಥಬ್ಧ ಚಿತ್ರ, ಚೆಂಡೆ ವಾದ್ಯಗಳೊಂದಿಗೆ ಜಾಥಾ ನಡೆಯಲಿದೆ ಎಂದು ಯೋಜನಾಧಿಕಾರಿ ಮಾಧವ ಗೌಡ ಹೇಳಿದರು.
ಸುದ್ದಿಗೋಷ್ಟಿಯಲ್ಲಿ ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷ ಎಂ.ವೆಂಕಪ್ಪ ಗೌಡ, ಜನಜಾಗೃತಿ ವೇದಿಕೆ ನಿಕಟ ಪೂರ್ವಾಧ್ಯಕ್ಷ ಪಿ.ಸಿ.ಜಯರಾಮ, ಒಕ್ಕೂಟದ ಅಧ್ಯಕ್ಷ ಸುರೇಶ್ ಕಣೆಮರಡ್ಕ, ಭಾಸ್ಕರ ಅಡ್ಕಾರ್, ಹರೀಶ್ ರೈ ಉಬರಡ್ಕ, ಮಲ್ಲೇಶ್ ಬೆಟ್ಟಂಪಾಡಿ, ಸುಬ್ಬಣ್ಣ ಕಾಂತಮಂಗಲ, ಬಾಲಸುಬ್ರಹ್ಮಣ್ಯ ಬೈತಡ್ಕ ಉಪಸ್ಥಿತರಿದ್ದರು.








