ಧರ್ಮಸ್ಥಳ: ಆಧುನಿಕ ಭಾರತ ಕುವೆಂಪುರವರು ಹೇಳಿದಂತೆ ಸರ್ವ ಜನಾಂಗದ ಶಾಂತಿಯ ತೋಟವಾಗಬೇಕು ಎಂದು ರಾಜ್ಯ ಗೃಹಸಚಿವ ಡಾ. ಜಿ. ಪರಮೇಶ್ವರ ಹೇಳಿದ್ದಾರೆ.ಅವರು ಶುಕ್ರವಾರ ಧರ್ಮ ಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ನಡೆದ ಸರ್ವಧರ್ಮ ಸಮ್ಮೇಳನದ 92ನೇ ಅಧಿವೇಶನವನ್ನು ಉದ್ಘಾಟಿಸಿ ಮಾತನಾಡಿದರು.
ಈ ದೇಶದಲ್ಲಿ ಪ್ರತಿಯೊಬ್ಬ ಪ್ರಜೆಯೂ ಶಾಂತಿಯಿಂದ ಬಾಳುವ ವಾತಾವರಣ ನಿರ್ಮಾಣವಾಗಬೇಕಾಗಿದೆ. ಡಿಗ್ರಿ,ಡಾಕ್ಟರೇಟ್ ಪದವಿ ಪಡೆದವರಿಗಿಂತಲೂ ಹೆಚ್ಚಾಗಿ ಶಾಂತಿಯಿಂದ ಬಾಳುವ ಜನರು ಈ ದೇಶಕ್ಕೆ
ಅಗತ್ಯವಿದೆ.ಈ ದೇಶದಲ್ಲಿ ಸಾಕಷ್ಟು ಧರ್ಮಗಳು ಹುಟ್ಟಿದೆ ಹೊರಗಿನಿಂದಲೂ ಬಂದು ಬೆಳೆದಿದೆ. ಇಂತಹ ಭಾರತದಲ್ಲಿ ಧರ್ಮ ಧರ್ಮ ಗಳ ಮಧ್ಯೆ ಸಮನ್ವಯತೆ ಸಹೋದರೆತೆ ಇರಬೇಕು. ಇಲ್ಲಿನ ಗ್ರಾಮೀಣಾಭಿವೃದ್ಧಿಯ ಕೆಲಸಗಳು ಮಹತ್ವದ್ದಾಗಿದೆ ಈ ಯೋಜನೆ ರಾಜ್ಯಾದ್ಯಂತ ಹಾಗೂ ದೇಶಕ್ಕೂ ವಿಸ್ತರಣೆ ಯಾಗಲಿ. ಚುನಾಯಿತ ಸರಕಾರ ಮಾಡದೆ ಇರುವ ಕೆಲಸವನ್ನು. ಶ್ರೀಕ್ಷೇತ್ರ. ಧರ್ಮಸ್ಥಳದಲ್ಲಿ ಉತ್ತಮವಾಗಿ ಮಾಡುತ್ತಾ ಬಂದಿರುವುದು ಶ್ಲಾಘನೀಯ ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಹಾಗೂ ರಾಜ್ಯ ಸಭಾ ಸದಸ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಸ್ವಾಗತ ಭಾಷಣ ಮಾಡುತ್ತಾ,ನಮ್ಮ ನಾಡಿನಲ್ಲಿರುವ ಭಿನ್ನ – ಭಿನ್ನ ಧರ್ಮಗಳ ನೈಜತೆ, ತತ್ವ, ಸಿದ್ಧಾಂತ ಮತ್ತು ಮರ್ಮಗಳೆಲ್ಲ ಒಂದೇ ಆಗಿದೆ. ಒಂದು ಧರ್ಮದ ವಿಶೇಷತೆಯನ್ನು ಇನ್ನೊಂದು ಧರ್ಮದವರು ಅರಿತುಕೊಂಡಾಗ ಮಾತ್ರ ಸಮಾಜದಲ್ಲಿ ಶಾಂತಿ ನೆಮ್ಮದಿ ನೆಲೆಸಲು ಸಾಧ್ಯ. ಧರ್ಮವನ್ನು ವಿಶಾಲ ಅರ್ಥದಲ್ಲಿ ಕಾಣುವ ದೃಷ್ಟಿಯನ್ನು ನಾವೆಲ್ಲ ಬೆಳೆಸಿಕೊಳ್ಳಬೇಕಾಗಿದೆ. ಇಂಥಾ ಸಮ್ಮೇಳನಗಳ ಮೂಲ ಉದ್ದೇಶವೇ ಅದಾಗಿದೆ ಎಂದರು. ಭಾರತದಲ್ಲಿ ಇರುವಷ್ಟು ಧರ್ಮಗಳು, ಮತ, ಪಂಥಗಳು ಮತ್ತು ಅವುಗಳ ಆಚರಣೆಗಳು ಬಹುಶಃ ವಿಶ್ವದ ಯಾವ ದೇಶದಲ್ಲೂ ಇರಲಾರದು ಎಂದೆನಿಸುತ್ತದೆ. ನಮ್ಮ ದೇಶದ ಉತ್ತರದಿಂದ ದಕ್ಷಿಣದವರೆಗೆ, ಪೂರ್ವದಿಂದ ಪಶ್ಚಿಮದವರೆಗೆ ಸಾಗಿದಾಗ ಪ್ರತಿ ಹೆಜ್ಜೆ ಹೆಜ್ಜೆಗೂ ವಿವಿಧತೆಯನ್ನು ಕಾಣಬಹುದಾಗಿದೆ. ವಿವಿಧತೆಯಲ್ಲೂ ಏಕತೆಯನ್ನು ಜಗತ್ತಿಗೆ ಮಾದರಿ ಎಂಬಂತೆ ಸಾರಿದ ಮತ್ತು ಈಗಲೂ ಸಾರುತ್ತಿರುವ ರಾಷ್ಟ್ರ ನಮ್ಮದು ಎಂದರು.
ಶ್ರೀ ಕೈಲಾಸ ಆಶ್ರಮ ಮಹಾಸಂಸ್ಥಾನ. ರಾಜರಾಜೇಶ್ವರೀ ನಗರ, ಬೆಂಗಳೂರಿನ ಶ್ರೀ ಶ್ರೀ ಜಯೇಂದ್ರ ಪುರಿ ಮಹಾಸ್ವಾಮಿಜಿಯವರು ಸಮಾರಂಭದ ಆಧ್ಯಕ್ಷತೆ ವಹಿಸಿ ಮಾತನಾಡಿ, ಮಾನವ ಮಾನವರನ್ನು ದೂರ ಮಾಡುವ ಧರ್ಮ ಇದ್ದರೆ.ಅಂತಹ ಧರ್ಮ ಪರಿಷ್ಕೃರಣೆಗೊಳ್ಳಬೇಕಾಗಿದೆ.ಕಾಲ ಕಾಲಕ್ಕೆ ಧರ್ಮ ಗಳಲ್ಲೂ ಪರಿಷ್ಕರಣೆ ಗೊಳ್ಳಬೇಕಾಗಿದೆ. ಪರಮಾತ್ಮ ಜಗತ್ತಿನ ಎಲ್ಲರಿಗೂ ಸೇರಿದವನು ಎನ್ನುವುದನ್ನು ನಾವು ಅರಿತುಕೊಳ್ಳಬೇಕಾಗಿದೆ
ಎಂದರು.
ಶ್ರೀಕ್ಷೇತ್ರ ಧರ್ಮಸ್ಥಳದ ಮಂಜೂಷಾ ವಸ್ತುಸಂಗ್ರಹಾಲಯಕ್ಕೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಮುಖ್ಯ ತೀರ್ಪಗಾರ ಡಾ.ಪ್ರದೀಪ್ ಭಾರದ್ವಾಜ್ ಪ್ರಶಸ್ತಿ ಫಲಕವನ್ನು ಗೌರವ ಪ್ರದಾನ ಮಾಡಿದರು.
ಸಮಾರಂಭದಲ್ಲಿ ಸಂಶೋಧಕ ಡಾ ಜಿ. ಬಿ. ಹರೀಶ,ನಿವೃತ್ತ ಪ್ರಾಂಶುಪಾಲ ಡಾ.ಜೋಸೆಫ್ ಎನ್. ಎಮ್,ಬಿಜಾಪುರದ ಮೆಹತಾಬ ಇಬ್ರಾಹಿಮ್ ಸಾಬ ಕಾಗವಾಡ (ರಾಷ್ಟ್ರೀಯ ಬಸವ ಭೂಷಣ ಪ್ರಶಸ್ತಿ ಪುರಸ್ಕೃತ ಶಿಕ್ಷಕ) ಉಪನ್ಯಾಸ ನೀಡಿದರು.
ಸ್ವಾಗತ ಸಮಿತಿ ಉಪಾಧ್ಯಕ್ಷ ಡಿ. ಸುರೇಂದ್ರ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರುಡ್ ಸೆಟ್ನನಿರ್ದೇಶಕ ಅಜಯ್ ವಂದಿಸಿದರು.ಡಾ. ಶ್ರೀಧರ ಭಟ್ ಸಭಾ ಕಾರ್ಯಕ್ರಮ ನಿರೂಪಿಸಿದರು.