ಮಂಗಳೂರು:ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟರ ಅವರು ಹಲವು ಕೇಂದ್ರ ಸಚಿವರುಗಳನ್ನು ಭೇಟಿ ಮಾಡಿ ದಕ್ಷಿಣ ಕನ್ನಡ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಅನುದಾನ ನೀಡುವಂತೆ ಮನವಿ ಮಾಡಿದರು.
ಕೇಂದ್ರ ಬಂದರು, ಶಿಪ್ಪಿಂಗ್ ಮತ್ತು ಜಲಮಾರ್ಗಗಳ ಸಚಿವರಾದ ಸರ್ಬಾನಂದ ಸೋನೋವಾಲ್ ಅವರನ್ನು ಅವರ ದೆಹಲಿಯ ನಿವಾಸದಲ್ಲಿ
ಭೇಟಿಯಾಗಿ ಎನ್ಎಮ್ಪಿಎ ಯ ಅಭಿವೃದ್ಧಿಯ ದೃಷ್ಟಿಯಿಂದ ಇರುವ ಸಾಧ್ಯತೆಗಳು, ಸಾಗರ್ಮಾಲಾ ಯೋಜನೆ ಅಡಿಯಲ್ಲಿ ಲಕ್ಷದ್ವೀಪಕ್ಕೆ ತೆರಳುವ ಹಡಗುಗಳಿಗೆ ಮೀಸಲಾದ ಜೆಟ್ಟಿ ಮತ್ತು ಕ್ರೂಸ್ ಟರ್ಮಿನಲ್ ನಿರ್ಮಾಣದ ಕುರಿತು ಚರ್ಚೆ ನಡೆಸಿದರು.
ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರಾದ ವಿ. ಸೋಮಣ್ಣ ಅವರನ್ನು ದೆಹಲಿಯ ಸಚಿವಾಲಯದಲ್ಲಿ ಭೇಟಿಯಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ರೈಲ್ವೆ ಯೋಜನೆಗಳ ಪ್ರಗತಿ, ಸಮಸ್ಯೆ ಮತ್ತು ಸಾಧ್ಯತೆಗಳ ಕುರಿತು ಚರ್ಚಿಸಿದ್ದಾರೆ.
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರಾದ ಶ್ರೀ ನಿತಿನ್ ಗಡ್ಕರಿ ಅವರನ್ನು ಅವರ ದೆಹಲಿಯ ನಿವಾಸದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿಗೆ ಸಂಬಂಧಪಟ್ಟ ಕಾಮಗಾರಿಗಳ ಕುರಿತು ಚರ್ಚಿಸಿದ್ದು,ಶಿರಾಡಿ ಘಾಟಿಯ ಮೂಲಕ ಹಾದುಹೋಗುವ ಮಂಗಳೂರು – ಬೆಂಗಳೂರು ನಡುವಿನ ರಸ್ತೆ ಪ್ರಯಾಣದ ಅವಧಿಯನ್ನು ಕಡಿಮೆ ಮತ್ತು ಸುಗಮಗೊಳಿಸಲು ಕೈಗೊಳ್ಳಬಹುದಾದ ಯೋಜನೆಗಳ ಕುರಿತು ಅಧ್ಯಯನ ನಡೆಸುವಂತೆ ಸಂಸದರು ಕೇಳಿಕೊಂಡಿದ್ದಾರೆ.
ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವರಾದ ಹರ್ದೀಪ್ ಸಿಂಗ್ ಪುರಿ ಅವರನ್ನು ದೆಹಲಿಯ ಸಚಿವಾಲಯದಲ್ಲಿ ಭೇಟಿಯಾಗಿ ದಕ್ಷಿಣ ಕನ್ನಡದಲ್ಲಿ ಪೆಟ್ರೋಲಿಯಂ ಇಲಾಖೆಗೆ ಸಂಬಂಧಿಸಿದ ಮತ್ತು ಜಿಲ್ಲೆಯ ಅಭಿವೃದ್ಧಿ ವಿಷಯಗಳಿಗೆ ಸ್ಪಂದಿಸುವಂತೆ ಕೇಳಿಕೊಂಡರು ಹಾಗೂ ಗ್ರೀನ್ ಹೈಡ್ರೋಜನ್ ಘಟಕಗಳನ್ನು ಮಂಗಳೂರಿನ ವಿಶೇಷ ಆರ್ಥಿಕ ವಲಯದಲ್ಲಿ ಸ್ಥಾಪಿಸುವ ಸಾಧ್ಯತೆಗಳ ಬಗ್ಗೆ ಹಾಗೂ ಅದರಿಂದ ಸೃಷ್ಟಿಯಾಗುವ ಉದ್ಯೋಗಗಳನ್ನು ಸ್ಥಳೀಯರಿಗೆ ನೀಡುವಂತೆ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಮನವಿ ಮಾಡಿದರು.
ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವರಾದ ಶ್ರೀ ಹೆಚ್.ಡಿ ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿಗೆ ಮಾರ್ಗದರ್ಶನ ಮತ್ತು ಸಹಕಾರವನ್ನು ನೀಡುವಂತೆ ಮನವಿ ಮಾಡಿದರು.