ಸುಳ್ಯ: ಬಿಜೆಪಿ ಮಂಡಲ ಅಧ್ಯಕ್ಷರ ನೆಮಕಾತಿ ವಿಚಾರದಲ್ಲಿ ಉಂಟಾದ ಅಸಮಾಧಾನದ ಹಿನ್ನಲೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ನೇತೃತ್ವದಲ್ಲಿ ಸುಳ್ಯದಲ್ಲಿ ನಡೆದ ಮ್ಯಾರಥಾನ್ ಸಭೆ ಮುಕ್ತಾಯಗೊಂಡಿದೆ.
ಎಲ್ಲಾ ವಿಷಯಗಳ ಬಗ್ಗೆ ಚರ್ಚೆ ನಡೆದಿದೆ. ಎಲ್ಲವನ್ನೂ ಸರಿಪಡಿಸಿಕೊಂಡು ಹೋಗುತ್ತೇವೆ ಎಂದು ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಹಾಗೂ ಸುಳ್ಯ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ. ಬಿಜೆಪಿ ಸುಳ್ಯ ಮಂಡಲ ಸಮಿತಿ ಅಧ್ಯಕ್ಷರ ನೇಮಕ ವಿಷಯದಲ್ಲಿ ಉಂಟಾದ ಅಸಮಾಧಾನದ ಹಿನ್ನಲೆಯಲ್ಲಿ ಸುಳ್ಯಕ್ಕೆ ಆಗಮಿಸಿ ಸುಳ್ಯ ಬಿಜೆಪಿ ಕೋರ್ ಕಮಿಟಿ ಜೊತೆ ಜಿಲ್ಲಾಧ್ಯಕ್ಷರು ಹಾಗೂ
ಮುಖಂಡರು ಸುದೀರ್ಘ ಮಾತುಕತೆ ನಡೆಸಿದ್ದಾರೆ. ಸಭೆಯ ಬಳಿಕ ನಾಯಕರು ಯಾವುದೇ ನಿರ್ಧಾರ ಪ್ರಕಟಿಸಲಿಲ್ಲ. ನಮ್ಮಲ್ಲಿ ಯಾವುದೇ ಅಸಮಾಧಾನ, ಗೊಂದಲ ಇಲ್ಲಾ, ಎಲ್ಲಾ ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದೇವೆ ಎಲ್ಲವನ್ನೂ ಸರಿಪಡಿಸಿಕೊಂಡು ಹೋಗುತ್ತೇವೆ ಎಂದಷ್ಟೇ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.
ಇಂದು ದಿನ ಪೂರ್ತಿ ಮ್ಯಾರಥಾನ್ ಚರ್ಚೆ ನಡೆದಿದೆ. ಕೋರ್ ಕಮಿಟಿ ಸದಸ್ಯರು ಹಾಗೂ ಜಿಲ್ಲಾ ಮುಖಂಡರು ಮಧ್ಯೆ ತೀವ್ರ ಚರ್ಚೆ ನಡೆಯಿತು. ಕೋರ್ ಕಮಿಟಿ ಸದಸ್ಯರು ತಮ್ಮ ನಿಲುವಿನಲ್ಲಿ ಪಟ್ಟು ಬಿಡದೆ ಚರ್ಚೆ ನಡೆಸಿದರು. ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯ ಬಗ್ಗೆ ಕೋರ್ ಕಮಿಟಿ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಪಕ್ಷದಲ್ಲಿ ಪ್ರಜಾಪ್ರಭುತ್ವ ನೆಲೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಬೇಕು.ಕೋರ್ ಕಮಿಟಿ, ಮಂಡಲ ಸಮಿತಿ ಹಾಗೂ ಕಾರ್ಯಕರ್ತರ ತೀರ್ಮಾನಕ್ಕೆ ಬೆಲೆ ನೀಡಬೇಕು ಎಂದು ಕೋರ್ ಸಮಿತಿ ಸದಸ್ಯರು ಜಿಲ್ಲಾ ಪ್ರಮುಖರಿಗೆ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ. ಕೋರ್ ಕಮಿಟಿ ಸದಸ್ಯರು ತಮ್ಮ ನಿಲುವನ್ನು ತಿಳಿಸಿದ್ದಾರೆ. ಜಿಲ್ಲಾ ಸಮಿತಿ ಮುಖಂಡರು ಸುಳ್ಯದ ಮುಖಂಡರ ಅಹವಾಲನ್ನು ಆಲಿಸಿ ಸಮಾಧಾನಪಡಿಸಿದ್ದಾರೆ. ಎಲ್ಲರೂ ಒಟ್ಟಾಗಿ ಪಕ್ಷ ಸಂಘಟನೆಗಾಗಿ ದುಡಿಯುವಂತೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.ಸಂಜೆಯ ತನಕ ಮುಂದುವರಿದ ಚರ್ಚೆಯಲ್ಲಿ ಮಧ್ಯಾಹ್ನದ ಬಳಿಕ ನೂತನ ಅಧ್ಯಕ್ಷ ವೆಂಕಟ್ ವಳಲಂಬೆ ಭಾಗವಹಿಸಿದ್ದರು.ಎಲ್ಲಾ ಸಮಸ್ಯೆಗಳನ್ನು ಸರಿಪಡಿಸಿಕೊಂಡು ಒಟ್ಟಾಗಿ ಕೆಲಸ ಮಾಡಲಾಗುವುದು ಎಂದು ಅಧ್ಯಕ್ಷ ವೆಂಕಟ್ ವಳಲಂಬೆ ಹೇಳಿದರು.
ಬಿಜೆಪಿ ವಿಭಾಗ ಪ್ರಭಾರಿ ಉದಯಕುಮಾರ್ ಶೆಟ್ಟಿ,
ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಜಿಲ್ಲಾ ಪ್ರಭಾರಿ ಗೋಪಾಲಕೃಷ್ಣ ಹೇರಳೆ ಕೋರ್ ಕಮಿಟಿ ಸದಸ್ಯರಾದ ಹರೀಶ್ ಕಂಜಿಪಿಲಿ, ಎಸ್.ಎನ್.ಮನ್ಮಥ, ಎ.ವಿ.ತೀರ್ಥರಾಮ, ವೆಂಕಟ್ ದಂಬೆಕೋಡಿ, ಸುಬೋದ್ ಶೆಟ್ಟಿ ಮೇನಾಲ, ರಾಕೇಶ್ ರೈ ಕೆಡೆಂಜಿ, ಕೃಷ್ಣ ಶೆಟ್ಟಿ ಕಡಬ ಭಾಗವಹಿಸಿದ್ದರು.
ವೆಂಕಟ್ ವಳಲಂಬೆಯವರನ್ನು ಸುಳ್ಯ ಬಿಜೆಪಿ ಮಂಡಲ ಅಧ್ಯಕ್ಷರಾಗಿ ನೇಮಕಗೊಳಿಸಿದ ಹಿನ್ನಲೆಯಲ್ಲಿ ಸುಳ್ಯ ಬಿಜೆಪಿಯಲ್ಲಿ ಅಸಮಾಧಾನ ಉಲ್ಬಣಗೊಂಡು ನಾಯಕರು ಸಭೆ ನಡೆಸಿ ಅಸಹಕಾರ ಘೋಷಣೆ ಮಾಡಿದ್ದರು. ಕಾರ್ಯಕರ್ತರು ಕಚೇರಿಗೆ ಬೀಗ ಜಡಿದಿದ್ದರು. ನಿನ್ನೆ ನಡೆದ ಬಿಜೆಪಿ ಜಿಲ್ಲಾ ಸಮಿತಿ ಸಭೆಯಲ್ಲಿ ಈ ವಿಷಯ ಪ್ರಸ್ತಾಪ ಆಗಿ. ಜಿಲ್ಲಾಧ್ಯಕ್ಷರು ಹಾಗೂ ಪ್ರಮುಖರು ಬಂದು ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಮಾತುಕತೆ ನಡೆಸುವುದಾಗಿ ತೀರ್ಮಾನಿಸಲಾಗಿತ್ತು. ಈ ಹಿನ್ನಲೆಯಲ್ಲಿ ಜಿಲ್ಲಾಧ್ಯಕ್ಷರು ಹಾಗೂ ಜಿಲ್ಲಾ ಪ್ರಮುಖರು ಸುಳ್ಯಕ್ಕೆ ಆಗಮಿಸಿ ಪ್ರಮುಖರೊಂದಿಗೆ ಚರ್ಚೆ ನಡೆಸಿದ್ದಾರೆ.