ಚೆಂಬು:ಭಾಷೆ ಮತ್ತು ಸಂಸ್ಕೃತಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಒಂದನ್ನು ಬಿಟ್ಟು ಇನ್ನೊಂದು ಇರಲು ಸಾಧ್ಯವಿಲ್ಲ. ಆದುದರಿಂದ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿ, ಬೆಳೆಸುವ ಮಹತ್ತರವಾದ ಜವಾಬ್ದಾರಿ ಇದೆ ಎಂದು ಸಾಹಿತಿ, ಲೇಖಕಿ ಲೀಲಾ ದಾಮೋದರ ಕುಂದಲ್ಪಾಡಿ ಹೇಳಿದ್ದಾರೆ.ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ವತಿಯಿಂದ
ಚೆಂಬು ಗ್ರಾಮದ ಕೂಡಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ 3ನೇ ಅರೆಭಾಷೆ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅರೆಭಾಷೆಗೆ 3ನೇ ಭಾಷೆಯಾಗಿ ಕಲಿಯುವ ಅವಕಾಶ ದೊರಕಬೇಕು, ಸರ್ಟಿಫಿಕೇಟ್, ಡಿಪ್ಲೊಮಾ ಕೋರ್ಸ್ ಆಗಿ ಕಲಿಯುವ ಅವಕಾಶ ಸಿಗುವ ಪ್ರಯತ್ನ ನಡೆಯಬೇಕು ಎಂದು ಆಶಿಸಿದ ಅವರು ಅರೆಭಾಷೆಗೆ ಭಾಷಾ ಅಲ್ಪ ಸಂಖ್ಯಾತರ ಸ್ಥಾನಮಾನಕ್ಕಾಗಿ ಬೇಡಿಕೆ ಸಲ್ಲಿಬೇಕು ಎಂದರು.’ಅರೆಭಾಷೆ ಸಂಸ್ಕೃತಿ ಗ್ರಾಮ’ ಎಂಬ
ಕನಸು ಶೀಘ್ರ ನನಸಾಗಲಿ ಎಂದು ಆಶಿಸಿದ ಅವರು ಜಾಗತೀಕರಣದ ಕಾಲದಲ್ಲಿ ಎಲ್ಲ ಭಾಷೆಗಳು ಅಪಾಯದಲ್ಲಿದೆ. ಇದನ್ನು ತಡೆಯಲು ಅರೆಭಾಷೆ ಪುಸ್ತಕಗಳ ಡಿಜಿಟಲೀಕರಣ ಆಗಬೇಕು,ಅರೆಭಾಷೆ ಪುಸ್ತಕ ಹೆಚ್ಚು ರಚನೆಯಾಗಬೇಕು.ಎಲ್ಲರೂ ಅರೆಭಾಷೆ ಪುಸ್ತಕ ಖರೀದಿಸಿ ಓದಬೇಕು, ಮಕ್ಕಳಿಂದ ಹಿಡಿದು ಎಲ್ಲರೂ ಅರೆಭಾಷೆ ಮಾತನಾಡುವಂತಾಗಬೇಕು, ಎಂದು ಅವರು ಆಶಯ ವ್ಯಕ್ತಪಡಿಸಿದರು.

















