ಚೆಂಬು:ಕರ್ನಾಟಕ ರಾಜ್ಯವು ಹಲವಾರು ವಿಶಿಷ್ಟ ಭಾಷೆ, ಸಂಸ್ಕೃತಿ, ಪರಂಪರೆಗಳ ನೆಲೆವೀಡು. ಈ ಭಾಷೆ, ಸಂಸ್ಕೃತಿ, ಪರಂಪರೆಗಳನ್ನು ಉಳಿಸಿ ಬೆಳೆಸಲು ಸರಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಹೇಳಿದ್ದಾರೆ. ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ವತಿಯಿಂದ
ಚೆಂಬು ಗ್ರಾಮದ ಕೂಡಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ 3ನೇ ಅರೆಭಾಷೆ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು. ಭಾಷೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಜವಾಬ್ದಾರಿ. ಅರೆಭಾಷೆ, ಸಂಸ್ಕೃತಿಯನ್ನು ಉಳಿಸಲು ಅರೆಭಾಷೆ ಅಕಾಡೆಮಿಯು ಎಲ್ಲರನ್ನು ಒಳಗೊಂಡಂತೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಭಾಷೆಯನ್ನು ಉಳಿಸಲು ಇನ್ನಷ್ಟು ಕೆಲಸ ಮಾಡಬೇಕಾಗಿದೆ. ಸಾಹಿತ್ಯ ಪುಸ್ತಕ, ಇತಿಹಾಸ ರಚನೆಗೆ ಪ್ರೋತ್ಸಾಹ ನೀಡಬೇಕು, ಅಧ್ಯಯನಕ್ಕೆ ಒತ್ತು ನೀಡಬೇಕು ಎಂದು ಸಲಹೆ ನೀಡಿದರು. ಭಾಷೆ, ಸಾಹಿತ್ಯ ಉಳಿದರೆ ಮಾತ್ರ ಜನಾಂಗ ಉಳಿಯುತ್ತದೆ ಎಂದ ಅವರು

ನಮ್ಮ ನಾಡಿನ ಎಲ್ಲಾ ಭಾಷೆ, ಸಂಸ್ಕೃತಿ ಬೆಳವಣಿಗೆಗೆ ಎಲ್ಲರು ಒಟ್ಟಾಗಿ ಕೆಲಸ ಮಾಡಬೇಕು. ವಿವಿಧತೆಯಲ್ಲಿ ಏಕತೆಯನ್ನು ಕಾಪಾಡಿಕೊಳ್ಳಬೇಕು ಎಂದು ಹೇಳಿದರು.ದೀಪ ಬೆಳಗಿಸಿ, ಭತ್ತದ ಪೈರನ್ನು ಪಡಿಮಂಚಕ್ಕೆ ಬಡಿದು ಭತ್ತದ ಪೈರನ್ನು ಬೇರ್ಪಡಿಸುವ ಮೂಲಕ ಸಮ್ಮೇಳನವನ್ನು ಉದ್ಘಾಟಿಸಲಾಯಿತು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ ಅಕಾಡೆಮಿ ಪ್ರಕಟಿತ ಪುಸ್ತಕಗಳನ್ನು ಬಿಡುಗಡೆ ಮಾಡಿ ಮಾತನಾಡಿ’ ಭಾಷೆಗಳ ಪತನ ಈ ಶತಮಾನದ ದೊಡ್ಡ ಆತಂಕ ಎಂದು ಹೇಳಿದರು. ಭಾಷೆ ಜಗತ್ತಿನ ಅಮೂಲ್ಯವಾದ ಸ್ವತ್ತು, ಭಾಷೆ ನಾಶವಾದರೆ ಜಗತ್ತಿನ ನಾಗರಿಕತೆಯೇ ನಾಶವಾದಂತೆ. ಸಂಸ್ಕೃತಿ ಸೃಜನಶೀಲವಾಗಿದ್ದರೆ ಭಾಷೆಯ ಬೆಳವಣಿಗೆ ಸಾಧ್ಯ ಎಂದ ಅವರು ಭಾರತ ಭಾಷೆಗಳ ರಂಗೋಲಿ. ಆ ರಂಗೋಲಿಯ ಬಣ್ಣವಾದ ಪ್ರತಿ ಭಾಷೆಯನ್ನು ಉಳಿಸಬೇಕಾಗಿದೆ ಎಂದು ಹೇಳಿದರು.ಸಾಹಿತಿ ಮತ್ತು

ಲೇಖಕರಾದ ಲೀಲಾ ದಾಮೋದರ ಕುಂದಲ್ಪಾಡಿ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಜಲಾನಯನ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ನಿರ್ದೇಶಕ ಸೂರಜ್ ಹೊಸೂರು ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು.ಮುಖ್ಯ ಅತಿಥಿಗಳಾಗಿ ಹಿಂದಿನ ಸಮ್ಮೇಳನಾಧ್ಯಕ್ಷರು ಮತ್ತು ಕವಿ ಭವಾನಿಶಂಕರ ಹೊದ್ದೆಟ್ಟಿ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಕೊಲ್ಯದ ಗಿರೀಶ್, ಕೊಡಗು ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಅನಂತ್ ಎನ್.ಸಿ ಊರುಬೈಲು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೂಡಡ್ಕ ಇದರ ಮುಖ್ಯ ಶಿಕ್ಷಕಿ ಜಯಂತಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು

ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಜಿ,ಸದಸ್ಯರಾದ ಡಾ.ಎನ್.ಎ. ಜ್ಞಾನೇಶ್, ಚಂದ್ರಶೇಖರ ಪೇರಾಲು, ಲೋಕೇಶ್ ಊರುಬೈಲು, ಚಂದ್ರಾವತಿ ಬಡ್ಡಡ್ಕ, ಲತಾ ಪ್ರಸಾದ್ ಕುದ್ಪಾಜೆ, ಪಿ.ಎಸ್. ಕಾರ್ಯಪ್ಪ, ವಿನೋದ್ ಮೂಡಗದ್ದೆ, ಕುದುಪಜೆ ಕೆ.ಪ್ರಕಾಶ್, ಮೋಹನ್ ಪೊನ್ನಚ್ಚನ, ಗೋಪಾಲ ಪೆರಾಜೆ, ಸಂದೀಪ್ ಪೂಳಕಂಡ, ಸೂದನ ಎಸ್.ಈರಪ್ಪ, ರಿಜಿಸ್ಟ್ರಾರ್ ಚಿನ್ನಸ್ವಾಮಿ ವೇದಿಕೆಯಲ್ಲಿ
ಉಪಸ್ಥಿತರಿದ್ದರು.
ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಸದಾನಂದ ಮಾವಜಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸದಸ್ಯ ಸಂಚಾಲಕ ಲೋಕೇಶ್ ಊರುಬೈಲು ವಂದಿಸಿದರು. ರಮೇಶ್ ನಂಬಿಯಾರ್ ಕಾರ್ಯಕ್ರಮ ನಿರೂಪಿಸಿದರು.

















