ಸುಳ್ಯ:ಸುಳ್ಯ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ
ಅನುಷ್ಠಾನಗೊಳ್ಳುತ್ತಿರುವ ಅಮೃತ್-2 ಕುಡಿಯುವ ನೀರಿನ ಯೋಜನೆಯು ಕಳೆದ ಒಂದು ವರ್ಷದಿಂದ ಕುಂಟುತ್ತಿದ್ದು, ರಸ್ತೆ ಅಗೆದು ಹಾಕಿ ನಗರದಲ್ಲಿ ಸಮಸ್ಯೆ ಸೃಷ್ಠಿಯಾಗಿದೆ ಎಂದು ಕಾಂಗ್ರೆಸ್ ಬೆಂಬಲಿತ ನಗರ ಪಂಚಾಯತ್ ಸದಸ್ಯರು ಸ್ಪೀಕರ್ ಯು.ಟಿ.ಖಾದರ್ ಅವರಿಗೆ ದೂರು ನೀಡಿದ್ದಾರೆ. ಇಂದು ಸುಳ್ಯಕ್ಕೆ ಆಗಮಿಸಿದ ಯು.ಟಿ.ಖಾದರ್ ಅವರಿಗೆ ನಗರ ಪಂಚಾಯತ್ ಸದಸ್ಯ ಎಂ.ವೆಂಕಪ್ಪ ಗೌಡ ನೇತೃತ್ವದಲ್ಲಿ ದೂರು ನೀಡಲಾಯಿತು. ಪಟ್ಟಣದ ಕುಡಿಯುವ ನೀರಿನ ಅವಶ್ಯಕತೆಗಾಗಿ
58 ಕೋಟಿ ಮೊತ್ತದ ಯೋಜನೆಯ ಕಾಮಗಾರಿ ಪ್ರಾರಂಭವಾಗಿ ಸುಮಾರು ಒಂದು ವರ್ಷಕ್ಕಿಂತಲೂ ಹೆಚ್ಚು ಸಮಯ ಕಳೆದಿದೆ. ಆದರೆ ಕಾಮಗಾರಿಯಲ್ಲಿ ಹೆಚ್ಚಿನ ಪ್ರಗತಿ ಕಂಡು ಬಂದಿರುವುದಿಲ್ಲ. ಕಾಮಗಾರಿಯೂ ಸಮರ್ಪಕವಾಗಿ ಮಾಡದೆ ಒಂದೊಂದು ನಮೂನೆಯ ಪೈಪುಗಳನ್ನು ಅಳವಡಿಸಲು ಒಂದೊಂದು ಬಾರಿ ಕಾಂಕ್ರಿಟ್ ರಸ್ತೆಯನ್ನು ಅಗೆದು ತಿಂಗಳಾನುಗಟ್ಟಳೆ ಅದನ್ನು ಯಥಾಸ್ಥಿತಿಗೆ ತಾರದೆ ಇದ್ದು, ಅದರಿಂದ ದಿನಕ್ಕೊಂದು ವಾಹನವು ರಸ್ತೆ ಆಗೆತದ ಗುಂಡಿಯೊಳಗೆ ಬಿದ್ದು ರಸ್ತೆ ತಡೆಯಾಗುತ್ತಿರುವುದು ಸರ್ವೆ ಸಾಮಾನ್ಯವಾಗಿರುತ್ತದೆ.
ಈ ಬಗ್ಗೆ ನಾವು ನಗರ ಪಂಚಾಯತ್ ಸಭೆಗೆ ಸಂಬಂಧಪಟ್ಟ ಅಧಿಕಾರಿಗಳನ್ನು ಕರೆಸಿ ಅಗೆದ ರಸ್ತೆಯನ್ನು ಶೀಘ್ರ ಯಥಾಸ್ಥಿತಿಗೆ ತರಬೇಕೆಂದು ಸೂಚಿಸಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಆ ಬಗ್ಗೆ ಯಾವುದೇ ಕ್ರಮವನ್ನು ತೆಗೆದುಕೊಳ್ಳುತ್ತಿಲ್ಲ. ಇದರಿಂದಾಗಿ ಸುಳ್ಯ ಮುಖ್ಯ ಪೇಟೆಯ ಗಾಂಧಿನಗರದಿಂದ ಆಲೆಟ್ಟಿ ಮೂಲಕ ಕೇರಳಕ್ಕೆ ಹಾದು ಹೋಗುವ ಅಂತರ್ ರಾಜ್ಯ ರಸ್ತೆಯು ಕಳೆದ ಆರು ತಿಂಗಳಿನಿಂದ ಪೈಪ್ ಲೈನ್ ಅಳವಡಿಸಲು ಅಗೆದು ಹಾಕಿರುವ ಕಾಮಗಾರಿಯನ್ನು ಈ ತನಕ ಯಥಾಸ್ಥಿತಿಗೆ ತಾರದೆ ಸದ್ರಿ ರಸ್ತೆಯಲ್ಲಿ ದಿನಾ ಓಡಾಡುವವರು ಅಪಘಾತಕ್ಕೆ ಒಳಗಾಗುತ್ತಿದ್ದಾರೆ. ಆದುದರಿಂದ ಕಾಮಗಾರಿ ಶೀಘ್ರ ಮುಗಿಸಲು ನಿರ್ದೇಶನ ನೀಡುವಂತೆ ಮನವಿಯಲ್ಲಿ ವಿನಂತಿಸಲಾಗಿದೆ ಎಂದು ವೆಂಕಪ್ಪ ಗೌಡ ಅವರು ತಿಳಿಸಿದ್ದಾರೆ.