ಸುಳ್ಯ: ಸರ್ಕಾರದ ಅಕ್ರಮ-ಸಕ್ರಮ ಯೋಜನೆಯ ಷರತ್ತುಗಳನ್ನು ಸಡಿಲಿಸಿ ಯೋಜನೆಯ ಪ್ರಯೋಜನಗಳಿಂದ ರೈತರು ವಂಚಿತರಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ಸುಳ್ಯ ತಾ.ಪಂ ಮಾಜಿ ಅಧ್ಯಕ್ಷ ಹಾಗೂ ಭಾರತೀಯ ರಬ್ಬರ್ ಮಂಡಳಿಯ ನಿರ್ದೇಶಕ ಮುಳಿಯ ಕೇಶವ ಭಟ್ ಸರಕಾರ ಹಾಗೂ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಲಾಗಿದೆ. ದ.ಕ. ಸಂಸದ
ಬ್ರಿಜೇಶ್ ಚೌಟ, ಸುಳ್ಯ ವಿಧಾನ ಸಭಾ ಶಾಸಕಿ ಭಾಗೀರಥಿ ಮುರುಳ್ಯ ಹಾಗೂ ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಮಾಜಿ ಸಚಿವ ಎಸ್ ಅಂಗಾರ ಮತ್ತು ದ ಕ ಗ್ಯಾರೆಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷ ಭರತ್ ಮುಂಡೋಡಿ ಯವರಿಗೆ ಮನವಿ ಸಲ್ಲಿಸಿದ್ದಾರೆ.
ಸುಳ್ಯ ತಾಲೂಕಿನ ಹಲವಾರು ರೈತರು ಸರಕಾರಿ ಜಮೀನಿನಲ್ಲಿ ಕೃಷಿ-ಕೃತಾವಳಿಗಳನ್ನು ಮಾಡಿ ಸರಕಾರದ ಅಕ್ರಮ-ಸಕ್ರಮ ಯೋಜನೆಯಂತೆ ನಮೂನೆ-57 ರ ಅಡಿ ಅರ್ಜಿ ಸಲ್ಲಿಸಿ ಮಂಜೂರಾತಿಗೆ ಕಾಯುತ್ತಿರುವುದಾಗಿದೆ. ಆದರೆ ಈ ಅರ್ಜಿಗಳನ್ನು ಸ್ಥಳ ಪರಿಶೀಲನೆ ಮಾಡದೇ ವಿವಿಧ ಕಾರಣ ತಿರಸ್ಕರಿಸುತ್ತಿರುವ ಬಗ್ಗೆ ರೈತರಿಂದ ದೂರು ಉಂಟಾಗಿದೆ.
ಇದರಿಂದಾಗಿ ಕೃಷಿಯಿಂದಲೇ ಜೀವನ ನಡೆಸುತ್ತಿರುವ ಅದೆಷ್ಟೋ ರೈತರಿಗೆ ಅನ್ಯಾಯವಾಗುತ್ತಿದೆ. ಆದುದರಿಂದ ತಾವುಗಳು ನಿಯಮಗಳನ್ನು ಸಡಿಲಿಸಿ ರೈತರಿಗೆ ಅನುಕೂಲವಾಗುವಂತೆ ಬದಲಾವಣೆ ತರಬೇಕಾಗಿ ವಿನಂತಿಸಲಾಗಿದೆ. ಕನಿಷ್ಟ 01-01-2010 ಕ್ಕೆ 18 ವರ್ಷ ತುಂಬಿದವರಿಗೆ ಮಂಜೂರಾತಿಗೆ ಅವಕಾಶ ನೀಡಬೇಕು. ನಮೂನೆ-50,53 ರ ಅಡಿ ಅರ್ಜಿ ಸಲ್ಲಿಸಿದ್ದರೂ, ಈವರೆಗೆ ಮಂಜೂರಾಗದ ಅರ್ಹ ರೈತರಿಗೆ ನಮೂನೆ-57 ರ ಅಡಿ ಅರ್ಜಿಸಲ್ಲಿಸಿದ್ದರೆ ಮಂಜೂರಾತಿಗೆ ಅವಕಾಶ ನೀಡಬೇಕು. ಅರ್ಜಿದಾರರು ಕೃತಾವಳಿ ಮಾಡಿರುವ ಜಮೀನು ಕುಮ್ಕಿ-ಕಾನ-ಬಾಣೆ ಡೀಮ್ಡ್ ಅರಣ್ಯ ಎಂದು ಜಿಲ್ಲಾಧಿಕಾರಿಗಳು ತಿರಸ್ಕರಿಸದೇ ನ್ಯಾಯಾಲಯದ ಅಂತಿಮ ಆದೇಶದವರೆಗೆ ಅಕ್ರಮ-ಸಕ್ರಮ ಸಮಿತಿಗೆ ಮಂಡಿಸಿ ತಾತ್ಕಾಲಿಕ ವಿಲೇ ಇಡಬೇಕು.ಪಶ್ಚಿಮ ಘಟಕ್ಕೂ ಜನವಸತಿ ಪ್ರದೇಶಕ್ಕೂ ಗಡಿಗುರುತು ಮಾಡಿ ಜಂಟಿ ಸರ್ವೆ ಮಾಡಬೇಕು.1970 ರ ಇಸವಿಯಲ್ಲಿ ಕೈಬರಹದ ಪಹಣಿ ಪತ್ರದ ಆಧಾರದ ಪ್ರಕಾರ ಜಂಟಿ ಸರ್ವೆ ಮಾಡಬೇಕು.
1998 ಇಸವಿಯ ನಂತರದ ಅಕ್ರಮ- ಸಕ್ರಮ ಕಡತ ಗಳನ್ನು ಬೆಳ್ತಂಗಡಿ, ಪತ್ತೂರು, ಸುಳ್ಯ, ಕಡಬ 4 ತಾಲೂಕುಗಳಲ್ಲಿ ಸುಮಾರು 700-800 ಕಡತಗಳನ್ನು ರದ್ದುಪಡಿಸುವಂತೆ ಆದೇಶಿಸಿರುತ್ತಾರೆ. ಅರ್ಜಿದಾರರು ಕೋರಿರುವ ಜಮೀನಿನ ಸ್ಥಳ ಪರಿಶೀಲನೆ ಮಾಡದೇ ಅರ್ಜಿದಾರರಿಗೆ ಯಾವುದೇ ಮಾಹಿತಿ ನೀಡದೇ ಅಕ್ರಮ-ಸಕ್ರಮ ಸಮಿತಿಗೆ ಮಂಡಿಸದೇ ಅರ್ಜಿಗಳನ್ನು ತಿರಸ್ಕರಿಸಲಾಗುತಿದೆ. ಈಗಾಗಲೇ ಹಳದಿ ರೋಗ, ಎಲೆಚುಕ್ಕಿ ರೋಗ, ಬೆಲೆಕುಸಿತ, ಕಾಡುಪ್ರಾಣಿ ಹಾವಳಿ ಮುಂತಾದ ಕಾರಣಗಳಿಂದ ಕಂಗೆಟ್ಟಿರುವ ರೈತರಿಗೆ ತೀವ್ರ ಸಮಸ್ಯೆ ಉಂಟಾಗಿದೆ. ನಿಯಮಗಳನ್ನು ಸಡಿಲಿಸಿ ರೈತರಿಗೆ ಅನುಕೂಲ ಮಾಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ರಾಕೇಶ್ ಮೆಟ್ಟಿನಡ್ಕ. ವರ್ಷಿತ್ ಕಡ್ತಲ್ಕಜೆ ಜೊತೆಗಿದ್ದರು.