*ಗಂಗಾಧರ ಕಲ್ಲಪಳ್ಳಿ.
ಸುಳ್ಯ:ಅಡಿಕೆ ತೋಟಕ್ಕೆ ಹೋದರೆ ಪಟ ಪಟ ಶಬ್ದ ಕಿವಿಗೆ ಅಪ್ಪಳಿಸುತ್ತಿರುತ್ತದೆ. ಇದೇನು ಮಳೆ ನಿಂತ ಮೇಲೆ ಮಳೆಯ ಹನಿ ಬೀಳುತ್ತಿದೆಯೇ ಎಂದು ಅಡಿಕೆ ಮರದ ಬುಡ ನೋಡಿದರೆ ಅಲ್ಲಿ ಹರಡಿದಂತೆ ಕಾಣುವ ಎಳೆಯ ಅಡಿಕೆಗಳ ರಾಶಿ. ಹೌದು ಸುಳ್ಯ ತಾಲೂಕಿನ ಬಹುತೇಕ ತೋಟಗಳಲ್ಲಿ ಈಗ ಅಡಿಕೆ ನಳ್ಳಿ ಉದುರುವ ಶಬ್ದಗಳೇ ಕಿವಿಗೆ ಅಪ್ಪಳಿಸುತ್ತದೆ. ತೋಟ ಪೂರ್ತಿ ಮಿಡಿ ಅಡಿಕೆಗಳು ಹರಡಿರುವುದೇ ಕಣ್ಣಿಗೆ ರಾಚುತ್ತದೆ. ನಳ್ಳಿ ಬೀಳುವ ಪಟ ಪಟ ಶಬ್ದ ಕೇಳುತ್ತಿದ್ದಂತೆ ಅಡಿಕೆ
ಬೆಳೆಗಾರರ ಹೃದಯವೂ ಪಟ ಪಟ ಬಡಿಯುತ್ತದೆ. ಸುಳ್ಯ ತಾಲೂಕಿನ ವಿವಿಧ ಭಾಗಗಳಲ್ಲಿ ಕಳೆದ ಒಂದು ತಿಂಗಳಿನಿಂದ ಮಿಡಿ ಅಡಿಕೆ ವ್ಯಾಪಕವಾಗಿ ಉದುರುತ್ತಿದೆ. ತೋಳು ಬೆರಳಿನ ಗಾತ್ರಕ್ಕೆ ಬೆಳೆದ ಹಸಿ ಅಡಿಕೆಗಳು ಕೂಡ ಉದುರುತಿದೆ. ಜನವರಿ, ಫೆಬ್ರವರಿ ತಿಂಗಳಲ್ಲಿ ಬಿಟ್ಟ ಹಿಂಗಾರ ಅಡಿಕೆಯಾಗಿ ಚೆನ್ನಾಗಿ ಬೆಳೆತು ಬರುತ್ತಿತ್ತು. ಹೀಗೆ ಬೆಳೆದ ಅಡಿಕೆಗಳು ಉದುರಲು ಆರಂಭಿಸಿತ್ತು. ಸಣ್ಣ ಮಿಡಿ ಅಡಿಕೆ ಬೀಳಲು ಆರಂಭಿಸಿ ಅದು ತೀವ್ರಗೊಂಡು ಅಡಿಕೆ ಮರಗಳೇ ಬೋಳಾಗಿದೆ. ಅಡಿಕೆ ಮರಗಳಲ್ಲಿರುವ ಅಡಿಕೆ ನಳ್ಳಿ ಪೂರ್ತಿ ಉದುರಿ ಹೋಗಿದೆ. ಹಿಂಗಾರವೂ ಕಪ್ಪು ಒಣಗಿ ಬಣ್ಣಕ್ಕೆ ತಿರುಗಿದೆ.ಸುಮಾರು ಶೇ.30 ರಷ್ಟು ಅಡಿಕೆ ಮರಗಳಲ್ಲಿ ಪೂರ್ತಿಯಾಗಿ ನಳ್ಳಿ ಉದುರಿ ನಾಶವಾಗಿದೆ. ಈಗಲೂ ನಿರಂತರ ಉದುರುತ್ತಲೇ ಇದೆ ಎನ್ನುತ್ತಾರೆ ಕೃಷಿಕರು.
ಇದರಿಂದ ಮಾರುಕಟ್ಟೆಯಲ್ಲಿ ಉತ್ತಮ ಧಾರಣೆ ಇದ್ದರೂ ಆರಂಭದಲ್ಲಿಯೇ ಅಡಿಕೆಗೆ ದೊಡ್ಡ ಹೊಡೆತ ಬಿದ್ದಿರುವುದು ಕೃಷಿಕರನ್ನು ಆತಂಕಕ್ಕೆ ತಳ್ಳಿದೆ. ಹಳದಿ ರೋಗ ಬಾದೆಯಿಂದ ಸುಳ್ಯ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಅಡಿಕೆ ಕೃಷಿ ನಾಶವಾಗಿದೆ. ಇದರ ಜೊತೆಗೆ ಇದ್ದ ಅಲ್ಪ ಸ್ವಲ್ಪ ಅಡಿಕೆಯೂ ನಳ್ಳಿ ಹಂತದಲ್ಲಿಯೇ ಧರಾಶಾಹಿಯಾಗುತಿರುವುದು ಕೃಷಿಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಹವಾಮಾನ ವೈಪರೀತ್ಯದ ಹೊಡೆತ:
ಕೃಷಿಕರು ಹೇಳುವ ಪ್ರಕಾರ ಕಳೆದ ಮೇಯಲ್ಲಿ ಸುರಿದ ಅಕಾಲಿಕ ಮಳೆ ಮತ್ತು ಏರಿದ ಉಷ್ಣಾಂಶ ಅಡಿಕೆ ಕೃಷಿಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಅಕಾಲಿಕ ಮಳೆ ಮತ್ತು ಏರಿದ ಉಷ್ಣಾಂಶ ತಾಳಲಾರದೆ ಅಡಿಕೆ ನಳ್ಳಿ ಬೀಳಲು ಆರಂಭಿಸಿದೆ. ಚೆನ್ನಾಗಿ ಬೆಳೆದು ಬರುತ್ತಿದ್ದ ಹಸಿ ಅಡಿಕೆ ಮಿಡಿಗಳು ಕೂಡ ಹವಾಮಾನದ ವೈಫರೀತ್ಯಕ್ಕೆ ಸಿಲುಕಿ ಮರದ ಬುಡ ಸೇರಿದೆ. ಕೆಲವು ಕೀಟಗಳು ಮತ್ತು ಮಳೆ ಬರುವ ಸಂದರ್ಭದಲ್ಲಿ ದಾಳಿ ಮಾಡುವ ಫಂಗಸ್ಗಳು ಕೂಡ ಈ ರೀತಿ ಅಡಿಕೆ ನಳ್ಳಿ ವ್ಯಾಪಕವಾಗಿ ನಾಶವಾಗಲು ಕಾರಣವಾಗಿದೆ. ಫಂಗಸ್ ದಾಳಿಯಿಂದ ಮತ್ತು ಕೆಲವು ಕೀಟಗಳು ಅಡಿಕೆಯ ರಸವನ್ನು ಹೀರುವ ಕಾರಣದಿಂದ ಅಡಿಕೆ ನಳ್ಳಿ ಬಲ ಕಳೆದುಕೊಂಡು ಹಿಂಗಾರದಿಂದ ಕಳಚಿಕೊಳ್ಳುತ್ತದೆ. ಮಳೆ, ಉಷ್ಣಾಂಶದ ಏರಿಕೆಯಿಂದ ಪರಾಗಸ್ಪರ್ಶ ಪ್ರಕ್ರಿಯೆಗಳು ಸರಿಯಾಗಿ ನಡೆಯದ ಸ್ಥಿತಿ ಉಂಟಾಗಿ ಹೊಸ ಹಿಂಗಾರದಲ್ಲಿ ಅಡಿಕೆ ಮಿಡಿ ಬಿಡುವುದೂ ನಿಧಾನವಾಗಿದೆ ಎಂಬುದು ಕೃಷಿಕರ ಅಭಿಪ್ರಾಯ. ಏಪ್ರಿಲ್-ಮೇ ತಿಂಗಳಲ್ಲಿ ಸುಳ್ಯ ತಾಲೂಕಿನ ವಿವಿಧ ಭಾಗಗಳಲ್ಲಿ ಸರಾಸರಿ 37 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಇತ್ತು. ಕೆಲವು ದಿನ 40 ಡಿಗ್ರಿವರೆಗೂ ಏರಿತ್ತು. ಅಲ್ಲದೆ ಮೇ ತಿಂಗಳಲ್ಲಿ ದಾಖಲೆಯ ಮಳೆಯೂ ಸುರಿಯಿತು. ನಿರಂತರ ಮೋಡ ಕವಿದು ಜಡಿ ಮಳೆಯ ವಾತಾವರಣ ಇತ್ತು. ಅಕಾಲಿಕವಾಗಿ ಮಳೆ ಸುರಿದ ಕಾರಣ ಔಷಧಿ ಸಿಂಪಡಿಸಲೂ ಸಾಧ್ಯವಾಗಿಲ್ಲ ಎಂದು ಬೆಳೆಗಾರರು ಹೇಳುತ್ತಾರೆ.
ಅಡಿಕೆಗೆ ಉತ್ತಮ ಧಾರಣೆ ಇರುವ ಕಾರಣ ಹಾಗು ಇಲ್ಲಿನ ಕೃಷಿಕರಿಗೆ ಅಡಿಕೆಯೇ ಜೀವನಾಧಾರ ಆಗಿರುವ ಕಾರಣ ಎಲ್ಲರೂ ಅಡಿಕೆ ತೋಟಕ್ಕೆ ಸಾಕಷ್ಟು ಖರ್ಚು ಮಾಡಿ ಅಡಿಕೆ ತೋಟವನ್ನು ಹಾರೈಕೆ ಮಾಡುತ್ತಾರೆ. ಇದರಿಂದ ಉತ್ಪಾದನಾ ವೆಚ್ಚವೂ ಏರುತಿದೆ. ಆದರೆ ಹವಾಮಾನ ವೈಪರೀತ್ಯ ಪ್ರತಿ ಬಾರಿಯೂ ಮಾರಕವಾಗಿ ಪರಿಣಮಿಸುತಿದೆ. ಕಳೆದ ವರ್ಷ ಡಿಸೆಂಬರ್ವರೆಗೂ ಮುಂದುವರಿದ ಮಳೆಯಿಂದ ಅಡಿಕೆ ಒಣಗಿಸಲಾಗದೆ ಕರಗಿತ್ತು. ಕೆಲವು ಲಕ್ಷ ಖರ್ಚು ಮಾಡಿ ಅಡಿಕೆ ಒಣಗಿಸುವ ಗೂಡು ನಿರ್ಮಿಸಬೇಕಾಗಿ ಬಂದಿತ್ತು. ಇದೀಗ ಈ ವರ್ಷ ವಿಪರೀತ ಉಷ್ಣಾಂಶ ಮತ್ತು ಅಕಾಲಿಕ ಮಳೆ ಮಾರಕವಾಗಿ ಪರಿಣಮಿಸಿದೆ. ಹವಾಮಾನ ವೈಪರೀತ್ಯ, ಫಂಗಸ್ ಮತ್ತು ಕೀಟಗಳ ಬಾದೆಯಿಂದ ನಳ್ಳಿ ಉದುರುವುದು ಕಂಡು ಬರುತ್ತದೆ. ನಿಯಮಿತವಾಗಿ ಔಷಧಿ ಸಿಂಪಡಣೆ ಮಾಡಿದರೆ ಅಡಿಕೆ ಉದುರುವುದರಿಂದ ಮತ್ತು ಕೊಳೆ ರೋಗ ಬಾರದಂತೆ ತಡೆಯಬಹುದು ಎಂದು ಕೃಷಿ ವಿಜ್ಞಾನಿಗಳು ಹೇಳುತ್ತಾರೆ.
“ಕಳೆದ ಒಂದು ತಿಂಗಳಿನಿಂದ ನಮ್ಮ ತೋಟದಲ್ಲಿ ವ್ಯಾಪಕವಾಗಿ ಅಡಿಕೆ ಉದುರುತಿದೆ. ತೋಟ ಪೂರ್ತಿ ಮಿಡಿ ಅಡಿಕೆಗಳೇ ಹರಡಿಕೊಂಡಿದೆ. ಬಹುತೇಕ ಅಡಿಕೆ ಮರಗಳು ಖಾಲಿಯಾಗಿದೆ. ಶೇ.30ರಷ್ಟು ಅಡಿಕೆ ಫಸಲು ನಳ್ಳಿ ರೂಪದಲ್ಲಿ ಉದುರಿ ಬಿದ್ದಿದೆ”
-ಜಯಪ್ರಕಾಶ್.ಕೆ.
ಕೃಷಿಕರು.ಪೇರಾಲು