ಅಹಮದಾಬಾದ್: ನಾಯಕ ಶುಭ್ಮನ್ ಗಿಲ್ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಐಪಿಎಲ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡವು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 5 ವಿಕೆಟ್ ಗೆಲುವು ದಾಖಲಿಸಿದೆ.
ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ
ಕೆಕೆಆರ್ 20 ಓವರ್ಗಳಲ್ಲಿ 180 ರನ್ ಗಳಿಸಿ ಆಲೌಟ್ ಆಯಿತು. ಗುರಿ ಬೆನ್ನಟ್ಟಿದ ಗುಜರಾತ್ 19.4 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 181 ರನ್ ಪೇರಿಸಿ ಗೆಲುವಿನ ನಗೆ ಬೀರಿತು. ಗಿಲ್ 50 ಎಸೆತಗಳಲ್ಲಿ 8 ಬೌಂಡರಿ ಹಾಗು 4 ಸಿಕ್ಸರ್ ನೆರವಿನಿಂದ 86 ರನ್ ಸಿಡಿಸಿ ತಂಡಕ್ಕೆ ಭದ್ರ ಬುನಾದಿ ಹಾಕಿದರು. ಸಾಯಿ ಸುದರ್ಶನ್(22), ಜೋಸ್ ಬಟ್ಲರ್(25), ಗ್ಲೆನ್ ಫಿಲಿಫ್ಸ್(19) ರನ್ಗಳ ಕೊಡುಗೆ ನೀಡಿದರು.
ಮೊದಲು ಬ್ಯಾಟ್ ಮಾಡಿದ ಕೆಕೆಆರ್ ಪರ ಕ್ಯಾಮರಾನ್ ಗ್ರೀನ್ 55 ಎಸೆತಗಳಲ್ಲಿ 7 ಬೌಂಡರಿ 4 ಸಿಕ್ಸರ್ ಸಹಿತ 79 ರನ್ ಗಳಿಸಿ ಮಿಂಚಿದರು. ರೋವ್ಮನ್ ಪೋವೆಲ್ 27, ಟಿಮ್ ಸೀಫರ್ಟ್ 19, ರಮಣದೀಪ್ ಸಿಂಗ್ 17 ರನ್ ಗಳಿಸಿ ಗಮನ ಸೆಳೆದರು. ಉಳಿದಂತೆ ನಾಯಕ ಅಜಿಂಕ್ಯ ರಹಾನೆ, ಸುನೀಲ್ ನಾರಾಯಣ್, ರಘುವಂಶಿ, ಅನುಕುಲ್ ರಾಯ್, ರಿಂಕು ಸಿಂಗ್ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು.
ಗುಜರಾತ್ ಪರ ಕಗಿಸೊ ರಬಾಡ 3, ಮೊಹಮ್ಮದ್ ಸಿರಾಜ್, ಅಶೋಕ್ ಶರ್ಮಾ ತಲಾ 2 ವಿಕೆಟ್ ಪಡೆದರೆ, ಪ್ರಸಿದ್ಧ್ ಕೃಷ್ಣ, ರಶೀದ್ ಖಾನ್ ತಲಾ ಒಂದೊಂದು ವಿಕೆಟ್ ಕಬಳಿಸಿದರು.
















