ಸುಳ್ಯ: ಸುಳ್ಯದ ಪಯಸ್ವಿನಿ ನದಿಯಲ್ಲಿ ಈಗಾಗಲೇ ನೀರಿನ ಹರಿವು ನಿಂತಿದ್ದು, ಕಲ್ಲುಮುಟ್ಲುನಲ್ಲಿ ಮುಂದಿನ 4 – 5 ದಿನಗಳಿಗೆ ಬೇಕಾಗುವಷ್ಟು ಮಾತ್ರ ನೀರಿನ ಸಂಗ್ರಹವಿದೆ. ಮುಂದಿನ ದಿನಗಳಲ್ಲಿ ಎರಡು ದಿನಕ್ಕೊಮ್ಮೆ ನೀರು ಸರಬರಾಜು ಮಾಡಲು ಚಿಂತನೆ ನಡೆಸಲಾಗಿದೆ ಎಂದು ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ತಿಳಿಸಿದ್ದಾರೆ.
ಅವರು ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಪತ್ರಕರ್ತರ ಜೊತೆ ಮಾತನಾಡಿದರು. ಪಯಸ್ವಿನಿ ನದಿಯಲ್ಲಿ ನೀರಿನ ಹರಿವು ನಿಂತಿದೆ. ಕಲ್ಲುಮುಟ್ಲುವಿನ
ಕಟ್ಟದಲ್ಲಿ ನೀರಿನ ಸಂಗ್ರಹ ಬರಿದಾಗುತ್ತಾ ಬಂದಿದೆ.
ಸುಳ್ಯಕ್ಕೆ ನೀರಿನ ಸಮಸ್ಯೆ ಆಗದಂತೆ ಈಗಾಗಲೇ ಕಲ್ಲುಮುಟ್ಲು ಮೇಲ್ಭಾಗದಲ್ಲಿ ನದಿಗೆ ಅಳವಡಿಸಿರುವ ಕೃಷಿ ಪಂಪ್ ಸೆಟ್ಗಳ ವಿದ್ಯುತ್ ಕಡಿತ ಅಥವಾ ದಿನಕ್ಕೆ ಇಂತಿಷ್ಟು ಗಂಟೆ ಮಾತ್ರವೇ ವಿದ್ಯುತ್ ನೀಡಲು ತಾಲೂಕು ಆಡಳಿತ ಚಿಂತನೆ ನಡೆಸಿದ್ದಾರೆ ಎಂದರು.
ಒಂದು ವೇಳೆ ನಗರಕ್ಕೆ ನೀರಿನ ಸಮಸ್ಯೆ ಉಂಟಾದಲ್ಲಿ ಆಯ್ದ ಸ್ಥಳಗಳಲ್ಲಿ ಕೊಳವೆ ಬಾವಿ ಕೊರೆಯಲು ಜಿಲ್ಲಾಡಳಿತದಿಂದ ಅನುಮತಿ ಕೋರಲಾಗಿದೆ. ಅಗತ್ಯ ಬಂದರೆ ನೀರು ಸರಬರಾಜಿಗೆ ಟ್ಯಾಂಕರ್ ಬಳಕೆಗೂ ಯೋಜನೆ ರೂಪಿಸಲಾಗಿದೆ ಎಂದರು. ಈ ರೀತಿಯ ಸಮಸ್ಯೆಯನ್ನು ಎದುರಿಸಲು ನೀರಿನ ಮಿತವ್ಯಯ ಒಂದೇ ದಾರಿ. ಆದುದರಿಂದ ಜನರು ನೀರನ್ನು ಪೋಲು ಮಾಡದೇ ಆದಷ್ಟು ಮಿತವ್ಯಯದಲ್ಲಿ ನೀರನ್ನು ಬಳಕೆ ಮಾಡಬೇಕು ಎಂದು ಅವರು ವಿನಂತಿಸಿದ್ದಾರೆ