ಚೆನ್ನೈ: ತನ್ನ ಮೊದಲ ಐಪಿಎಲ್ ಪಂದ್ಯದಲ್ಲಿಯೇ ಮಿಂಚಿದ ಯುವ ಬೌಲರ್ ವಿಘ್ನೇಶ್ ಪುತ್ತೂರು ಹಿರಿಯ ಆಟಗಾರರು ಹಾಗೂ ಕ್ರಿಕೆಟ್ ಪ್ರಿಯರ ಮೆಚ್ಚುಗೆ ಗಳಿಸಿದ್ದಾರೆ.ಭಾನುವಾರ ನಡೆದ ಮುಂಬೈ ಇಂಡಿಯನ್ಸ್ ವಿರುದ್ಧ ಚೆನ್ನೈ ತಂಡ 4 ವಿಕೆಟ್ ರೋಚಕ ಗೆಲುವು ಸಾಧಿಸಿದರೂ ಮುಂಬೈ ಪರ ಬಿಗು ದಾಳಿ ಸಂಘಟಿಸಿದ ವಿಘ್ನೇಶ್ ಪುತ್ತೂರು ಎಲ್ಲರ ಮನ ಗೆದ್ದರು. ಮೊದಲ ಪಂದ್ಯದಲ್ಲೇ ವಿಘ್ನೇಶ್ ಸ್ಪಿನ್ ಮೋಡಿ ಮಾಡಿದ್ದಾರೆ.ಅನುಭವಿ ಆಟಗಾರರಾದ
ಋತುರಾಜ್ ಗಾಯಕ್ವಾಡ್, ಶಿವಂ ದುಬೆ ಹಾಗೂ ದೀಪಕ್ ಹೂಡಾ ಅವರ ವಿಕೆಟ್ ಕಬಳಿಸುವ ಮೂಲಕ ಗಮನ ಸೆಳೆದಿದ್ದಾರೆ. ರೋಹಿತ್ ಶರ್ಮ ಬದಲಿಗೆ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿದ ಕೇರಳದ ಎಡಗೈ ಸ್ಪಿನ್ನರ್ ವಿಘ್ನೇಶ್ ಪುತ್ತೂರು. ಕೇರಳದ ಮಲಪ್ಪುರಂನ ವಿಘ್ನೇಶ್, ಮುಂಬೈ ಇಂಡಿಯನ್ಸ್ ಪರ ಐಪಿಎಲ್ಗೆ ಪ್ರವೇಶ ಮಾಡಿದ್ದಾರೆ. 23 ವರ್ಷದ ವಿಘ್ನೇಶ್ ತಮ್ಮ ಬಿಗುವಿನ ದಾಳಿಯಿಂದ ಆಕರ್ಷಿಸಿದರು. ಸ್ವಾರಸ್ಯವೆಂದರೆ ವಿಘ್ನೇಶ್ ಕೇರಳ ಪರ ಹಿರಿಯರ ಮಟ್ಟದಲ್ಲಿ ಈ ವರೆಗೆ ಒಂದೇ ಒಂದು ಪಂದ್ಯವನ್ನೂ ಆಡಿಲ್ಲ. ಆದರೆ ನಿನ್ನೆ ನಡೆದ ಪಂದ್ಯಾಟದಲ್ಲಿ ತನ್ನ ಬೌಲಿಂಗ್ ಚಾತುರ್ಯದಿಂದ ಸ್ವತಃ ಸಿಎಸ್ಕೆ ಬ್ಯಾಟರ್ಗಳನ್ನೇ ಕಾಡಿದ್ದಾರೆ.ವಿಘ್ನೇಶ್ ಪುತ್ತೂರು ಬಲಗೈ ಬ್ಯಾಟರ್ ಹಾಗೂ ಎಡಗೈ ಸ್ಪಿನ್ ಬೌಲರ್. ಮಲಪ್ಪುರಂ ಜಿಲ್ಲೆಯ ಪೆರಿಂಥಲ್ಮನ್ನದವರು. ಜನಿಸಿದರು. 14 ವರ್ಷದೊಳಗಿನ
ಮತ್ತು 19 ವರ್ಷದೊಳಗಿನ ಮಟ್ಟದಲ್ಲಿ ಕೇರಳ ಪರ ಮಾತ್ರ ಆಡಿದ್ದಾರೆ. ಇನ್ನೂ ಇನ್ನೂ ಹಿರಿಯರ ಮಟ್ಟದಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸಿಲ್ಲ. ಕೇರಳ ಕ್ರಿಕೆಟ್ ಲೀಗ್ನಲ್ಲಿ ಅಲೆಪ್ಪಿ ರಿಪ್ಪಲ್ಸ್ ಪರ ಆಡಿದ್ದರು.
ಕನಿಷ್ಟ ಬೆಲೆಯಾದ 30ಲಕ್ಷಕ್ಕೆ ಐಪಿಎಲ್ ಏಲಂ ನಲ್ಲಿ ಮುಂಬೈ ಪಾಲಾಗಿದ್ದರು. ನೆಟ್ ಪ್ರಾಕ್ಟೀಸಿನಲ್ಲಿ ಈತನ ಬೌಲಿಂಗ್ ಕಂಡು ಸಹ ಆಟಗಾರರು ದಂಗಾಗಿದ್ದರು. ಹೀಗಾಗಿ ನಿನ್ನೆಯ ಪಂದ್ಯದಲ್ಲಿ ರೋಹಿತ್ ಶರ್ಮ ಬದಲಿಗೆ ಇಂಪ್ಯಾಕ್ಟ್ ಆಟಗಾರನಾಗಿ ವಿಘ್ನೇಶ್ ನನ್ನು ಕಣಕ್ಕಿಳಿಸಲಾಗಿತ್ತು. ಐಪಿಎಲ್ ಪಾದಾರ್ಪಣೆಯ ಮೊದಲ ಪಂದ್ಯದಲ್ಲೇ ಯಾವ ಭಯ, ಆತಂಕಗಳಿಲ್ಲದೇ ಚೆಂಡೆಸೆದ ವಿಘ್ನೇಶ್ 3 ಓವರಲ್ಲಿ 3ವಿಕೆಟ್ ಪಡೆದು ಚೆನ್ನೈ ಓಟಕ್ಕೆ ನಿಧಾನತೆಯ ಬ್ರೇಕ್ ಹಾಕಿದರು. ವಿಘ್ನೇಶ್ ತಂದೆ ಸುನಿಲ್ ಕುಮಾರ್ ಆಟೋ ಚಾಲಕರಾಗಿದ್ದರೆ, ತಾಯಿ ಕೆ.ಪಿ. ಬಿಂದು ಗೃಹಿಣಿ.
ವಿಶ್ವೇಶ್ ಪುತ್ತೂರು ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡಿದ್ದಾರೆ. ಉತ್ತಮವಾಗಿ ಬೌಲಿಂಗ್ ಮಾಡಿದ ವಿಘ್ನೇಶ್ ಮೇಲೆ ಸ್ಟಾರ್ ಆಟಗಾರರ ದೃಷ್ಟಿ ಬಿದ್ದಿದೆ. ಪಂದ್ಯ ಮುಗಿದಾಗ ಮೈದಾನದಲ್ಲಿ ಸಾಕ್ಷಾತ್ ಎಂ.ಎಸ್.ಧೋನಿಯೇ ಈ ಹುಡುಗನ ಬೆನ್ನುತಟ್ಟಿ ಅಭಿನಂದನೆ ಹೇಳಿದ್ದಾರೆ. ಧೋನಿಯಿಂದ ಮೆಚ್ಚುಗೆ ಪಡೆದು ವಿಘ್ನೇಶ್ಗೆ ಬಹಳ ಸಂತೋಷವಾಗಿತ್ತು. ಈ ಸಂದರ್ಭ ಕಾಮೆಂಟರಿ ಬಾಕ್ಸ್ನಲ್ಲಿದ್ದ ಟೀಂ ಇಂಡಿಯಾ ಮಾಜಿ ಕೋಚ್ ರವಿಶಾಸ್ತಿ, ಮುಂಬೈ ಇಂಡಿಯನ್ ನಾಯಕ ಸೂರ್ಯಕುಮಾರ್ ಸೇರಿ ಹಲವು ದಿಗ್ಗಜ ಕ್ರಿಕೆಟಿಗರು ವಿಘ್ನೇಶ್ನ್ನು ಗುರುತಿಸಿ ಅಭಿನಂದಿಸಿದ್ದಾರೆ.