ಮಂಗಳೂರು: ವಿಧಾನ ಸಭೆಯಲ್ಲಿ ಯಾವುದೇ ರೀತಿಯ ಅಶಿಸ್ತು ಸಹಿಸುವುದಿಲ್ಲ, ಶಾಸಕರು ವಿಧಾನ ಸಭಾಧ್ಯಕ್ಷರ ಪೀಠಕ್ಕೆ ಅಗೌರವ ತೋರುವ ಪ್ರವೃತ್ತಿ ಮರು ಕಳಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸದನಕ್ಕಿಂತ ದೊಡ್ಡ ಸಾಂವಿಧಾನಿಕ ಸಂಸ್ಥೆ ಬೇರೆ ಇಲ್ಲ. ವಿಧಾನ ಸಭಾಧ್ಯಕ್ಷರ ಪೀಠಕ್ಕಿಂತ
ದೊಡ್ಡದು ಬೇರೆ ಇಲ್ಲ. ಆದುದರಿಂದ ಶಾಸಕರು ತಮ್ಮ ವರ್ತನೆಯನ್ನು ಸುಧಾರಿಸಿಕೊಂಡು ಉತ್ತಮ ನಡವಳಿಕೆ ರೂಪಿಸಿಕೊಳ್ಳಲಿ ಎಂಬ ಉದ್ದೇಶದಿಂದ ಈ ಕ್ರಮಕೈಗೊಂಡಿದ್ದೇನೆ’ ಎಂದರು.ಈ ಹಿಂದೆ ಪಕ್ಷಾಂತರ ನಡೆದಾಗ ನಾನೇನಾದರೂ ಸಭಾಧ್ಯಕ್ಷ ಆಗಿರುತ್ತಿದ್ದರೆ ಅಂತಹ ಶಾಸಕರನ್ನು ತಕ್ಷಣವೇ ವಜಾಗೊಳಿಸುತ್ತಿದ್ದೆ. ಬೇಕಿದ್ದರೆ ಆ ನಿರ್ಣಯವನ್ನು ಅವರು ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು. ಪಕ್ಷಾಂತರ ನಿಷೇಧ ಕಾಯ್ದೆ ದುರ್ಬಲವಾಗಿಲ್ಲ. ಅದು ಬಲಿಷ್ಠವಾಗಿಯೇ ಇದೆ. ಅದನ್ನು ಹೇಗೆ ಬಳಸುತ್ತೇವೆ ಎಂಬುದು ಮುಖ್ಯ ಎಂದರು.
ವಿಧಾನಸೌಧಕ್ಕೆ ಇನ್ನು ವರ್ಷಪೂರ್ತಿ ಪ್ರತಿ ಶನಿವಾರ ಮತ್ತು ಭಾನುವಾರ ವಿದ್ಯುತ್ ದೀಪಾಲಂಕಾರ ಮಾಡಲಾಗುತ್ತದೆ. ಸಂಜೆ 6ರಿಂದ 9 ಗಂಟೆವರೆಗೆ ದೀಪಾಲಂಕಾರ ಇರಲಿದೆ. ಇದಕ್ಕೆ ಮುಖ್ಯಮಂತ್ರಿಯವರು ಏಪ್ರಿಲ್ ಮೊದಲ ವಾರದಲ್ಲಿ ಚಾಲನೆ ನೀಡುವರು’ ಎಂದು ಖಾದರ್ ತಿಳಿಸಿದರು.
ವಿಧಾನಸಭೆಯಲ್ಲಿ ಶಾಸಕರು ಕೇಳಿದ ಪ್ರಶ್ನೆಗಳಿಗೆ ಕೆಲ ಅಧಿಕಾರಿಗಳು ಉತ್ತರ ನೀಡುವುದಿಲ್ಲ. ಇಂತಹ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲು ವಿಧಾನಸಭಾ ಉಪಾಧ್ಯಕ್ಷರ ನೇತೃತ್ವದಲ್ಲಿ ಸಮಿತಿ ರಚಿಸಿದ್ದೇನೆ. ಯಾವುದೇ ಪ್ರಶ್ನೆಗೆ ಮೂರು ತಿಂಗಳ ಒಳಗೆ ಉತ್ತರ ಸಿಗದಿದ್ದರೆ ಶಾಸಕರು ಈ ಸಮಿತಿಗೆ ದೂರು ನೀಡಬಹುದು. ಸಮಿತಿಯ ಅಧ್ಯಕ್ಷರು ಸಂಬಂಧ ಪಟ್ಟ ಅಧಿಕಾರಿಯನ್ನು ಕರೆಸಿ ವಿಚಾರಣೆ ನಡೆಸಿ ಕ್ರಮಕ್ಕೆ ಶಿಫಾರಸು ಮಾಡಲಿದ್ದಾರೆ’ ಎಂದು ಅವರು ಮಾಹಿತಿ ನೀಡಿದರು.ವಿಧಾನಸಭೆಯ 16ನೇ ಅಧಿವೇಶನ ಅತ್ಯಂತ ಯಶಸ್ವಿಯಾಗಿ ಪೂರ್ಣಗೊಂಡಿದೆ. ಬಜೆಟ್ ಮೇಲಿನ ಚರ್ಚೆಯಲ್ಲಿ ಭಾಗವಹಿಸಲು ಎಲ್ಲ ಶಾಸಕರಿಗೂ ಅವಕಾಶ ಕಲ್ಪಿಸಿದ್ದೇನೆ ಎಂದರು.