ತೊಡಿಕಾನ: ತೊಡಿಕಾನ ಬಿಎಸ್ಎನ್ಎಲ್ ಟವರ್ಗೆ ಹೊಸ ಬ್ಯಾಟರಿ ಅಳವಡಿಸಲಾಗಿದೆ. ಇದರಿಂದ ತೊಡಿಕಾನ ಭಾಗದ ಜನರ ಬಹುಕಾಲದ ಬೇಡಿಕೆ ಈಡೇರಿದೆ. ಶಾಸಕಿ ಭಾಗೀರಥಿ ಮುರುಳ್ಯ ನೇತೃತ್ವದಲ್ಲಿ ಅರಂತೋಡು ತೊಡಿಕಾನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಅರಂತೋಡು ಪಂಚಾಯತ್ ಅಧ್ಯಕ್ಷ ಕೇಶವ ಅಡ್ತಲೆ ಮತ್ತಿತರರು ಮಂಗಳೂರಿನಲ್ಲಿ
ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರನ್ನು ಭೇಟಿಯಾಗಿ ಬಿಎಸ್ಎನ್ಎಲ್ ಟವರ್ಗೆ ಹೊಸ ಬ್ಯಾಟರಿ ಅಳವಡಿಸುವಂತೆ ಮನವಿ ಸಲ್ಲಿಸಿದ್ದರು. ಸಂಸದರು ಹಾಗೂ ಶಾಸಕರು ಜಿಲ್ಲಾಧಿಕಾರಿ ಎಂ.ಪಿ.ಮುಲ್ಲೈ ಮುಗಿಲನ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿ ಹೊಸ ಬ್ಯಾಟರಿ ಒದಗಿಸುವ ಭರವಸೆ ನೀಡಿದ್ದರು. ಇದೀಗ ವಾರದಲ್ಲಿ ಹೊಸ ಬ್ಯಾಟರಿ ಅಳವಡಿಸುವ ಮೂಲಕ ಗ್ರಾಮೀಣ ಭಾಗದ ಜನರ ಬೇಡಿಕೆ ಈಡೇರಿಸಲಾಗಿದೆ.
ಜೂ.21ರಂದು ಟವರ್ಗೆ ಹೊಸ ಬ್ಯಾಟರಿ ಅಳವಡಿಸಲಾಗಿದೆ. ಇತ್ತೀಚಿಗೆ ಸುದ್ದಿಗೋಷ್ಠಿ ನಡೆಸಿದ್ದ ಗ್ರಾಮಸ್ಥರು ಟವರ್ಗೆ ಹೊಸ ಬ್ಯಾಟರಿ ಅಳವಡಿಸಲು ಒತ್ತಾಯಿಸಿದ್ದರು. ಭರವಸೆ ಈಡೇರಿಸಿದ ಸಂಸದರು, ಶಾಸಕರು ಹಾಗೂ ಜಿಲ್ಲಾಧಿಕಾರಿ ಅವರಿಗೆ ಗ್ರಾಮಸ್ಥರ ಪರವಾಗಿ ಸಂತೋಷ್ ಕುತ್ತಮೊಟ್ಟೆ ಕೃತಜ್ಞತೆ ಸಲ್ಲಿಸಿದ್ದಾರೆ.