ಸುಳ್ಯ:ವಿಶ್ವ ಹಿಂದೂ ಪರಿಷತ್, ಬಜರಂಗದಳ, ಮಾತೃಶಕ್ತಿ ದುರ್ಗಾವಾಹಿನಿ ಸುಳ್ಯ ಪ್ರಖಂಡ ಮತ್ತು ಮೊಸರು ಕುಡಿಕೆ ಉತ್ಸವ ಸಮಿತಿ ಸುಳ್ಯ ಇದರ ಆಶ್ರಯದಲ್ಲಿ ವಿಶ್ವ ಹಿಂದೂ ಪರಿಷತ್ನ ಸ್ಥಾಪನಾ ದಿನಾಚರಣೆಯ ಅಂಗವಾಗಿ ನಡೆಯುವ ‘ಸುಳ್ಯ ಮೊಸರು ಕುಡಿಕೆ ಉತ್ಸವ ಮತ್ತು ವೈಭವದ ಶೋಭಾ ಯಾತ್ರೆ ಸೆ.8ರಂದು ನಡೆಯಲಿದೆ. ಮೊಸರು ಕುಡಿಕೆ ಉತ್ಸವಕ್ಕೆ ಸುಳ್ಯ ಸಂಪೂರ್ಣ ಅಣಿಯಾಗಿದೆ.ಅಪರಾಹ್ನ 2ರಿಂದ
ವೀರ ಯುವಕರಿಂದ ಸಾಹಸಮಯ ಅಟ್ಟಿ ಮಡಕೆ ಒಡೆಯುವ ಶೋಭಾ ಯಾತ್ರೆಯು ಚೆನ್ನಕೇಶವ ದೇವಸ್ಥಾನದ ಎದುರಿನಿಂದ ಆರಂಭಗೊಳ್ಳಲಿದೆ. ಚೆನ್ನಕೇಶವ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ
ಡಾ.ಹರಪ್ರಸಾದ್ ತುದಿಯಡ್ಕ ಶೋಭಾಯಾತ್ರೆಗೆ ಚಾಲನೆ ನೀಡಲಿದ್ದಾರೆ. ಶೋಭಾಯಾತ್ರೆಯು ಚೆನ್ನಕೇಶವ ದೇವಸ್ಥಾನದಿಂದ ಆರಂಭಗೊಂಡು ನಗರದಲ್ಲಿ ವಿವಿಧ ಕಡೆಗಳಲ್ಲಿ ಸಿದ್ಧಪಡಿಸಿದ ಅಟ್ಟಿ ಮಡಕೆ ಒಡೆಯುವ ಪ್ರದರ್ಶನ ನಡೆಯಲಿದೆ. ಆಕರ್ಷಕ ಗೊಂಬೆ ಕುಣಿತ, ವಯಲಿನ್, ಸಿಂಗಾರಿಮೇಳ, ಕುಣಿತ ಭಜನಾ ತಂಡಗಳು ಶೋಭಾಯಾತ್ರೆಗೆ ಮೆರುಗು ತರಲಿದೆ.
ಸಂಜೆ 6ರಿಂದ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ.ಮರ್ಕಂಜ ಶ್ರೀ ಅನ್ನ ಪೂರ್ಣೇಶ್ವರಿ ಕ್ಷೇತ್ರದ ಧರ್ಮದರ್ಶಿಗಳಾದ ಔಘಡ್ ಪೀರ್ ಯೋಗಿ ರಾಜೇಶ್ನಾಥ್ ಜೀ ಉದ್ಘಾಟಿಸುವರು. ಮಂಗಳೂರು ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ವಿಭಾಗ ಮುಖ್ಯಸ್ಥರಾದ ಡಾ.ಅರುಣ್ ಉಳ್ಳಾಲ್ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ.ಅತಿಥಿಗಳಾಗಿ ಜಿಲ್ಲಾ

ಬಜರಂಗದಳ ಸಂಯೋಜಕರಾದ ನವೀನ್ ಮೂಡುಶೆಡ್ಡೆ, ಸಹ ಸಂಯೋಜಕ ಪ್ರವೀಣ್ ಕಲ್ಲೇಗ, ತಾಲೂಕು ಮೊಗೇರ ಸಂಘದ ಅಧ್ಯಕ್ಷ ಕರುಣಾಕರ ಪಿ.ಆರ್.ಪಲ್ಲತಡ್ಕ ಉಪಸ್ಥಿತರಿರುವರು ಮೊಸರು ಕುಡಿಕೆ ಉತ್ಸವ ಸಮಿತಿ ಅಧ್ಯಕ್ಷ ಸತೀಶ್ ಕೆ.ಜಿ ಅಧ್ಯಕ್ಷತೆ ವಹಿಸುವರು.ಈ ಸಂದರ್ಭದಲ್ಲಿ ದೈವ ನರ್ತಕರಾದ ರಾಜೇಶ್ ಪಣಿಕ್ಕರ್ ಮೇನಾಲ ಅವರನ್ನು ಸನ್ಮಾನಿಸಲಾಗುವುದು.
ಬೆಳಿಗ್ಗೆ ದೇವಸ್ಥಾನದ ಮುಂಭಾಗದಲ್ಲಿ ‘ಎಣ್ಣೆ ಕಂಬ’ಏರುವ ಸ್ಪರ್ಧೆ, ಮಹಿಳೆಯರಿಗಾಗಿ ಕಣ್ಣಿಗೆ ಬಟ್ಟೆ ಕಟ್ಟಿ ಮಡಕೆ ಒಡೆಯುವ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.









