ಸಂಪಾಜೆ: ಗ್ರಾಮಗಳು ಅಭಿವೃದ್ಧಿ ಆದಂತೆ, ರಾಜ್ಯ,ದೇಶ ಅಭಿವೃದ್ಧಿ ಆದಂತೆ. ಗ್ರಾಮದ ಅಭಿವೃದ್ಧಿ ಪ್ರತಿ ಗ್ರಾಮ ಪಂಚಾಯತ್ನ ಧ್ಯೇಯ. ಈ ನಿಟ್ಟಿನಲ್ಲಿ ಮುನ್ನಡೆದಿರುವ ಸಂಪಾಜೆ ಗ್ರಾಮ ಪಂಚಾಯತ್ ಅಭಿವೃದ್ಧಿಗೆ ಮಾದರಿಯನ್ನು ರೂಪಿಸಿದೆ ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದ್ದಾರೆ. ಜು.25 ರಂದು ಗಾಂಧಿ ಗ್ರಾಮ ಪುರಸ್ಕೃತ ಸಂಪಾಜೆ ಗ್ರಾಮ ಪಂಚಾಯತ್ನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು. ಎರಡು ಬಾರಿ
ಗಾಂಧಿ ಗ್ರಾಮ ಪ್ರಶಸ್ತಿ ಪಡೆದ ಸಂಪಾಜೆ ಗ್ರಾಮ ಪಂಚಾಯತ್ ಕಳೆದ ಎರಡೂವರೆ ವರ್ಷದಲ್ಲಿ ಮಾಡಿದ ಅಭಿವೃದ್ಧಿ ಕಾರ್ಯ ಮೆಚ್ಚುವಂಥದ್ದು, ಇನ್ನಷ್ಟು ಅಭಿವೃದ್ಧಿ ಸಾಧ್ಯವಾಗಿ ಸಂಪಾಜೆ ಗ್ರಾಮ ರಾಜ್ಯಕ್ಕೆ ಮತ್ತು ದೇಶಕ್ಕೆ ಮಾದರಿಯಾಗಬೇಕು ಎಂದು ಆಶಿಸಿದರು.
ಗಡಿಕಲ್ಲು ಅಂಗನವಾಡಿ ಕೇಂದ್ರದ ನೂತನ ಕಟ್ಟಡ, ಕಲ್ಲುಗುಂಡಿ ಪೇಟೆಯಲ್ಲಿ ಮೀನು ಮಾರುಕಟ್ಟೆಯ ಕಟ್ಟಡ ಕುಡಿಯುವ ನೀರಿನ ಟ್ಯಾಂಕ್ ಉದ್ಘಾಟನೆ ನೆರವೇರಿಸಿದ ಅವರು ಅಂಗವಿಕಲರಿಗೆ ಸಿಂಟೆಕ್ಸ್ ಟ್ಯಾಂಕ್ ವಿತರಿಸಿದರು. ಅಂಗವಿಕಲರ ಮನೆಗೆ ಸೋಲಾರ್ ಅಳವಡಿಕೆ, ಪಂಚಾಯತ್ ಕಚೇರಿಯಲ್ಲಿ ಕುಡಿಯುವ ನೀರಿನ ಕೂಲರ್ ಅಳವಡಿಕೆಯ ಉದ್ಘಾಟನೆ, ಕಾಂಕ್ರೀಟ್ ರಸ್ತೆಗಳ ಉದ್ಘಾಟನೆ ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿದರು.
ಸಂಪಾಜೆ ಗ್ರಾಮ ಪಂಚಾಯತ್ಗೆ ಗಾಂಧಿ ಗ್ರಾಮ ಪ್ರಶಸ್ತಿಯನ್ನು ಸಮಾರಂಭದಲ್ಲಿ ಶಾಸಕಿ ಭಾಗೀರಥಿ ಮುರುಳ್ಯ ಸಂಪಾಜೆ ಗ್ರಾ.ಪಂ. ಅಧ್ಯಕ್ಷ ಜಿ.ಕೆ. ಹಮೀದ್ ಗೂನಡ್ಕ ಅವರಿಗೆ ಹಸ್ತಾಂತರಿಸಿದರು.
ಪಂಚಾಯತ್ ಸಭಾಭವನದಲ್ಲಿ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷ ಜಿ.ಕೆ. ಹಮೀದ್ ಗೂನಡ್ಕ ವಹಿಸಿದ್ದರು. ಸಂಪಾಜೆ ಗ್ರಾಮದ ನೋಡೆಲ್ ಅಧಿಕಾರಿ, ವಲಯ ಅರಣ್ಯಾಧಿಕಾರಿ ಎನ್.ಮಂಜುನಾಥ್ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ತೆಕ್ಕಲ್ ಪ್ರತಿಷ್ಠಾನದ ಅಧ್ಯಕ್ಷ ಟಿ.ಎಂ.ಶಹೀದ್ ತೆಕ್ಕಿಲ್, ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ್ ಎನ್.,ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಇಂಜಿನಿಯರ್ ಮಣಿಕಂಠ,
ಗ್ರಾಮ ಪಂಚಾಯತ್ ಸದಸ್ಯರಾದ ಸೋಮಶೇಖರ ಕೊಯಿಂಗಾಜೆ, ಕೆ.ಆರ್. ಜಗದೀಶ್ ರೈ, ಪಿ.ಕೆ. ಅಬೂಸಾಲಿ ಗೂನಡ್ಕ, ಶೌವಾದ್ ಗೂನಡ್ಕ, ಎಸ್.ಕೆ. ಹನೀಫ್, ವಿಜಯ ಆಲಡ್ಕ, ಸುಮತಿ ಶಕ್ತಿವೇಲು, ಸುಂದರಿ ಮುಂಡಡ್ಕ, ವಿಮಲಾ ಪ್ರಸಾದ್, ಸುಶೀಲ, ರಜನಿ ಶರತ್, ಪ್ರಭಾರ ಪಿಡಿಒ ಪದ್ಮಾವತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗ್ರಾಮ ಪಂಚಾಯತ್ ಸದಸ್ಯ ಸೋಮಶೇಖರ ಕೊಯಿಂಗಾಜೆ ಸ್ವಾಗತಿಸಿದರು. ಅಧ್ಯಕ್ಷ ಜಿ.ಕೆ.ಹಮೀದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಗದೀಶ್ ರೈ ವಂದಿಸಿದರು. ಕಾಂತಿ ಮೋಹನ್ ಕಾರ್ಯಕ್ರಮ ನಿರೂಪಿಸಿದರು.
ಜಿ.ಪಂ.ಮಾಜಿ ಸದಸ್ಯ ಹರೀಶ್ ಕಂಜಿಪಿಲಿ, ರಾಮಚಂದ್ರ ಕಲ್ಲುಗದ್ದೆ, ಸಂತೋಷ್ ಕುತ್ತಮೊಟ್ಟೆ, ಎಸ್.ಪಿ.ಲೋಕನಾಥ್, ಮಹೇಶ್ ಕುಮಾರ್ ಮೇನಾಲ ಮತ್ತಿತರ ಪ್ರಮುಖರು ಭಾಗವಹಿಸಿದ್ದರು.