ಬೆಂಗಳೂರು:2025ರ ವರ್ಷದ ವಿಜಯದಶಮಿ ದಿನದಂದು ಸಂಘವು 100 ವರ್ಷಗಳನ್ನು ಪೂರೈಸುತ್ತದೆ. ಮುಂದಿನ ವರ್ಷವು ತನ್ನ ಕೆಲಸದ ವಿಸ್ತರಣೆ ಮತ್ತು ಬಲಗೊಳಿಸುವಿಕೆಯತ್ತ ದೃಷ್ಟಿಯನ್ನು ಕೇಂದ್ರೀಕರಿಸುತ್ತದೆ.
ಸಾಮಾಜಿಕ ಸಾಮರಸ್ಯ, ರಾಷ್ಟ್ರೀಯ ಪುನರ್ಜಾಗೃತಿಯ ಗುರಿಯನ್ನು ಹೊಂದಿದೆ ಎಂದು ಆರ್ಎಸ್ಎಸ್ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಹೇಳಿದರು. ಮಾರ್ಚ್ 21ರಿಂದ ನಡೆದ ಅಖಿಲ ಭಾರತೀಯ ಪ್ರತಿನಿಧಿ ಸಭೆ ಕುರಿತು
ಮಾಧ್ಯಮಗಳಿಗೆ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿ ಅವರು ಮಾತನಾಡಿದರು.ಸಂಘದ ಕೆಲಸಕ್ಕೆ ಸಮಾಜದ ಬೆಂಬಲವನ್ನು ಹೆಚ್ಚಿಸಿಕೊಳ್ಳುವ ಮತ್ತು ಸಮಾಜವನ್ನು ಸಂಘಟಿಸಲು ನಮ್ಮನ್ನು ಪುನರ್ಸಮರ್ಪಿಸಿಕೊಳ್ಳುವ ಸಮಯ ಎಂದರು. ಶತಮಾನದ ವರ್ಷದಲ್ಲಿ ನಾವು ಹೆಚ್ಚು ಎಚ್ಚರಿಕೆಯಿಂದ, ಗುಣಾತ್ಮಕವಾಗಿ ಮತ್ತು ಸಮಗ್ರವಾಗಿ ಕೆಲಸ ಮಾಡಲು ನಿರ್ಧರಿಸಿದ್ದೇವೆ ಎಂದರು.
ಸಂಘವು ದೇಶದ ಪ್ರತಿಯೊಂದು ಸ್ಥಳಕ್ಕೂ ತಲುಪುವಲ್ಲಿ ಯಶಸ್ವಿಯಾಗಿದೆ. ರಾಷ್ಟ್ರವನ್ನು ಒಗ್ಗೂಡಿಸುವ ಕೆಲಸ ಮಾತ್ರವಲ್ಲದೆ, ಪ್ರಕೃತಿ ವಿಕೋಪಗಳ ಸಮಯದಲ್ಲಿ ಮತ್ತು ನಂತರ ಪರಿಹಾರ ಕಾರ್ಯಾಚರಣೆ ಮತ್ತು ಪುನರ್ವಸತಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದೆ ಎಂದರು.
2025ರ ವಿಜಯದಶಮಿ ದಿನದಿಂದ ಆರಂಭವಾಗುವ ಸಂಘ ಶತಾಬ್ದಿ (ಶತಮಾನ) ಸಮಯದಲ್ಲಿ ನಿರ್ದಿಷ್ಟ ಚಟುವಟಿಕೆಗಳ ಮೇಲೆ ಗಮನವನ್ನು ಕೇಂದ್ರೀಕರಿಸುತ್ತದೆ. ಬರುವ ವರ್ಷದಲ್ಲಿ ದೇಶಾದ್ಯಂತ ಮಂಡಲ ಹಾಗೂ ನಗರ ಮಟ್ಟದಲ್ಲಿ ಗಣವೇಷಧಾರಿ ಸ್ವಯಂಸೇವಕರ ಕಾರ್ಯಕ್ರಮಗಳು ನಡೆಯುತ್ತವೆ ಎಂದರು.’ಪ್ರತಿ ಗ್ರಾಮ- ಪ್ರತಿ ವಸತಿ- ಪ್ರತಿ ಮನೆ’ ಎಂಬ ಎಂಬ ಘೋಷಣೆಯೊಂದಿಗೆ ಮೂರು ವಾರಗಳ ಕಾಲ ಬೃಹತ್ ಪ್ರಮಾಣದ ಮನೆ-ಮನೆ ಸಂಪರ್ಕ ಅಭಿಯಾನವನ್ನು ಅಂದಾಜು 2025ರ ನವೆಂಬರ್ನಿಂದ 2026ರ ಜನವರಿವರೆಗೆ ಯೋಜಿಸಲಾಗಿದೆ. ಸಂಘದ ಕುರಿತು ಮುದ್ರಿತ ಸಾಹಿತ್ಯವನ್ನು ಈ ಸಂದರ್ಭದಲ್ಲಿ ವಿತರಿಸಲಾಗುವುದು. ಈ ಕಾರ್ಯಕ್ರಮವನ್ನು ಸ್ಥಳೀಯ ಘಟಕಗಳು ಮುನ್ನಡೆಸುತ್ತವೆ.
ಎಲ್ಲಾ ಮಂಡಲ ಅಥವಾ ವಸತಿಗಳಲ್ಲಿ ಹಿಂದೂ ಸಮ್ಮೇಳನಗಳನ್ನು ಆಯೋಜಿಸಲಾಗುವುದು. ದಿನನಿತ್ಯದ ಜೀವನದಲ್ಲಿ ಒಗ್ಗಟ್ಟು ಮತ್ತು ಸಾಮರಸ್ಯ, ರಾಷ್ಟ್ರದ ಕಾರಣಕ್ಕಾಗಿ ಎಲ್ಲರ ಕೊಡುಗೆ ಮತ್ತು ಪಂಚ ಪರಿವರ್ತನ ಕಾರ್ಯದಲ್ಲಿ ಪ್ರತಿಯೊಬ್ಬರ ಭಾಗವಹಿಸುವಿಕೆಯ ಸಂದೇಶವನ್ನು ನೀಡಲಾಗುವುದು.
ಮಂಡಲ/ನಗರ ಮಟ್ಟದಲ್ಲಿ ಸಾಮಾಜಿಕ ಸದ್ಭಾವ (ಸಾಮಾಜಿಕ ಸಾಮರಸ್ಯ) ಸಭೆಗಳನ್ನು ಆಯೋಜಿಸುವ ಮೂಲಕ ಸಾಮರಸ್ಯದಿಂದ ಬದುಕುವುದರ ಕುರಿತು ಜನಜಾಗೃತಿ ಮೂಡಿಸಲಾಗುವುದು.ದೇಶದ ಎಲ್ಲ ಜಿಲ್ಲಾ ಮಟ್ಟದಲ್ಲಿ ಪ್ರಮುಖ ನಾಗರಿಕರ ಸಂವಾದಗೋಷ್ಠಿಗಳನ್ನು ಆಯೋಜಿಸಲಾಗುವುದು. ಯುವಕರಿಗಾಗಿ ವಿಶೇಷ ಕಾರ್ಯಕ್ರಮಗಳನ್ನು ಯೋಜಿಸಲಾಗುವುದು. ಹಿಂದೂ ಸಮಾಜದ ಪುನರ್ಜಾಗೃತಿ, ಸಂಘಟನೆಯೇ ಸಂಘದ ಕಾರ್ಯಸೂಚಿಯಾಗಿದೆ. ಶಾಖೆಗಳು ಮತ್ತು ರಾಷ್ಟ್ರವ್ಯಾಪಿ ಚಟುವಟಿಕೆಗಳ ಮೂಲಕ ಸಂಘವು ಎಲ್ಲರನ್ನೂ ಒಗ್ಗೂಡಿಸಿ ಸಾಮರಸ್ಯದ ಸಮಾಜ ನಿರ್ಮಾಣಕ್ಕಾಗಿ ಸಂಘವು ಕೆಲಸ ಮಾಡುತ್ತಿದೆ ಎಂದರು.