ಮಂಗಳೂರು: ತಕರಾರು, ಪೈಕಿ ಪಹಣಿ ಹಾಗೂ ನಮೂನೆ 53, 57 ಪ್ರಕರಣಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಅಧಿಕವಾಗುತ್ತಿದ್ದು, ಈ ಎಲ್ಲಾ ಪ್ರಕರಣಗಳಿಗೆ ಕಾಲಮಿತಿಯೊಳಗೆ ಪರಿಹಾರ ನೀಡಬೇಕು. ಡಿಸಿ-ಎಸಿ ಹಾಗೂ ತಹಶೀಲ್ದಾರ್ ನ್ಯಾಯಾಲಯಗಳು ತತ್ವರಿತಗತಿಯಲ್ಲಿ ಪ್ರಕರಣಗಳನ್ನು ಇತ್ಯರ್ಥಗೊಳಿಸಬೇಕು ಎಂದು ಅಧಿಕಾರಿಗಳಿಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಸೂಚಿಸಿದರು.
ಅವರು ಆ.29ರಂದು ನಗರದ ಜಿ.ಪಂ.ನ ನೇತ್ರಾವತಿ ಸಭಾಂಗಣದಲ್ಲಿ ನಡೆದ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗೆ ಸೂಚನೆ ನೀಡಿದರು.ಪೈಕಿ ಪಹಣಿ ಪ್ರಕರಣಗಳ ಸಂಖ್ಯೆ
ಜಿಲ್ಲೆಯಲ್ಲಿ ಅಧಿಕವಾಗಿದ್ದು,. ಹಲವು ಪ್ರಕರಣಗಳಲ್ಲಿ ಒಂದು ಸರ್ವೇ ನಂಬರ್ ನಲ್ಲಿ 50-100 ಜನರ ಹೆಸರುಗಳು ಇದ್ದು, ಕನಿಷ್ಟ ಕಲಂ 3 ಮತ್ತು 9 ರ ನಡುವೆ ತಾಳೆ ಇರುವ ಪ್ರಕರಣಗಳಲ್ಲಿ ಸರ್ಕಾರವೇ ಕ್ಯಾಂಪೇನ್ ಮೂಲಕ ಪೋಡಿ ಮಾಡಿಕೊಡಲು ಸಿದ್ದವಿದೆ” ಈ ಪ್ರಕರಣಗಳ ಜೊತೆಗೆ ನಮೂನೆ 53, 57 ಪ್ರಕರಣಗಳನ್ನೂ ಕಾಲಮಿತಿಯೊಳಗೆ ಅಧಿಕಾರಿಗಳು ಪರಿಹರಿಸಬೇಕು” ಎಂದು ಅವರು ತಿಳಿಸಿದರು.
ಅಧಿಕಾರಿಗಳು ಉತ್ತಮ ಆಡಳಿತಕ್ಕೆ ಸಹಕರಿಸಿದರೆ, ಎಲ್ಲರೂ ಒಟ್ಟಾಗಿ ಭ್ರಷ್ಟಾಚಾರ ಮುಕ್ತ ಜನಪರ ಸೇವೆ ನೀಡಬಹುದು” ಎಂದವರು ಹೇಳಿದರು.
ಜಿಲ್ಲೆಯಲ್ಲಿ ಸಾವಿರಾರು ತಕರಾರು ಪ್ರಕರಣಗಳು ಬಾಕಿ ಇವೆ. ಈ ಎಲ್ಲಾ ಪ್ರಕರಣಗಳನ್ನೂ ಶೀಘ್ರದಲ್ಲೇ ವಿಲೇವಾರಿ ಮಾಡಬೇಕು. ಕೆಲವು ಜಿಲ್ಲೆಗಳಲ್ಲಿ ಈ ಪ್ರಕರಣಗಳ ಶೀಘ್ರ ಇತ್ಯರ್ಥವಾಗುತ್ತಿದ್ದು, ತಹಶೀಲ್ದಾರ್ ಹಾಗೂ ಉಪ ವಿಭಾಗಾಧಿಕಾರಿ ನ್ಯಾಯಾಲಯಗಳು ವಾರದಲ್ಲಿ ಕನಿಷ್ಟ ನಾಲ್ಕು ದಿನ ಕಾರ್ಯ ನಿರ್ವಹಿಸಬೇಕು ಎಲ್ಲಾ ತಕರಾರು ಪ್ರಕರಣಗಳನ್ನೂ ಶೀಘ್ರ ವಿಲೇವಾರಿ ಗೊಳಿಸಬೇಕು. ಹಾಗೆಂದು ಗುಣಮಟ್ಟದಲ್ಲಿ ಯಾವುದೇ ಹೊಂದಾಣಿಕೆ ಸಲ್ಲ” ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.
ವಿಚಾರಣೆಯಾಗಿ ಆದೇಶಕ್ಕಾಗಿ ಕಾಯ್ದಿರಿಲ್ಪಟ್ಟ ಪ್ರಕರಣಗಳ ಬಗ್ಗೆಯೂ ಗಮನ ಸೆಳೆದ ಸಚಿವರು, “ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ ಹಾಗೂ ತಹಶೀಲ್ದಾರ್ ನ್ಯಾಯಾಲಯದಲ್ಲಿ ವಿಚಾರಣೆಯಾಗಿ ಆದೇಶಕ್ಕೆ ಕಾಯ್ದಿರಿಸಲ್ಪಟ್ಟ ಪ್ರಕರಣಗಳ ವಿಲೇವಾರಿಗೂ ಅಧಿಕಾರಿಗಳು ವಿಳಂಬ ನೀತಿ ಅನುಸರಿಸಬಾರದು. ಆದೇಶಕ್ಕೆ ಕಾಯ್ದಿರಿಸಲ್ಪಟ್ಟ ಪ್ರಕರಣಗಳಿಗೆ ಸಂಬಂಧಿಸಿದಂತೆ 15 ದಿನಗಳೊಳಗಾಗಿ ಆದೇಶ ಹೊರಡಿಸಬೇಕು ಎಂಬ ಕಾನೂನು ಇದೆ. ಕಾನೂನಿನನ್ವಯ ಅಧಿಕಾರಿಗಳು ತುರ್ತಾಗಿ ಆದೇಶ ಹೊರಡಿಸಬೇಕು” ಎಂದು ತಾಕೀತು ಮಾಡಿದರು.ಡಿಸಿ
ಎ.ಸಿ ನ್ಯಾಯಾಲಯಗಳಲ್ಲಿ ಬಾಕಿ ಇರುವ ಎಲ್ಲಾ ಪ್ರಕರಣಗಳನ್ನು 3 ತಿಂಗಳ ಒಳಗೆ ವಿಲೇ ಮಾಡಬೇಕೆಂದು ಸೂಚಿಸಿದರು.
ದಾಖಲೆಗಳ ಡಿಜಿಟಲೀಕರಣ:
ಮಂಗಳೂರು ರೆಕಾರ್ಡ್ ರೂಮ್ ಗೆ ಭೇಟಿ ನೀಡಿದ ಸಚಿವ ಕೃಷ್ಣ ಬೈರೇಗೌಡ ಅವರು ನೂರು ವರ್ಷಗಳಷ್ಟು ಹಳೆಯ ದಾಖಲೆಗಳನ್ನು ವೀಕ್ಷಿಸಿದರು. ಅಲ್ಲದೆ, ಇಷ್ಟು ಹಳೆಯ ದಾಖಲೆಗಳನ್ನು ಹೇಗೆ ರಕ್ಷಣೆ ಮಾಡುತ್ತಿದ್ದೀರಿ? ಎಂದು ಅಧಿಕಾರಿಗಳಿಗೆ ಮಾಹಿತಿಯನ್ನು ಕೇಳಿ ಪಡೆದರು.“ನೂರಾರು ವರ್ಷಗಳ ಹಳೆಯ ದಾಖಲೆಗಳನ್ನು ಸಂರಕ್ಷಿಸುವುದು ಕಷ್ಟದ ಕೆಲಸ. ಅಲ್ಲದೆ, ಇಂತಹ ದಾಖಲೆಗಳನ್ನು ತಿದ್ದುವ ಸಾಧ್ಯತೆಯೂ ಇದ್ದು, ಹೀಗಾಗಿ ರೆಕಾರ್ಡ್ ರೂಂನ ಎಲ್ಲಾ ದಾಖಲೆಗಳನ್ನೂ ಸ್ಕ್ಯಾನ್ ಮಾಡುವ ಮೂಲಕ ಡಿಜಿಟಲೀಕರಣಗೊಳಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಈಗಾಗಲೇ ಪೈಲಟ್ ಯೋಜನೆಯ ರೂಪದಲ್ಲಿ 6 ತಾಲೂಕುಗಳಲ್ಲಿ ದಾಖಲೆ ಡಿಜಿಟಲೀಕರಣ ಮಾಡಲಾಗುತ್ತಿದೆ. ಎಲ್ಲಾ ದಾಖಲೆಗಳನ್ನೂ ಡಿಜಿಟಲೀಕರಣ ಮಾಡುವ ಮೂಲಕ ಜನರೂ ಸಹ ತಮ್ಮ ದಾಖಲೆಗಳನ್ನು ಆನ್ ಲೈನ್ ಮೂಲಕ ನೋಡಬಹುದು. ಇದರಿಂದ ಜನರ ವಸೂಲಿ, ಶೋಷಣೆಯನ್ನು ತಪ್ಪಿಸಬಹುದು. ಪೈಲಟ್ ಯೋಜನೆ ಯಶಸ್ವಿಯಾದ ನಂತರ ಮುಂದಿನ ದಿನಗಳಲ್ಲಿ ಎಲ್ಲಾ ತಾಲೂಕುಗಳ ದಾಖಲೆಗಳನ್ನೂ ಡಿಜಿಟಲೀಕರಿಸಲಾಗುವುದು” ಎಂದು ಅವರು ಮಾಹಿತಿ ನೀಡಿದರು.
ಭೂ ಕುಸಿತ ಕಡಲ್ಕೊರೆತ ತಡೆಗೆ ಕ್ರಮ:
ಪರಿಶೀಲನಾ ಸಭೆಯಲ್ಲಿ ಕಡಲ್ಕೊರೆತ ಹಾಗೂ ಭೂ ಕುಸಿತದ ಬಗ್ಗೆಯೂ ಎಚ್ಚರಿಕೆಯ ಮಾತುಗಳನ್ನಾಡಿದಸಚಿವ ಕೃಷ್ಣ ಬೈರೇಗೌಡ ಅವರು, ಕಡಲ್ಕೊರೆತ ಅಧಿಕವಾಗಿರುವ ದುರ್ಬಲ ಪ್ರದೇಶಗಳ ಬಗ್ಗೆ ಅಧಿಕಾರಿಗಳು ಎಚ್ಚರದಿಂದ ಇರಬೇಕು. ಸಮುದ್ರ ಸವೆತದ ಬಗ್ಗೆ ಕೇರಳ ಮಾದರಿಯ ಬಗ್ಗೆ ಅಧ್ಯಯನ-ಸಂಶೋಧನೆಯ ಅಗತ್ಯವಿದ್ದು ಬಂದರು ಇಲಾಖೆ ಜೊತೆಗೂ ಮಾತುಕತೆ ನಡೆಸಲಾಗುವುದು ಎಂದರು.
ಭೂ-ಕುಸಿತದ ಬಗ್ಗೆಯೂ ಪರಿಶೀಲನೆ ನಡೆಸಿದ ಸಚಿವರು “ಈ ಹಿಂದೆ ಕರಾವಳಿ ಭಾಗದಲ್ಲಿ ಅಧಿಕ ಭೂ ಕುಸಿತ ಸಾಧ್ಯತೆ ಇರುವ 81 ಪ್ರದೇಶವನ್ನು ಗುರುತು ಮಾಡಲಾಗಿತ್ತು. ಆದರೆ, ಅಧಿಕಾರಿಗಳು 71 ಪ್ರದೇಶಗಳ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಈ ಬಗ್ಗೆ ಸೂಕ್ತ ಕ್ರಮ ವಹಿಸಲಾಗುವುದೆಂದು ತಿಳಿಸಿದರು.
ಸಾರ್ವಜನಿಕ ಆಸ್ತಿಗಳಿಗೆ ಉಂಟಾಗಿರುವ ಮಳೆಹಾನಿ ದುರಸ್ಥಿಗೆ 2019 ರಿಂದ 2022 ರ ಅವಧಿಯಲ್ಲಿ ಮಂಜೂರಾಗಿ ಇನ್ನೂ ಪೂರ್ಣಗೊಳ್ಳದ ಕಾಮಗಾರಿಗಳನ್ನು(ಕೊರೋನಾ ಸೇರಿದಂತೆ) ಮುಂದಿನ 15 ದಿನಗಳಲ್ಲಿ ಪೂರ್ಣಗೊಳಿಸಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ. ಈ ಕಾಮಗಾರಿಗಳು ಇನ್ನೂ ಪೂರ್ಣಗೊಳ್ಳದಿರಲು ಕಾರಣವೇನು? 45 ದಿನಗಳಲ್ಲಿ ಮುಗಿಯಬೇಕಾದ ಕಾಮಗಾರಿಗಳು 2019ರಿಂದಲೂ ಬಾಕಿ ಉಳಿದಿವೆ ಎಂದರೆ ಏನರ್ಥ ಎಂದು ಅಸಮಾಧಾನ ವ್ಯಕ್ತಪಡಿಸಿಸ ಸಚಿವರು, ಮುಂದಿನ 15 ದಿನಗಳಲ್ಲಿ ಈ ಎಲ್ಲಾ ಕಾಮಗಾರಿಗಳೂ ಪೂರ್ಣಗೊಳಿಸಬೇಕು, ಸಂಬಂಧಪಟ್ಟ ಕಾಮಗಾರಿಗೆ ಹಣ ಪಾವತಿ ಮಾಡಬೇಕು. ಕಳೆದ ವರ್ಷದ ಬಾಕಿಯನ್ನೂ ಸಂಪೂರ್ಣವಾಗಿ ವಿಲೇವಾರಿ ಮಾಡಬೇಕು ಎಂದು ಸಭೆಯಲ್ಲಿ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
ಅಲ್ಲದೆ, ಪ್ರಕೃತಿ ವಿಕೋಪ ಸಂದರ್ಭದ ತುರ್ತು ಖರ್ಚುಗಳಿಗಾಗಿ ಜಿಲ್ಲಾಧಿಕಾರಿ ಖಾತೆಯಲ್ಲಿ 7 ಕೋಟಿ ರೂ. ಹಾಗೂ ತಹಶೀಲ್ದಾರ್ ಖಾತೆಯಲ್ಲಿ ತಲಾ 3 ಕೋಟಿ ರೂ. ಹಣ ಇದೆ. ಈ ಹಣವನ್ನೂ ಸಹ ಅಗತ್ಯ ಕಾಮಗಾರಿಗಳಿಗೆ ಬಳಸಿಕೊಳ್ಳಬೇಕು ಎಂದು ಅವರು ತಿಳಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯ ಪ್ರವಾಸ ಕೈಗೊಂಡಿರುವ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ಮಂಗಳೂರಿನ ತಾಲೂಕು ಕಚೇರಿ, ಪಡೀಲಿನಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಕಟ್ಟಡದ ಕಾಮಗಾರಿಯ ಪ್ರಗತಿ ಹಾಗೂ ಉಳ್ಳಾಲದ ಮುಕ್ಕಚೇರಿ ಪ್ರಾಥಮಿಕ ಶಾಲೆ, ಸೋಮೇಶ್ವರ ಪುರಸಭೆ ಹಾಗೂ ಬಟ್ಟಂಪಾಡಿಯಲ್ಲಿ ಮಿಂಚಿನ ಸಂಚಾರ ನಡೆಸಿದರು.
ಮಂಗಳೂರಿನ ಕಂದಾಯ ಇಲಾಖೆ ತಳಮಟ್ಟದ ಕಚೇರಿಗಳಾದ ಗ್ರಾಮಲೆಕ್ಕಾಧಿಕಾರಿ, ನಾಡಕಚೇರಿ, ತಹಶೀಲ್ದಾರ್, ಉಪನೋಂದಣಿ ಕಚೇರಿಳಿಗೆ ಅನಿರೀಕ್ಷಿತವಾಗಿ ಭೇಟಿ ನೀಡಿ ಅಧಿಕಾರಿಗಳು ಯಾವ ರೀತಿ ಜನರ ಸಮಸ್ಯೆ ಗಳಿಗೆ ಸ್ಪಂದಿಸುತ್ತಿದ್ದಾರೆ ಎನ್ನುವುದನ್ನು ಪರಿಶೀಲಿಸಿದರು.
2017-18ರಲ್ಲಿ ಪಡೀಲ್ ನಲ್ಲಿ ಜಿಲ್ಲಾಧಿಕಾರಿ ಕಚೇರಿ ಕಟ್ಟಡದ ಕೆಲಸ ಆರಂಭಗೊಂಡಿತ್ತು. 50 ರಿಂದ 55 ಕೋಟಿ ರೂ ವೆಚ್ಚದ ಕಾಮಗಾರಿ ಈಗಾಗಲೇ ನಡೆದಿದೆ. ಆದರೆ ಕಾಮಗಾರಿ ಪೂರ್ಣಗೊಂಡಿಲ್ಲ, ಜತೆಗೆ ಕಚೇರಿಯೂ ಸ್ಥಳಾಂತರವಾಗಿಲ್ಲ. ಒಂದು ವರ್ಷದೊಳಗಾಗಿ ಜಿಲ್ಲಾಧಿಕಾರಿ ಕಚೇರಿಯನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲಾಗುವುದು ಎಂದು ಆಶ್ವಾಸನೆ ನೀಡಿದರು.
ಹಳೇ ಕಾಲದ ಪತ್ರ ವ್ಯವಹಾರವನ್ನು ಕೈಬಿಟ್ಟು ತಂತ್ರಜ್ಞಾನಕ್ಕೆ ಒಗ್ಗಿಕೊಳ್ಳುವ ಹಾಗೂ ಕಡತಗಳ ಶೀಘ್ರ ವಿಲೇವಾರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಆಗಸ್ಟ್ 15ರಿಂದ ಇ-ಆಫೀಸ್ ಅನುಷ್ಠಾನಗೊಳಿಸಲಾಗಿದೆ. ಎಲ್ಲಾ ಜಿಲ್ಲಾಧಿಕಾರಿಗಳೂ ಈಗಾಗಲೇ ಇ-ಆಫೀಸ್ ಮೂಲಕವೇ ಕಡತ ವಿಲೇವಾರಿ ಮಾಡುತ್ತಿದ್ದು, ತಹಶೀಲ್ದಾರ್ ಹಾಗೂ ವಿಭಾಗಾಧಿಕಾರಿಗಳು ಸೆಪ್ಟೆಂಬರ್.1ರ ಒಳಗಾಗಿ ಇ-ಆಫೀಸ್ ಬಳಸಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ವಿಧಾನಸಭಾ ಸದಸ್ಯರಾದ ಅಶೋಕ್ ಕುಮಾರ್ ರೈ, ವೇದವ್ಯಾಸ್ ಕಾಮತ್ ಮತ್ತುವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಮಂಜುನಾಥ್ ಭಂಡಾರಿ, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ, ಕಂದಾಯ ಇಲಾಖೆಯ ಆಯುಕ್ತ ಸುನಿಲ್ ಕುಮಾರ್ ಹಾಗೂ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.