ಜೈಪುರ: ಆರಂಭಿಕ ಬ್ಯಾಟರ್ಗಳಾದ ಫಿಲ್ ಸಾಲ್ಟ್ ಹಾಗೂ ವಿರಾಟ್ ಕೊಹ್ಲಿ ಗಳಿಸಿದ ಅಮೋಘ ಅರ್ಧಶತಕಗಳ ಬಲದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡವು ಆತಿಥೇಯ ರಾಜಸ್ಥಾನ ರಾಯಲ್ಸ್ (ಆರ್ಆರ್) ಎದುರು 9 ವಿಕೆಟ್ಗಳ ಜಯ ಸಾಧಿಸಿದೆ.
ಜೈಪುರದ ಸವಾಯಿ ಮಾನ್ ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ನಿಗದಿತ 20 ಓವರ್ಗಳಲ್ಲಿ ನಾಲ್ಕು ವಿಕೆಟ್ಗೆ 173 ರನ್ ಗಳಿಸಿತ್ತು. ಗುರಿ ಬೆನ್ನತ್ತಿದ
ಆರ್ಸಿಬಿ, 17.3 ಓವರ್ಗಳಲ್ಲಿ ಒಂದು ವಿಕೆಟ್ಗೆ 175 ರನ್ ಬಾರಿಸಿ ಜಯದ ನಗೆ ಬೀರಿತು. ಸ್ಪರ್ಧಾತ್ಮಕ ಮೊತ್ತದ ಬೆನ್ನತ್ತಿದ ಆರ್ಸಿಬಿಗೆ ಸಾಲ್ಟ್ ಮತ್ತು ಕೊಹ್ಲಿ ಜೋಡಿ ಮೊದಲ ವಿಕೆಟ್ಗೆ 8.4 ಓವರ್ಗಳಲ್ಲಿ 92 ರನ್ ಗಳಿಸಿತು. ಆರಂಭದಿಂದಲೇ ಸ್ಪೋಟಕ ಬ್ಯಾಟಿಂಗ್ ಮಾಡಿದ ಸಾಲ್ಟ್, ಕೇವಲ 33 ಎಸೆತಗಳಲ್ಲಿ 65 ರನ್ ಬಾರಿಸಿದರು. ಅವರ ಇನಿಂಗ್ಸ್ನಲ್ಲಿ 6 ಸಿಕ್ಸ್ ಹಾಗೂ 5 ಬೌಂಡರಿಗಳಿದ್ದವು.
9ನೇ ಓವರ್ನಲ್ಲಿ ಕುಮಾರ್ ಕಾರ್ತಿಕೇಯ ಬೌಲಿಂಗ್ನಲ್ಲಿ ಸಾಲ್ಟ್ ಔಟಾದ ನಂತರ ಕೊಹ್ಲಿ, ದೇವದತ್ತ ಪಡಿಕ್ಕಲ್ ಮುರಿಯದ ಎರಡನೇ ವಿಕೆಟ್ ಪಾಲುದಾರಿಕೆಯಲ್ಲಿ 83 ರನ್ ಕಲೆ ಹಾಕಿದರು. 45 ಎಸೆತಗಳನ್ನು ಎದುರಿಸಿದ ಕೊಹ್ಲಿ, 2 ಸಿಕ್ಸ್, 4 ಬೌಂಡರಿ ಸಹಿತ ಅಜೇಯ 62 ರನ್ ಗಳಿಸಿದರೆ, ಪಡಿಕ್ಕಲ್ 28 ಎಸೆತಗಳಲ್ಲಿ ಔಟಾಗದೆ 40 ರನ್ ಚಚ್ಚಿದರು. ಅವರ ಬ್ಯಾಟ್ನಿಂದ ಒಂದು ಸಿಕ್ಸ್ ಹಾಗೂ ಐದು ಬೌಂಡರಿ ಬಂದವು.
ಇದಕ್ಕೂ ಮೊದಲು, ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ಸ್ ಇನಿಂಗ್ಸ್ಗೆ ಯಶಸ್ವಿ ಜೈಸ್ವಾಲ್ ಬಲ ತುಂಬಿದರು. ಅವರು, 47 ಎಸೆತಗಳಲ್ಲಿ (2 ಸಿಕ್ಸರ್, 10 ಬೌಂಡರಿ) 75 ರನ್ ಗಳಿಸಿದರು. ರಿಯಾನ್ ಪರಾಗ್ (22 ಎಸೆತ, 30 ರನ್) ಹಾಗೂ ಧ್ರುವ ಜುರೇಲ್ ಸಹ (23 ಎಸೆತ, ಅಜೇಯ 35 ರನ್) ಉಪಯುಕ್ತ ಆಟವಾಡಿದರು. ಹೀಗಾಗಿ, ಆತಿಥೇಯರು ಸ್ಪರ್ಧಾತ್ಮಕ ಮೊತ್ತ ಕಲೆಹಾಕಲು ಸಾಧ್ಯವಾಯಿತು.ಆರ್ಸಿಬಿ ಪರ ಭುವನೇಶ್ವರ್ ಕುಮಾರ್, ಜೋಶ್ ಹ್ಯಾಜಲ್ವುಡ್, ಯಶ್ ದಯಾಳ್ ಮತ್ತು ಕೃಣಾಲ್ ಪಾಂಡ್ಯ ಒಂದೊಂದು ವಿಕೆಟ್ ಉರುಳಿಸಿದರು.
ಈ ಗೆಲುವಿನೊಂದಿಗೆ ಆರ್ಸಿಬಿ ತಂಡ ಪಾಯಿಂಟ್ ಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದರೆ, ರಾಯಲ್ಸ್ 7ನೇ ಸ್ಥಾನದಲ್ಲೇ ಉಳಿಯಿತು. ಉಭಯ ತಂಡಗಳು ಟೂರ್ನಿಯಲ್ಲಿ ತಲಾ ಆರು ಪಂದ್ಯಗಳನ್ನು ಆಡಿವೆ.
ಆರ್ಸಿಬಿ ತವರಿನ (ಬೆಂಗಳೂರು) ಮೈದಾನದಲ್ಲಿ ಆಡಿದ ಎರಡು ಪಂದ್ಯಗಳಲ್ಲಿ ಸೋಲು ಕಂಡಿದ್ದರೂ, ಉಳಿದ ನಾಲ್ಕು ಪಂದ್ಯಗಳಲ್ಲಿ ಜಯ ಸಾಧಿಸಿದೆ. ಹೀಗಾಗಿ, 8 ಪಾಯಿಂಟ್ಗಳನ್ನು ಕಲೆಹಾಕಿದೆ. ಈ ಪಂದ್ಯಕ್ಕೂ ಮುನ್ನ 5ನೇ ಸ್ಥಾನದಲ್ಲಿತ್ತು. 4ನೇ ಸೋಲು ಕಂಡ ರಾಯಲ್ಸ್7ನೇ ಸ್ಥಾನದಲ್ಲೇ ಉಳಿದಿದೆ.