ಸುಳ್ಯ:ಇದೀಗ ಮಕ್ಕಳಿಗೆ ಬೇಸಿಗೆ ರಜೆ. ರಜಾ ದಿನಗಳು ಆರಂಭವಾದೊಡನೆ ಬೇಸಿಗೆ ಶಿಬಿರಗಳ ಕಲರವ. ವಿವಿಧ ರೀತಿಯ ಕಲಾ, ಸಾಂಸ್ಕೃತಿಕ ಕಲಿಕೆಯ ಸಂಭ್ರಮ.ಈ ಮಧ್ಯೆ ಸುಳ್ಯದ ರಂಗ ಮಯೂರಿ ಕಲಾ ಶಾಲೆಯ ವತಿಯಿಂದ ಸುಳ್ಯ ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದ ವಠಾರದಲ್ಲಿ ನಡೆಯುತ್ತಿರುವ ‘ಬಣ್ಣ’ ಬೇಸಿಗೆ ರಂಗ ಶಿಬಿರ ವಿಶೇಷ ಗಮನ ಸೆಳೆಯುತಿದೆ. ಎಳೆ ವಯಸ್ಸಿನ ಮಕ್ಕಳಿಗೆ ರಂಗ ಭೂಮಿಯ ಪರಿಚಯಿಸುವ, ನಾಟಕ ಕಲಿಕೆಯ
ಬಾಲ ಪಾಠ ಹೇಳಿ ಕೊಡುವ ಶಿಬಿರದಲ್ಲಿ ಆರು ಭಾಷೆಯಲ್ಲಿ ವಿಭಿನ್ನ ನಾಟಕಗಳು ತಯಾರಾಗುತಿದೆ.
ಕನ್ನಡ, ಉತ್ತರ ಕರ್ನಾಟಕ ಭಾಗದ ಕನ್ನಡ, ಅರೆಭಾಷೆ, ತುಳು, ಹಿಂದಿ ಹಾಗೂ ಇಂಗ್ಲೀಷ್ನಲ್ಲಿ ನಾಟಕ ಕಲಿಸಲಾಗುತ್ತದೆ. ಶಿಬಿರದಲ್ಲಿ ಭಾಗವಹಿಸಿದ 115ಕ್ಕೂ ಹೆಚ್ಚು ಮಕ್ಕಳನ್ನು ವಿವಿಧ ತಂಡಗಳಾಗಿ ರಚಿಸಿ ಶಿಬಿರದಲ್ಲಿ ವಿವಿಧ ಭಾಷೆಗಳಲ್ಲಿ ನಾಟಕವನ್ನು ಕಲಿಸಲಾಗುತ್ತದೆ. ಶಿಬಿರದ ಕೊನೆಯಲ್ಲಿ ಮಕ್ಕಳು ಕಲಿತ ನಾಟಕದ ಪ್ರದರ್ಶನವೂ ನಡೆಯಲಿದೆ. ಆಯಾ ಭಾಷೆ ಗೊತ್ತಿಲ್ಲದ ಮಕ್ಕಳಿಗೆ ಭಾಷೆಯನ್ನು ಕಲಿಸಿ ಬಳಿಕ ನಾಟಕ ತರಬೇತಿ ನೀಡಲಾಗುತ್ತದೆ. ಅಭಿನಯ ಪ್ರಧಾನ ರಂಗ ತರಬೇತಿ

ಶಿಬಿರದಲ್ಲಿ ಬಹು ಭಾಷಾ ವೈವಿಧ್ಯತೆಯ ಜೊತೆಗೆ ನವರಸಗಳ ಅಭಿನಯದ ಮೂಲಕ ಕಾರ್ಯಾಗಾರ ಮೋಡಿ ಮಾಡಿದೆ. ಭಾಷಾ ಶುಧ್ದಿ, ಸ್ಪಷ್ಟ ಉಚ್ಚಾರಣೆ, ರಂಗ ಚಲನೆ, ರಂಗ ಸಂಗೀತ, ರಂಗ ಪರಿಕರ ತಯಾರಿ, ರಂಗ ಪ್ರಸಾಧನ ಕಾರ್ಯಾಗಾರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ.
7 ವಯಸ್ಸಿನಿಂದ 17 ವಯಸ್ಸಿನವರೆಗಿನ 115 ಮಂದಿ ಮಕ್ಕಳು ಶಿಬಿರದಲ್ಲಿ ಭಾಗವಹಿಸಿದ್ದಾರೆ. ಕನ್ನಡದಲ್ಲಿ ‘ಚಾಕ್ ಸರ್ಕಲ್’ ಎಂಬ ನಾಟಕವನ್ನು ಹೇಮಂತ್ ಬೆಂಗಳೂರು ಅವರು ಕಲಿಸುತ್ತಿದ್ದಾರೆ. ಉತ್ತರ ಕರ್ನಾಟಕದ ಭಾಗದ ಕನ್ನಡದಲ್ಲಿ ಮಂಜು ಸಾಣೆಹಳ್ಳಿ ಅವರು ‘ಕಾಡಿನ ಮಕ್ಕಳು’ ಎಂಬ ನಾಟಕವನ್ನು ಕಲಿಸುತ್ತಿದ್ದಾರೆ. ತುಳು ಭಾಷೆಯಲ್ಲಿ ‘ಜೈ ಕುಲೆ’ ನಾಟಕವನ್ನು ರೋಹಿತ್ ಬೈಕಾಡಿ ನಿರ್ದೇಶಿಸುತ್ತಾರೆ. ಅರೆಭಾಷೆಯಲ್ಲಿ ‘ಕುಬೇರನ ಸಮ್ಮಾನ’ ನಾಟಕವನ್ನು ಮೋಹನ್ ಶೇಣಿ ಕಲಿಸುತ್ತಿದ್ದಾರೆ. ಹಿಂದಿಯಲ್ಲಿ

‘ಅಂಧೇರಿ ನಗರ ಚೌಪಟ್ ರಾಜ’ ಎಂಬ ನಾಟಕವನ್ನು ವಿನೋದ್ ಕರ್ಕೇರಾ ಕಲಿಸುತ್ತಿದ್ದಾರೆ. ಇಂಗ್ಲೀಷ್ನಲ್ಲಿ ‘ಸ್ಟೋರೀಸ್ ಆಪ್ ಪಂಚತಂತ್ರ’ ನಾಟಕವನ್ನು ಶುಭಕರ್ ಪುತ್ತೂರು ನಿರ್ದೇಶಿಸುತ್ತಾರೆ. ಪ್ರತಿ ಭಾಷೆಯಲ್ಲಿ 30 ರಿಂದ 45 ನಿಮಿಷದ ನಾಟಕವನ್ನು ಮಕ್ಕಳು ಕಲಿತು ಆಡಿ ತೋರಿಸಲಿದ್ದಾರೆ.
ರಂಗಮಯೂರಿ ಕಲಾ ಶಾಲೆಯ ನಿರ್ದೇಶಕ ಲೋಕೇಶ್ ಊರುಬೈಲು ನಿರ್ದೇಶನದಲ್ಲಿ 9 ದಿನಗಳ ಕಾಲ ನಡೆಯುವ ಶಿಬಿರದಲ್ಲಿ ಮಕ್ಕಳಿಗೆ ನಾಟಕದ ಜೊತೆಗೆ ವರ್ಲಿ ಆರ್ಟ್, ಪೆಯಿಂಟಿಂಗ್, ರಂಗ ಪರಿಕರ ರಚನೆ, ಯೋಗ, ಧ್ಯಾನ, ಅಗ್ನಿ ಸುರಕ್ಷಾ ಮಾಹಿತಿ, ಪ್ರಥಮ ಚಿಕಿತ್ಸೆ, ಹಾಡು, ರಂಗ ಗೀತೆ, ಡ್ಯಾನ್ಸ್, ಸೇರಿ

ವೈವಿಧ್ಯಮಯ ಕಲಿಕೆಗಳನ್ನು ಶಿಬಿರದಲ್ಲಿ ಕಲಿಸಲಾಗುತ್ತದೆ. ಪ್ರತಿ ವರ್ಷ ರಂಗಮಯೂರಿ ಕಲಾ ಶಾಲೆಯ ವತಿಯಿಂದ ಶಿಬಿರವನ್ನು ನಡೆಸುತ್ತಿದ್ದು ಈ ಬಾರಿ ಪೂರ್ತಿಯಾಗಿ ರಂಗ ಕಲಿಕೆಗೆ ಆದ್ಯತೆ ನೀಡಲಾಗಿದೆ. ಮಕ್ಕಳಲ್ಲಿ ರಂಗಾಸಕ್ತಿ ಬೆಳೆಸುವುದು ಶಿಬಿರದ ಉದ್ದೇಶ ಎನ್ನುತ್ತಾರೆ ಲೋಕೇಶ್ ಊರುಬೈಲು.











