ಬೆಂಗಳೂರು: ರಾಜ್ಯದ ವಿವಿಧೆಡೆ ಶುಕ್ರವಾರ ಮಳೆಯಾಗಿದ್ದು ವಾತಾವರಣವನ್ನು ತಂಪಾಗಿಸಿದೆ. ಕೆಲವೆಡೆ ಗುಡುಗು ಮಿಂಚಿನ, ಬಿರುಗಾಳಿ ಸಹಿತ ಮಳೆ ಸುರಿದಿದೆಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ, ಕೊಪ್ಪ ಪಟ್ಟಣ ಸೇರಿದಂತೆ ಹಲವೆಡೆ ಮಳೆಯಾಗಿದೆ. ಶೃಂಗೇರಿಯಲ್ಲಿ ಅರ್ಧಗಂಟೆಗೂ ಹೆಚ್ಚು ಕಾಲ ಸುರಿದ ಮಳೆ ತಂಪೆರೆದಿದೆ.
ಕೊಡಗು, ಬೆಳಗಾವಿ, ವಿಜಯ ನಗರ, ವಿಜಯಪುರ, ಬಾಗಲಕೋಟೆ, ಧಾರವಾಡ ಹಾಗೂ
ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯಾಗಿದೆ.
ಬೆಳಗಾವಿ ನಗರ ಹಾಗೂ ತಾಲ್ಲೂಕಿನ ವಿವಿಧೆಡೆ ಗುಡುಗು– ಮಿಂಚಿನ ಸಹಿತ ಉತ್ತಮ ಮಳೆಯಾಗಿದೆ. ರಾಮದುರ್ಗ, ಬೈಲಹೊಂಗಲ ಪಟ್ಟಣ ಮತ್ತು ತಾಲ್ಲೂಕಿನ ವಿವಿಧೆಡೆ ಸಾಧಾರಣ ಮಳೆ ಯಾಗಿದೆ.
ದಾವಣಗೆರೆ, ಚಿತ್ರದುರ್ಗ ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಮಳೆಯಾಗಿದ್ದು ಸುಡು ಬಿಸಿಲಿನಿಂದ ಕಂಗೆಟ್ಟಿದ್ದ ಜನರಿಗೆ ವರ್ಷದ ಮೊದಲ ಮಳೆಯು ಹಿತಕರ ವಾತಾವರಣ ಸೃಷ್ಟಿಸಿತು. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ, ಕುಂಸಿ, ಆನಂದಪುರ, ಕೋಣಂದೂರು ಭಾಗದಲ್ಲಿ ತುಂತುರು ಮಳೆ ಬಂದಿದೆ. ಕೊಡಗಿನಲ್ಲಿ ಶುಕ್ರವಾರ ಗುಡುಗಿನೊಂದಿಗೆ ಮಳೆ ಸುರಿದಿದೆ. ನಾಪೊಕ್ಲು ಕಕ್ಕಬ್ಬೆ, ಯವಕಪಾಡಿ, ನಾಲಡಿ, ನೆಲಜಿ, ಬಲ್ಲಮಾವಟಿ ಭಾಗಗಳಲ್ಲಿ ಮಳೆಯಾಯಿತು. ಮೂರ್ನಾಡು ಸುತ್ತಮತ್ತಲ ಪ್ರದೇಶಗಳಲ್ಲೂ ವರ್ಷಧಾರೆಯಾಯಿತು.
ರಾಜ್ಯದಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗುವ ಸಾಧ್ಯತೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ದಕ್ಷಿಣ ಕನ್ನಡ, ಉಡುಪಿ ಕರಾವಳಿ ಪ್ರದೇಶಗಳು ಮತ್ತು ಶಿವಮೊಗ್ಗ, ಹಾಸನ, ಕೊಡಗು ಮತ್ತು ಚಿಕ್ಕಮಗಳೂರಿನ ಗುಡ್ಡಗಾಡು ಪ್ರದೇಶಗಳಲ್ಲೂ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣದ ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ, ಮಂಡ್ಯ, ರಾಮನಗರ, ವಿಜಯನಗರ, ಮೈಸೂರಿನಲ್ಲೂ ಮಳೆಯಾಗಲಿದೆ.ಮುಂದಿನ ಮೂರು ದಿನಗಳಲ್ಲಿ ದಕ್ಷಿಣ ಪ್ರದೇಶಗಳಲ್ಲಿ ಗಾಳಿಯ ವೇಗ ಗಂಟೆಗೆ 30-40 ಕಿಮೀ ತಲುಪುವ ನಿರೀಕ್ಷೆಯಿದೆ. ರಾಜ್ಯದ ಕೆಲವೆಡೆ ಗುಡುಗು, ಮಿಂಚು ಸಹಿತ ಮಳೆಯಾಗುವ ಸಾಧ್ಯತೆ ಇದೆ,
ಕೆಲವೆಡೆ ತುಂತುರು ಮಳೆಯಾಗಲಿದೆ ಎಂಬ ಸೂಚನೆ ಇದೆ.