ಮಂಗಳೂರು: ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಪ್ರತಿಕೂಲವಾದ ವಾತಾವರಣದ ಮಧ್ಯೆಯೂ ಕಾಂಗ್ರೆಸ್ ಪಕ್ಷ ಉತ್ತಮ ಸಾಧನೆ ಮಾಡಿರುವ ತೃಪ್ತಿ ಇದೆ ಎಂದು ದ.ಕ. ಜಿಲ್ಲಾ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಪದ್ಮರಾಜ್ ಆರ್. ಪೂಜಾರಿ ಹೇಳಿದ್ದಾರೆ.ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಪ್ರತಿಕ್ರಿಯೆ ನೀಡಿದ ಅವರು,ಟಿಕೆಟ್ ದೊರೆತ ಬಳಿಕ ಮತದಾರರನ್ನು
ಭೇಟಿಯಾಗಲು ಸಿಕ್ಕಿದ ಕೆಲವೇ ದಿನಗಳ ಕಾಲಾವಧಿಯಲ್ಲಿ ಜಿಲ್ಲೆಯ 6.15 ಲಕ್ಷ ಮತದಾರರ ಮನಸ್ಸು ಗೆಲ್ಲಲು ಸಾಧ್ಯವಾಗಿರುವ ಬಗ್ಗೆ ಖುಷಿ ಇದೆ ಜಿಲ್ಲೆಯಲ್ಲಿ ಪಕ್ಷ ಸಂಘಟನೆಯನ್ನು ಬಲಗೊಳಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಬೂತ್ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತೇನೆ ಎಂದು ಹೇಳಿದರು. ಸಂಸದರಾಗಿ ಆಯ್ಕೆಯಾದ ಕ್ಯಾ.ಬ್ರಿಜೇಶ್ ಚೌಟರನ್ನು ಅಭಿನಂದಿಸುವುದಾಗಿ ಹೇಳಿದ ಅವರು, ಜಿಲ್ಲೆಯ ಅಭಿವೃದ್ಧಿ ಹಾಗೂ ಕೋಮು ಸೌಹಾರ್ದಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ನೂತನ ಸಂಸದರನ್ನು ಎಲ್ಲಾ ರೀತಿಯಲ್ಲಿ ಬೆಂಬಲಿಸಲು ಸದಾ ಸಿದ್ಧನಿರುವುದಾಗಿ ಹೇಳಿದರು.
ಸಾಮಾನ್ಯ ಕಾರ್ಯಕರ್ತನಾಗಿದ್ದ ನನಗೆ ಗೌರವ ನೀಡಿ ಪಕ್ಷದ ಹಿರಿಯ ನಾಯಕರು ಟಿಕೆಟ್ ನೀಡಿದರೆ, ಪಕ್ಷದ ಕಾರ್ಯಕರ್ತರು ಹಗಲಿರಲು ಕ್ಷೇತ್ರದಲ್ಲಿ ತನ್ನ ಗೆಲುವಿಗಾಗಿ ಶ್ರಮಿಸಿದ್ದಾರೆ. ಚುನಾವಣೆಯಲ್ಲಿ ಸೋಲು ಗೆಲುವು ಸಾಮಾನ್ಯ. ಮತದಾರರನ್ನು ಸಂಪರ್ಕಿಸಲು ಸಿಕ್ಕಿದ ಕೆಲವೇ ದಿನಗಳಲ್ಲಿ ಕೆಲ ಕ್ಷೇತ್ರಗಳಿಗೆ ಕೆಲ ಗಂಟೆಯ ಸಮಯವನ್ನೂ ನೀಡಲು ಸಾಧ್ಯವಾಗಿರಲಿಲ್ಲ. ಆದರೆ ಪಕ್ಷದ ನಾಯಕರು, ಕಾರ್ಯಕರ್ತರು ಕೆಲಸ ಮಾಡಿದ್ದಾರೆ ಎಂದು ಅವರು ಹೇಳಿದರು.
ಚುನಾವಣೆಯಲ್ಲಿ ನಾನು ಸೋತಿರಬಹುದು, ಆದರೆ ಪಕ್ಷದ ಕಾರ್ಯಕರ್ತರು ನನಗೆ ನೀಡಿದ ಬೆಂಬಲವನ್ನ ಮರೆಯುವಂತಿಲ್ಲ. ನಾಯಕರು ಹಾಗೂ ಕಾರ್ಯಕರ್ತರ ವಿಶ್ವಾಸವನ್ನು ಉಳಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲೂ ಪಕ್ಷದಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸಲಿದ್ದೇನೆ ಎಂದರು. ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ಹಾಗೂ ಮಿತ್ರ ಪಕ್ಷಗಳ ಸಾಧನೆ ಉತ್ತಮವಾಗಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ, ಮುಖಂಡರಾದ ಶಶಿಧರ ಹೆಗ್ಡೆ, ಶಾಹುಲ್ ಹಮೀದ್, ಶುಭೋದಯ ಆಳ್ವ, ಅಶ್ರಫ್, ಲ್ಯಾನ್ಸಿ ಲೋಟ್ ಪಿಂಟೋ, ಸಂಶುದ್ದೀನ್, ಅಬ್ದುಲ್ ಲತೀಫ್, ಅಬ್ದುಲ್ ಖಾದರ್, ಅಬ್ದುಲ್ ರವೂಫ್, ಸುಹಾನ್ ಆಳ್ವ ಮೊದಲಾದವರು ಉಪಸ್ಥಿತರಿದ್ದರು.