ಸುಳ್ಯ:ಪತ್ನಿಗೆ ಗುಂಡಿಕ್ಕಿ ಕೊಂದು ಪತಿ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನೆಲ್ಲೂರು ಕೆಮ್ರಾಜೆ ಗ್ರಾಮದ ಕೋಡಿಮಜಲು ಎಂಬಲ್ಲಿ ಜ.17ರ ರಾತ್ರಿ ಸಂಭವಿಸಿದೆ.ನೆಲ್ಲೂರು ಕೆಮ್ರಾಜೆ ಗ್ರಾಮದ ಕೋಡಿಮಜಲಿನ ರಾಮಚಂದ್ರ ಗೌಡ(54) ತನ್ನ ಪತ್ನಿ ವಿನೋದ(43) ಎಂಬವರನ್ನು ಗುಂಡಿಕ್ಕಿ ಕೊಲೆಗೈದಿದ್ದಾರೆ. ನಂತರ ತಾನು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ. ಕೌಟುಂಬಿಕ
ಕಲಹವೇ ಕೃತ್ಯಕ್ಕೆ ಕಾರಣ ಎಂದು ಶಂಕಿಸಲಾಗಿದೆ. ನಿನ್ನೆ ರಾತ್ರಿ ಮದ್ಯ ಸೇವಿಸಿ ಬಂದು ಪತ್ನಿ ವಿನೋದ ಹಾಗೂ ಮನೆಯವರ ಜೊತೆ ರಾಮಚಂದ್ರ ಗೌಡರು ಜಗಳ ಆರಂಭಿಸಿದ್ದಾರೆ. ಪತ್ನಿ ಹಾಗೂ ಮನೆಯಲ್ಲಿ ಇದ್ದವರ ಜೊತೆ ಕಲಹದಲ್ಲಿ ಏರ್ಪಟ್ಟಿದ್ದ ರಾಮಚಂದ್ರ ಗೌಡರು ಮನೆಯಲ್ಲಿದ್ದ ಕೋವಿ ಎತ್ತಿಕೊಂಡು, ಮನೆಯಲ್ಲಿದ್ದವರಿಗೆ ಗುಂಡಿಕ್ಕಲು ಬಂದಿದ್ದಾರೆ.
ಇದನ್ನು ಕಂಡ ಪತ್ನಿ ವಿನೋದರವರು ಅಡ್ಡ ಬಂದು ಗಂಡನನ್ನು ತಡೆಯಲು ಪ್ರಯತ್ನಿಸಿದಾಗ ರಾಮಚಂದ್ರ ಗೌಡರು ಹಾರಿಸಿದ ಗುಂಡು ವಿನೋದ ಅವರಿಗೆ ತಾಗಿ ಮೃತಪಟ್ಟಿದ್ದಾರೆ. ಬಳಿಕ ರಾಮಚಂದ್ರ ಗೌಡರು ರಬ್ಬರ್ ಸೀಟ್ಗೆ ಉಪಯೋಗಿಸಲು ತಂದಿದ್ದ ಆಸಿಡ್ ಸೇವಿಸಿ ಆತ್ಮಹತ್ಯೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಸುಳ್ಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.