ಮಂಡೆಕೋಲು: ಇತಿಹಾಸ ಪ್ರಸಿದ್ಧ ಮಂಡೆಕೋಲು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ಆಭಗೊಂಡಿದ್ದು ಶನಿವಾರ ಬೆಳಿಗ್ಗೆ ಊರ, ಪರ ಊರ ಭಕ್ತಾದಿಗಳಿಂದ ದೇಗುಲಕ್ಕೆ ಹಸಿರುವಾಣಿ ಸಮರ್ಪಣೆಯಾಯಿತು.
ಬೆಳಿಗ್ಗೆ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದಿಂದ ಹೊರಟ ಹಸಿರುವಾಣಿ ಮೆರವಣಿಗೆಯ ವಾಹನದ ಮುಂದೆ ತೆಂಗಿನ ಕಾಯಿ ಒಡೆಯುವ ಮೂಲಕ
ದೇಗುಲದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಸದಾನಂದ ಮಾವಜಿ ಮೆರವಣಿಗೆಗೆ ಚಾಲನೆ ನೀಡಿದರು.ಡೊಳ್ಳು, ಕೇರಳದ ಚೆಂಡೆ ಹಾಗೂ ಕುಣಿತ ಭಜನಾ ತಂಡಗಳು ಪಾಲ್ಗೊಂಡು ಮೆರವಣಿಗೆಗೆ ಮೆರುಗು ನೀಡಿದವು. ಮಹಿಳೆಯರು ಸಾಂಪ್ರದಾಯಿಕ ಉಡುಗೆ ತೊಟ್ಟು ಬುಟ್ಟಿಯಲ್ಲಿ ಹಸಿರುವಾಣಿ ಹೊತ್ತುಕೊಂಡು ಸಂಭ್ರಮಿಸಿದರೆ ಪುರುಷರು ಕೂಡಾ ಸಾಂಪ್ರದಾಯಿಕ ಉಡುಗೆ ಧರಿಸಿದ್ದರು.
ಬೆಳಿಗ್ಗೆ 6 ಕ್ಕೆ ದೇಗುಲದಲ್ಲಿ ಗಣಪತಿ ಹೋಮ, ಪ್ರಾಯಶ್ಚಿತ ಹೋಮ, ಬಿಂಬ ಶುದ್ಧಿ ನಡೆಯಲಿದೆ. ಭಕ್ತ ಸಮೂಹದಲ್ಲಿ ಹರಿ ನಾಮಸ್ಮರಣೆ ಜಾಗೃತಗೊಳಿಸಲು ದೇಗುಲದ ವತಿಯಿಂದ ಆಯೋಜಿಸಲಾದ ಕೋಟಿ ಲೇಖನ ಯಜ್ಞ ಅಭಿಯಾನದ ಸಮಾರೋಪ ಕಾರ್ಯಕ್ರಮವೂ ನಡೆಯಿತು.
ಮಧ್ಯಾಹ್ನ 12 ಕ್ಕೆ ಅಂಕುರ ಪೂಜೆ ಹಾಗೂ ಮಹಾಪೂಜೆಯ ಬಳಿಕ ಅನ್ನಸಂತರ್ಪಣೆ ನಡೆಯಿತು.
ಕಣ್ಮನ ಸೆಳೆದ ಸಾಂಸ್ಕೃತಿಕ ಕಾರ್ಯಕ್ರಮ:
ಸಂಜೆ 5 ರಿಂದ ಶಾಲಾ ಮಕ್ಕಳಿಂದ ಹಾಗೂ ಸ್ಥಳೀಯ ಕಲಾವಿದರಿಂದ ನಡೆದ ಸಾಂಸ್ಕೃತಿಕ ಸಂಭ್ರಮ ನೆರೆದವರ ಮನ ರಂಜಿಸಿತು.