ಸುಳ್ಯ: ಸಂಪಾಜೆ ಗ್ರಾಮಕ್ಕೆ ಮಳೆಗಾಲದಲ್ಲಿ ಪ್ರಳಯ ಭೀತಿ ಉಂಟಾಗಿದ್ದು ಇದನ್ನು ತಪ್ಪಿಸಲು ನದಿಯಲ್ಲಿ ತುಂಬಿರುವ ಹೂಳು ಮತ್ತು ಮರಳನ್ನು ಕೂಡಲೇ ಸಂಬಂಧಪಟ್ಟ ಇಲಾಖೆ ತೆರವು ಮಾಡಬೇಕು ಎಂದು ಸಂಪಾಜೆ ಗ್ರಾಮ ಪಂಚಾಯತ್ ಸಾಮಾನ್ಯ ಸಭೆ ಒತ್ತಾಯಿಸಿತು.ಮೇ.30ರ ಮುನ್ನ ನದಿಯ ಹೂಳೆತ್ತದಿದ್ದರೆ ಗ್ರಾ.ಪಂ.ಸದಸ್ಯರು ತಾಲೂಕು ಕಚೇರಿ ಎದುರಿನಲ್ಲಿ ಧರಣಿ ನಡೆಸಲು ಸಾಮಾನ್ಯ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಗ್ರಾಮ
ಪಂಚಾಯತ್ ಅಧ್ಯಕ್ಷ ಜಿ. ಕೆ. ಹಮೀದ್ ಗೂನಡ್ಕ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಹೊಳೆಯ ಹೂಳೆತ್ತುವಿಕೆ ಬಗ್ಗೆ ಚರ್ಚೆ ನಡೆಸಿ ಎಲ್ಲಾ ಸದಸ್ಯರು ಸರ್ವಾನುಮತದಿಂದ ಈ ನಿರ್ಧಾರ ಕೈಗೊಳ್ಳಲಾಯಿತು ಎಂದು ಅಧ್ಯಕ್ಷ ಜಿ.ಕೆ.ಹಮೀದ್ ತಿಳಿಸಿದ್ದಾರೆ.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸರಿತಾ ಡಿಸೋಜಾ ಸ್ವಾಗತಿಸಿದರು. ಸಭೆಯಲ್ಲಿ ವಿವಿಧ ಯೋಜನೆಗಳ ಬಗ್ಗೆ ಚರ್ಚಿಸಲಾಯಿತು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಹಾಗೂ ಬೀದಿ ದೀಪಗಳ ನಿರ್ವಹಣೆ ಬಗ್ಗೆ ಚರ್ಚಿಸಲಾಯಿತು. ವಿವಿಧ ಯೋಜನೆಗಳ ಕ್ರಿಯಾಯೋಜನೆ ತಯಾರಿಸಲು ನಿರ್ಣಸಲಾಯಿತು. ವಿವಿಧ ಸಮಿತಿ ಸಭೆಯನ್ನು ನಡೆಸಲು ತೀರ್ಮಾನಿಸಲಾಯಿತು. ಹೆದ್ದಾರಿ ಇಲಾಖೆಯ ಗೂನಡ್ಕ ಕಲ್ಲುಗುಂಡಿ ಬಳಿ ಚರಂಡಿ ದುರಸ್ಥಿ ಹಾಗೂ ಗೂನಡ್ಕ ಬಳಿ ಹೆದ್ದಾರಿ ಇಲಾಖೆಯ ಕುಸಿದ ಮಣ್ಣನ್ನು ತಕ್ಷಣ ತೆರವುಗೊಳಿಸಲು ಇಲಾಖೆಯ ಗಮನಕ್ಕೆ ತರಲು ತೀರ್ಮಾನಿಸಲಾಯಿತು. ಮಳೆಗಾಲ ಆರಂಭವಾಗಿರುವ ಹಿನ್ನಲೆಯಲ್ಲಿ ವರ್ತಕರು ಸಾರ್ವಜನಿಕರು ಪ್ಲಾಸ್ಟಿಕ್ ವಸ್ತುಗಳು, ಎಳನೀರು ಚಿಪ್ಪುಗಳನ್ನು ಸಾರ್ವಜನಿಕ ಸ್ಥಳದಲ್ಲಿ ಎಸದರೆ ಕ್ರಮ ಕೈಗೊಳ್ಳಲು ನಿರ್ಧರಿಸಲಾಯಿತು. ಕಾರ್ಯದರ್ಶಿ ಪದ್ಮಾವತಿ ವರದಿ ಹಾಗೂ ಲೆಕ್ಕ ಪತ್ರ, ಮಂಡಿಸಿದರು ಸಾರ್ವಜನಿಕರಿಂದ ಬಂದ ಅರ್ಜಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲು ಸೂಚಿಸಲಾಯಿತು. ಸಭೆಯಲ್ಲಿ ಉಪಾಧ್ಯಕ್ಷೆ ಲಿಸ್ಸಿ ಮೊನಾಲಿಸಾ, ಸದಸ್ಯರಾದ ಸೋಮಶೇಖರ್ ಕೊಇಂಗಾಜೆ, ಅಬೂಸಾಲಿ ಗೂನಡ್ಕ, ಜಗದೀಶ್ ರೈ, ಶೌವಾದ್ ಗೂನಡ್ಕ, ಎಸ್. ಕೆ. ಹನೀಫ್, ವಿಜಯ ಕುಮಾರ್, ಸುಂದರಿ ಮುಂಡಡ್ಕ, ವಿಮಲಾ ಪ್ರಸಾದ್, ರಜನಿ ಶರತ್, ಅನುಪಮಾ, ಸುಶೀಲಾ ಉಪಸ್ಥಿತರಿದ್ದರು.