ಬನಾರಿ: ನಾಡು-ನುಡಿಗೆ ಬಹುಮುಖ ಆಯಾಮಗಳಲ್ಲಿ ಸೇವೆ ಸಲ್ಲಿಸಿದ ವಿಶಿಷ್ಟ ಸಾಧಕರ ಜೀವನಾದರ್ಶ, ಬದುಕಿನ ಪಥಗಳು ಹೊಸ ತಲೆಮಾರಿಗೆ ಮಾರ್ಗದರ್ಶಕವೂ, ಪ್ರೇರಣದಾಯಿಯಾಗಿರುತ್ತದೆ. ಅವನ್ನು ಪರಿಚಯಿಸುವ ಹೊತ್ತಗೆ ತರುವುದು ಸಮಾಜಕ್ಕೆ ನಾವು ನೀಡುವ ದೊಡ್ಡ ಕೊಡುಗೆಗಳಲ್ಲಿ ಒಂದಾಗಿದ್ದು, ಬೆಂಬಲ ಅಗತ್ಯ ಎಂದು
ಹಿರಿಯ ಲೇಖಕ, ಪತ್ರಕರ್ತ, ನಿವೃತ್ತ ಪ್ರಾಧ್ಯಾಪಕ ಪ್ರೊ.ವಿ.ಬಿ.ಅರ್ತಿಕಜೆ ತಿಳಿಸಿದರು.ದೇಲಂಪಾಡಿಯ ಬನಾರಿಯ ಕೀರಿಕ್ಕಾಡು ಸಾಂಸ್ಕೃತಿಕ ಅಧ್ಯಯನ ಕೇಂದ್ರದ ಸಭಾ ಭವನದಲ್ಲಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ ಅಧ್ಯಕ್ಷ ಸಾಹಿತಿ ಡಾ.ರಮಾನಂದ ಬನಾರಿ ಅವರು ರಚಿಸಿದ ಡಾ.ಪ್ರಮೀಳಾ ರಾವ್ ಸಂಪಾದಿಸಿದ ‘ಕನ್ನಡಿಯಲ್ಲಿ ಕನ್ನಡಿಗ’ ಕೃತಿ ಸರಣಿಯ ಐದನೇ ಸಂಚಿಕೆಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಡಾ.ರಮಾನಂದ ಬನಾರಿ ಅಧ್ಯಕ್ಷತೆ ವಹಿಸಿದ್ದರು.
ಸಮಾರಂಭದಲ್ಲಿ ಕೃತಿ ಸಂಪಾದಕಿ, ನಿವೃತ್ತ ಪ್ರಾಧ್ಯಾಪಕಿ ಡಾ.ಪ್ರಮೀಳಾ ಮಾಧವ ಕೃತಿಯ ಬಗ್ಗೆ ಮಾತನಾಡಿದರು. ಮಂಗಳೂರು ಆಕಾಶವಾಣಿಯ ನಿವೃತ್ತ ನಿರ್ದೇಶಕ ಡಾ.ವಸಂತಕುಮಾರ ಪೆರ್ಲ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ರಾಮಣ್ಣ ಮಾಸ್ತರ್ ದೇಲಂಪಾಡಿ ಕೃತಿಯಲ್ಲಿನ ಸಾಧಕರ ಪರಿಚಯ ಮಾಡಿದರು. ಸಾಧಕರನ್ನು ಗುರುತಿಸಿ ಸನ್ಮಾನಿಸಲಾಯಿತು.
ನಿವೃತ್ತ ಪ್ರಾಂಶುಪಾಲ ಪ್ರೊ.ಪಿ.ಎನ್.ಮೂಡಿತ್ತಾಯ ಸ್ವಾಗತಿಸಿ, ಪತ್ರಕರ್ತ ಚಂದ್ರಶೇಖರ ಏತಡ್ಕ ವಂದಿಸಿದರು. ಯಶಸ್ವಿ ಬನಾರಿ ಪ್ರಾರ್ಥಿಸಿದರು.
ನಿವೃತ್ತ ಶಿಕ್ಷಕ ವಿಶಾಲಾಕ್ಷ ಪುತ್ರಕಳ ನಿರೂಪಿಸಿದರು.
ಕಲಾ ಸಂಘದ 81ನೇ ವಾರ್ಷಿಕೋತ್ಸವದ ಅಂಗವಾಗಿ ಅ.25ರಂದು ದಿನಪೂರ್ತಿ ವಿವಿಧ ಕಲಾ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಸಂಘದ ಸದಸ್ಯರು ಮತ್ತು ಸ್ಥಳೀಯ ಪ್ರತಿಭೆಗಳಿಂದ ಶ್ರೀಮದ್ಭಗವದ್ಗೀತಾ ಪಾರಾಯಣ, ಕುಣಿತ ಭಜನೆ, ಯಕ್ಷಗಾನಾರ್ಚನೆ, ನೃತ್ಯಾರ್ಚನೆ ನಡೆಯಿತು. ಸಂಜೆ ಸಂಘದ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ ತಾಳಮದ್ದಳೆ – ‘ಶ್ರೀಕೃಷ್ಣಾನುಗ್ರಹ’ ರಾತ್ರಿ
ಸಂಘದ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ ಬಯಲಾಟ ‘ರತಿ ಕಲ್ಯಾಣ’ ನಡೆಯಿತು.















