ಸುಳ್ಯ:ಕನ್ನಡ ಮಾತೃಭಾಷೆ, ಅನ್ನದ ಭಾಷೆ ಮಾತ್ರವಲ್ಲದೆ ಕನ್ನಡ ಭಾಷೆ ಪ್ರತಿಯೊಬ್ಬರ ಆತ್ಮದ ಭಾಷೆಯಾಗಬೇಕು ಎಂದು ಉಳ್ಳಾಲ ಕನ್ನಡ ಸಾಹಿತ್ಯ ಪರಿಷತ್ತು ಘಟಕದ ಅಧ್ಯಕ್ಷ, ಉಪನ್ಯಾಸಕ
ಧನಂಜಯ ಕುಂಬ್ಲೆ ಹೇಳಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ತಾಲೂಕು ಘಟಕ, ಸ್ವಾಗತ ಸಮಿತಿ 27ನೇ ಕನ್ನಡ ಸಾಹಿತ್ಯ ಸಮ್ಮೇಳನ ಅರಂತೋಡು ಇದರ ಆಶ್ರಯದಲ್ಲಿ ಅರಂತೋಡು ನೆಹರೂ ಸ್ಮಾರಕ ಪದವಿ ಪೂರ್ವ ವಿದ್ಯಾಲಯ ಅರಂತೋಡು ಇಲ್ಲಿಯ ಡಾ.ಕುರುಂಜಿ ವೆಂಕಟ್ರಮಣ ಗೌಡ ವೇದಿಕೆ ನಿರಂಜನ ಸಭಾಂಗಣದಲ್ಲಿ ನಡೆದ
ಸುಳ್ಯ ತಾಲೂಕು 27ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಸಮಾರೋಪ ಭಾಷಣ ಮಾಡಿದರು. ಕನ್ನಡ ಭಾಷೆ, ಸಂಸ್ಕೃತಿ ಮಕ್ಕಳಲ್ಲಿ ತುಂಬಬೇಕು ಎಂದ ಅವರು ಕನ್ನಡ ಕಟ್ಟುವ ಕೆಲಸ ಗ್ರಾಮಗಳಲ್ಲಿ ನಡೆಯಬೇಕು. ಈ ನಿಟ್ಟಿನಲ್ಲಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಗಳು ಮಹತ್ವವನ್ನು ಪಡೆದುಕೊಳ್ಳುತ್ತದೆ. ಸಮ್ಮೇಳನದ ಮೂಲಕ ಕನ್ನಡದ ಮನಸ್ಸುಗಳು ಒಂದಾಗಲು, ಹೊಸ ಆಶಯಗಳು ಉಂಟಾಗಲು ಪೂರಕ ಎಂದು ಹೇಳಿದರು.

ಸಮ್ಮೇಳನಾಧ್ಯಕ್ಷೆ ಲೀಲಾ ದಾಮೋದರ, ಸಾಧಕರಿಗೆ ಕನ್ನಡ ಕಸ್ತೂರಿ ಸನ್ಮಾನ ನೆರವೇರಿಸಿದ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ನ ಅಧ್ಯಕ್ಷರಾದ ಡಾ. ಕೆ.ವಿ ಚಿದಾನಂದ, ಮುಖ್ಯ ಅತಿಥಿಯಾಗಿದ್ದ ಸಜ್ಜನ ಪ್ರತಿಷ್ಠಾನ ಬೀಜದ ಕಟ್ಟೆ ಇದರ ಅಧ್ಯಕ್ಷ ಡಾ. ಉಮ್ಮರ್ ಬೀಜದಕಟ್ಟೆ ಮಾತನಾಡಿದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಎಂ.ಪಿ ಶ್ರೀನಾಥ್ ಅಧ್ಯಕ್ಷತೆ ವಹಿಸಿದ್ದರು.ಕಸಾಪ ಮಾಜಿ ಅಧ್ಯಕ್ಷ ಡಾ.ಹರಪ್ರಸಾದ್ ತುದಿಯಡ್ಕ,ತಾಲೂಕ ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ರಾಜಣ್ಣ ಅತಿಥಿಗಳಾಗಿದ್ದರು.
ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಶೇಖರ ಪೇರಾಲು, ಅರಂತೋಡು ಗ್ರಾಮ ಪಂಚಾಯತಿ ಅಧ್ಯಕ್ಷ ಕೇಶವ ಅಡ್ತಲೆ,ಸುಳ್ಯ ಹೋಬಳಿ ಅಧ್ಯಕ್ಷೆ, ಚಂದ್ರಾವತಿ ಬಡ್ಡಡ್ಕ, ರಾಮಚಂದ್ರ ಪಲ್ಲತ್ತಡ್ಕ, ಪಂಜ ಹೋಬಳಿ ಘಟಕದ ಅಧ್ಯಕ್ಷ ಬಾಬು ಗೌಡ,
ಸ್ವಾಗತ ಸಮಿತಿ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಕೆ.ಆರ್.ಗಂಗಾಧರ ಹಾಗೂ ಲತಾಶ್ರೀ ಸುಪ್ರೀತ್ ಮೋಂಟಡ್ಕ ಸನ್ಮಾನಿತರ ಪರಿಚಯ ಮಾಡಿದರು.
ಕನ್ನಡ ಕಸ್ತೂರಿ ಸನ್ಮಾನ
ಡಾ. ಶ್ವೇತಾ ಮಡಪ್ಪಾಡಿ (ಕಲೆ ಮತ್ತು ಸಂಸ್ಕೃತಿ ಕ್ಷೇತ್ರದಲ್ಲಿ) ಹುಕ್ರಪ್ಪ ಉಳುವಾರು (ರಕ್ಷಣಾ ಸೇವೆ) ಕುಮಾರಸ್ವಾಮಿ ತೆಕ್ಕುಂಜೆ (ಸಾಹಿತ್ಯ ಕ್ಷೇತ್ರ)ಸರಸ್ವತಿ ಚಿದಾನಂದ (ಶಿಕ್ಷಣ ಕ್ಷೇತ್ರ, ಗಣೇಶ್ ಭಟ್ (ಹಿರಿಯ ಲೆಕ್ಕ ಪರಿಶೋಧಕರು) ಕೆ ಆರ್ ಪದ್ಮನಾಭ (ಸಹಕಾರ/ ಸಮಾಜ ಸೇವೆ), ಡಾ. ಲೀಲಾದರು ಡಿ ವಿ (ಆಡಳಿತ / ವೈದ್ಯಕೀಯ ಕ್ಷೇತ್ರ) ತೇಜೇಶ್ವರ ಕುಂದಲ್ಪಾಡಿ (ಪತ್ರಿಕೋದ್ಯಮ) ಆನಂದ ಕಲ್ಲಗದ್ದೆ (ಮಾಹಿತಿ ಮತ್ತು ತಂತ್ರಜ್ಞಾನ) ಸಲಿಂ ಸುಳ್ಯ (ಸಮಾಜ ಸೇವೆ / ಉದ್ಯಮ ಕ್ಷೇತ್ರ), ಕೇಶವ ಪರವ (ಭೂತಾರಾಧನೆ ಕ್ಷೇತ್ರ) ಸಾಧನೆಗಾಗಿ ಕನ್ನಡ ಕಸ್ತೂರಿ ಸನ್ಮಾನವನ್ನು ಪ್ರಧಾನ ಮಾಡಲಾಯಿತು. ಚಂದ್ರಮತಿ ಕೆ. ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಡಾ. ಶ್ವೇತಾ ಮಡಪ್ಪಾಡಿ ಮತ್ತು ಬಳಗದವರಿಂದ ಭಾವಗಾನ ಕನ್ನಡ ಗೀತೆಗಳ ಗಾಯನ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕೊಡಿಯಾಲ ಬೈಲ್ ಸುಳ್ಯ ಇಲ್ಲಿನ ವಿದ್ಯಾರ್ಥಿಗಳಿಂದ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಪ್ರಾಯೋಜಕತ್ವದಲ್ಲಿ ಅರೆಭಾಷೆ ಸಿರಿ ಸಂಸ್ಕೃತಿ -ನೃತ್ಯ ರೂಪಕ ನಡೆಯಿತು.