ಸುಳ್ಯ:ಸುಳ್ಯ ನಗರದ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ಸೂಕ್ತವಾದ ಪರ್ಯಾಯ ಸ್ಥಳ ಹುಡುಕಬೇಕು. ಒಂದು ವಾರದಲ್ಲಿ ಸ್ಥಳ ಗುರುತಿಸಲು ಕ್ರಮ ಕೈಗೊಳ್ಳಬೇಕು ಮತ್ತು ನಗರದ ತ್ಯಾಜ್ಯ ವಿಲೇವಾರಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಶಾಸಕಿ ಭಾಗೀರಥಿ ಮುರುಳ್ಯ ಸೂಚಿಸಿದ್ದಾರೆ. ಕಲ್ಚರ್ಪೆಯ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಕಸ ವಿಲೇವಾರಿ ಸಮಸ್ಯೆ ಹಾಗೂ
ಸಾರ್ವಜನಿಕರ ದೂರಿನ ಹಿನ್ನಲೆಯಲ್ಲಿ ಶಾಸಕರ ನೇತೃತ್ವದಲ್ಲಿ ನಗರ ಪಂಚಾಯತ್ ಸಭಾಂಗಣದಲ್ಲಿ ಆ.12ರಂದು ನಡೆದ ನಗರ ಪಂಚಾಯತ್ ಸದಸ್ಯರು, ಅಧಿಕಾರಿಗಳು ಹಾಗೂ ಕಲ್ಚರ್ಪೆ ನಿವಾಸಿಗಳ ಸಭೆಯಲ್ಲಿ ಈ ಸೂಚನೆ ನೀಡಿದರು.
ನಗರ ಪಂಚಾಯತ್ ಆಡಳಿತಾಧಿಕಾರಿ ಹಾಗೂ ತಹಶೀಲ್ದಾರ್ ಜಿ.ಮಂಜುನಾಥ್ ಮಾತನಾಡಿ ನಗರದ ತ್ಯಾಜ್ಯ ವಿಲೇವಾರಿಗೆ ಪರ್ಯಾಯ ಸ್ಥಳ ಗುರುತಿಸುವ ಪ್ರಕ್ರಿಯೆ ನಡೆಯುತಿದೆ ಎಂದು ಸಭೆಗೆ ತಿಳಿಸಿದರು.
ಕಲ್ಚರ್ಪೆ ಪರಿಸರ ಉಳಿಸಿ ಹೋರಾಟ ಸಮಿತಿಯ ಪ್ರಮುಖರಾದ ಅಶೋಕ್ ಪೀಚೆ ಮಾತನಾಡಿ’ ಕಲ್ಚರ್ಪೆಯಲ್ಲಿ ಅವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡಿದ ಆರಂಭದಿಂದಲೂ ಪರಿಸರಕ್ಕೆ, ಸ್ಥಳೀಯರಿಗೆ ತೀವ್ರ ಸಮಸ್ಯೆ ಆಗಿದೆ ಎಂದರು. ಅಲ್ಲಿಂದ ತ್ಯಾಜ್ಯ ಹಾಗೂ ಮಲಿನ ನೀರು ಜಲಮೂಲಗಳಿಗೆ, ಪರಿಸರಕ್ಕೆ, ಜನವಸತಿ ಪ್ರದೇಶಕ್ಕೆ ಹರಿಯುತಿದೆ. ಎರೆಹುಳ ಗೊಬ್ಬರ ಘಟಕ ಸರಿಯಾಗಿ ನಿರ್ವಹಣೆ ಆಗಿಲ್ಲ, ಕಂಪೌಂಡ್ ಕುಸಿದು ಬಿದ್ದಿದೆ. ಒಟ್ಟಿನಲ್ಲಿ ಅಲ್ಲಿ ಕಸ ಹಾಕುವ ಸ್ಥಿತಿ ಇಲ್ಲ.
ಆದುದರಿಂದ ಅಲ್ಲಿಂದ ಘಟಕ ಸ್ಥಳಾಂತರ ಆಗಬೇಕು ಎಂದರು.
ನಗರ ಪಂಚಾಯತ್ ಮಾಜಿ ಉಪಾಧ್ಯಕ್ಷ ಕೆ.ಗೋಕುಲ್ದಾಸ್ ಮಾತನಾಡಿ ತ್ಯಾಜ್ಯ ವಿಲೇವಾರಿ ಘಟಕದಿಂದ ಈ ಪ್ರದೇಶದ ಜನರಿಗೆ ಸಾಂಕ್ರಾಮಿಕ ರೋಗ ಹರಡುವ ಭೀತಿ ಇದೆ. ಆದುದರಿಂದ ತ್ಯಾಜ್ಯ ವಿಲೇವಾರಿಗೆ ಪರ್ಯಾಯ ಸ್ಥಳ ಹುಡುಕಬೇಕು ಎಂದರು. ಕಲ್ಚರ್ಪೆಯಲ್ಲಿ ತುಂಬಿರುವ ಕಸಗಳನ್ನು ಕಲ್ಲು ಪಣೆಗಳ ಬೃಹತ್ ಹೊಂಡಗಳಲ್ಲಿ ತುಂಬಿ ಅಲ್ಲಿ ಮಣ್ಣು ಹಾಕಿ ಮುಚ್ಚಿ ಅದರ ಮೇಲೆ ಕೃಷಿ ಮಾಡಲು ಸಾಧ್ಯವಾಗುತ್ತದೆ ಆ ಪ್ರಯೋಗ ಮಾಡಬಹುದು ಎಂದರು. ಪ್ರದೇಶಕ್ಕೆ ಪರಿಸರಕ್ಕೆ ನ.ಪಂ.ಸದಸ್ಯರು ಭೇಟಿ ನೀಡಬೇಕು ಎಂದು ಅವರು ಒತ್ತಾಯಿಸಿದರು.
ನಾರಾಯಣ ಜಬಳೆ, ಯೂಸೂಫ್ ಅಂಜಿಕಾರ್, ರಾಧಾಕೃಷ್ಣ ಪರಿವಾರಕಾನ,ಜನಾರ್ಧನ ಚೊಕ್ಕಾಡಿ ಸಿರಿ ಕುರಲ್ ನಗರ, ಬಾಲಚಂದ್ರ ಕಲ್ಚರ್ಪೆ, ಸುದೇಶ್ ಅರಂಬೂರು ಮತ್ತಿತರರು ಮಾತನಾಡಿ ಸಮಸ್ಯೆಯ ಬಗ್ಗೆ ಸಭೆಯಲ್ಲಿ ವಿವರಿಸಿದರು.
ಸಮಸ್ಯೆ ಪರಿಹಾರಕ್ಕೆ ಸಲಹೆ ನೀಡಿ ಎಂದು ಶಾಸಕರು ಸದಸ್ಯರಿಗೆ ಸೂಚಿಸಿದರು. ನ.ಪಂ.ಸದಸ್ಯ ಕೆ.ಎಸ್.ಉಮ್ಮರ್ ಮಾತನಾಡಿ ಕಲ್ಚರ್ಪೆಯಲ್ಲಿ ಕೋಟ್ಯಾಂತರ ರೂ ಹಾಕಿದರೂ ಅಲ್ಲಿಯೂ ವ್ಯವಸ್ಥಿತ ಆಗಿಲ್ಲ. ಜನರಿಗೆ ತೊಂದರೆ ಆಗದಂತೆ ವ್ಯವಸ್ಥಿತವಾಗಿ ತ್ಯಾಜ್ಯ ವಿಲೇವಾರಿ ವ್ಯವಸ್ಥೆ ಆಗಬೇಕಾಗಿದೆ ಎಂದರು.
ನ.ಪಂ.ಸದಸ್ಯ ಎಂ.ವೆಂಕಪ್ಪ ಗೌಡ ಮಾತನಾಡಿ ಕಸ ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕಬೇಕಾಗಿದೆ. ಅದಕ್ಕೆ ಆದಷ್ಟು ಬೇಗ ಜಾಗ ಗುರುತಿಸಿ ಎಂದು ಹೇಳಿದರು.
ಸದಸ್ಯರಾದ ಶರೀಪ್ ಕಂಠಿ’, ಶಿಲ್ಪಾ ಸುದೇವ್ ಮಾತನಾಡಿ
ಕಸವನ್ನು ಉಚಿತವಾಗಿ ತೆಗೆದುಕೊಂಡು ಹೋಗುವುದಕ್ಕೆ ಕೆಲವರು ಮುಂದೆ ಬಂದಿದ್ದಾರೆ ಅವರಿಗ ಕೊಡಿ ಎಂದು ಸಲಹೆ ನೀಡಿದರು. ಉಚಿತವಾಗಿ ತಕೊಂಡು ಹೋಗುವವರು ಇದ್ದರೆ ಅದನ್ನು ಪರಿಗಣಿಸಿ ಎಂದು ಶಾಸಕರು ಸಲಹೆ ನೀಡಿದರು. ನ.ಪಂ.ಸದಸ್ಯ ವಿನಯಕುಮಾರ್ ಕಂದಡ್ಕ ಮಾತನಾಡಿ ‘ಅಲ್ಲಿ ತುಂಬಿರುವ ಕಸವನ್ನು ತೆರವು ಆಗಬೇಕಾಗಿದೆ. ಹಾಗೂ ಶಾಶ್ವತ ಸ್ಥಳ ಗುರುತಿಸುವ ಬಗ್ಗೆ ಚರ್ಚಿಸಲು ಪ್ರತ್ಯೇಕ ಸಭೆ ಕರೆಯಬೇಕು ಎಂದರು.
ನಗರ ಪಂಚಾಯತ್ ಮುಖ್ಯಾಧಿಕಾರಿ ಸುಧಾಕರ ಎಂ.ಎಚ್.ಮಾತನಾಡಿ ಗ್ಯಾಸಿಫೀಕೇಶನ್ ಮೂಲಕ ಕಸ ಬರ್ನ್ ಮಾಡುವ ಯೋಜನೆ ಪ್ರಾಯೋಗಿಕವಾಗಿ ಅನುಷ್ಠಾನ ಮಾಡಲಾಗಿದೆ. ಯಂತ್ರ ಚಾಲನೆಯಲ್ಲಿ ಇದೆ ಎಂದು ಹೇಳಿದರು.ನಗರ ಪಂಚಾಯತ್ ಸದಸ್ಯರು, ಆಲೆಟ್ಟಿ ಗ್ರಾ.ಪಂ.ಅಧ್ಯಕ್ಷೆ ವೀಣ, ಜನಪ್ರತಿನಿಧಿಗಳು, ಕಲ್ಚರ್ಪೆ ನಿವಾಸಿಗಳು ಸಭೆಯಲ್ಲಿ ಭಾಗವಹೊಸಿದ್ದರು.