ವಾಷಿಂಗ್ಟನ್: ಇಸ್ರೇಲ್– ಇರಾನ್ ನಡುವೆ ಯುದ್ಧ ಸಂಪೂರ್ಣ ಅಂತ್ಯವಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.ಈ ಬಗ್ಗೆ ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಕತಾರ್ನಲ್ಲಿರುವ ಅಮೆರಿಕ ಸೇನಾ ನೆಲೆಗಳ ಮೇಲೆ ಕ್ಷಿಪಣಿ ದಾಳಿ ಮಾಡಿದ ಬೆನ್ನಲ್ಲೇ ಕದನ ವಿರಾಮಕ್ಕೆ
ಉಭಯ ದೇಶಗಳು ಒಪ್ಪಿಕೊಂಡಿದೆ ಎಂದು ಬರೆದುಕೊಂಡಿದ್ದಾರೆ.
24 ಗಂಟೆಗಳ ಹಂತ ಹಂತದ ಕದನ ವಿರಾಮವು ಮಂಗಳವಾರ ಪೂರ್ವ ಸಮಯ ಮಧ್ಯರಾತ್ರಿಯ ಸುಮಾರಿಗೆ ಪ್ರಾರಂಭವಾಗಲಿದೆ ಎಂದು ಟ್ರಂಪ್ ಪೋಸ್ಟ್ ಮಾಡಿದ್ದಾರೆ.ಕದನ ವಿರಾಮವು ಶಾಂತಿಯುತ ಮತ್ತು ಗೌರವಯುತವಾಗಿರುತ್ತದೆ ಎಂದು ಬರೆದಿದ್ದಾರೆ.
ಆದರೆ ಇಸ್ರೇಲ್ ಜೊತೆಗೆ ಯಾವುದೇ ಕದನ ವಿರಾಮ ಏರ್ಪಟ್ಟಿಲ್ಲ ಎಂದು ಇರಾನ್ನ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ಹೇಳಿದ್ದಾರೆ.
ಉಭಯ ದೇಶಗಳು ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ ಬೆನ್ನಲ್ಲೇ ಅಬ್ಬಾಸ್ ಅವರಿಂದ ಈ ಹೇಳಿಕೆ ಹೊರಬಿದ್ದಿದೆ.
‘ಇಸ್ರೇಲ್ ದಾಳಿ ನಿಲ್ಲಿಸಿದ ಕೂಡಲೇ ನಾವು ನಿಲ್ಲಿಸುತ್ತೇವೆ’ ಎಂದು ಅವರು ಹೇಳಿದ್ದಾರೆ.‘ಯುದ್ಧ ಪ್ರಾರಂಭಿಸಿದ್ದು ಇಸ್ರೇಲ್, ನಾವಲ್ಲ ಎಂದು ನಾವು ಹಲವು ಬಾರಿ ಸ್ಪಷ್ಟಪಡಿಸಿದ್ದೇವೆ. ಈವರೆಗೂ ಕದನ ವಿರಾಮ ಅಥವಾ ಸೇನಾ ಕಾರ್ಯಾಚರಣೆ ಸ್ಥಗಿತಗೊಳಿಸುವ ಬಗ್ಗೆ ಯಾವುದೇ ಒಪ್ಪಂದ ನಡೆದಿಲ್ಲ’ ಎಂದು ಅಬ್ಬಾಸ್ ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.