ಅಹಮ್ಮದಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ನ ಫೈನಲ್ ಪಂದ್ಯ ಆರಂಭಕ್ಕೆ ಕೆಲವೇ ಕ್ಷಣಗಳು ಬಾಕಿಯಿದೆ. ಕೆಲವೇ ಗಂಟೆಗಳಲ್ಲಿ ಈ ಬಾರಿಯ ಐಪಿಎಲ್ ಟೂರ್ನಿಯ ಚಾಂಪಿಯನ್ ಯಾರು ಎಂಬುದು ಅಧಿಕೃತವಾಗಲಿದೆ. ಈ ಮೂಲಕ ಎರಡು ತಿಂಗಳ ಸುದೀರ್ಘ ಕ್ರಿಕೆಟ್ ಹಬ್ಬಕ್ಕೆ ತೆರೆ ಬೀಳಲಿದೆ. ಐಪಿಎಲ್ ಫೈನಲ್ ಪಂದ್ಯದಲ್ಲಿ ನಾಲ್ಕು ಬಾರಿಯ
ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಹಾಗು ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ಎದುರಾಗಲಿದೆ. ಯಾವ ತಂಡ ಉತ್ತಮ ಪ್ರದರ್ಶನ ನೀಡಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಲಿದೆ ಎಂಬುದು ಎಲ್ಲರಿಗೂ ಇರುವ ಸಹಜ ಕುತೂಹಲ.
ಎರಡು ತಂಡಗಳು ಕೂಡ ಬಲಿಷ್ಠ ಆಟಗಾರರ ಪಡೆಯನ್ನು ಹೊಂದಿದೆ. ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಅತ್ಯುತ್ತಮ ಬ್ಯಾಟರ್ಗಳು ಆಲ್ ರೌಂಡರ್ಗಳನ್ನು ಹೊಂದಿದೆ. ಋತುರಾಜ್ ಗಾಯಕ್ವಾಡ್, ಅಜಿಂಕ್ಯಾ ರಹಾನೆ, ಆಲ್ ರೌಂಡರ್ ರವೀಂದ್ರ ಜಡೇಜ ಮೇಲೆ ನಿರೀಕ್ಷೆಯಿಟ್ಟಿದೆ. ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟನ್ಸ್ ಸ್ಟಾರ್ ಬ್ಯಾಟರ್ ಶುಭ್ಮನ್ ಗಿಲ್ ಅವರ ಅದ್ಭುತ ಫಾರ್ಮ್ ಮೇಲೆ ನಿರೀಕ್ಷೆಯಿಟ್ಟಿದೆ. ಈ ಬಾರಿಯ ಐಪಿಎಲ್ನಲ್ಲಿ ಅತೀ ಹೆಚ್ಚು ರನ್ ಗಳಿಸಿದ ಹೆಗ್ಗಳಿಕೆ ಗಿಲ್ ಅವರದು. ಮಹಮ್ಮದ್ ಶಮಿ, ರಶೀದ್ ಖಾನ್ ನೇತೃತ್ವದ ಬೌಲಿಂಗ್ ಪಡೆಯೂ ಬಲಿಷ್ಠವಾಗಿದೆ. ಈ ಐಪಿಎಲ್ನಲ್ಲಿ ಮೊದಲ ಸ್ಥಾನದಲ್ಲಿದ್ದ ಗುಜರಾತ್ ತಂಡವನ್ನು ಎರಡನೇ ಸ್ಥಾನಿಯಾದ ಚೆನ್ನೈ ಮೊದಲ ಕ್ವಾಲಿಫಯರ್ ಪಂದ್ಯದಲ್ಲಿ ಸೋಲಿಸಿ ಫೈನಲ್ಗೇರಿತ್ತು. ಆ ಗೆಲುವಿನ ಆತ್ಮ ವಿಶ್ವಾಸ ಚೆನ್ನೈಗಿದೆ. ಎರಡನೇ ಕ್ವಾಲಿಫಯರ್ ಪಂದ್ಯದಲ್ಲಿ ಮುಂಬೈ ಮಣಿಸಿ ಗುಜರಾತ್ ಫೈನಲ್ಗೆ ಪ್ರವೇಶ ಪಡೆದಿದೆ.