ಬ್ರಿಸ್ಬೇನ್: ಭಾರತ ವಿರುದ್ಧ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ ಎರಡನೇ ದಿನದಾಟದ ಅಂತ್ಯಕ್ಕೆ 101 ಓವರ್ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 405 ರನ್ ಗಳಿಸಿದೆ.
ಟ್ರಾವಿಸ್ ಹೆಡ್ (152) ಮತ್ತು ಸ್ಟೀವ್ ಸ್ಮಿತ್ (102) ಗಳಿಸಿದ ಅಮೋಘ ಶತಕಗಳ ನೆರವಿನಿಂದ ಆಸೀಸ್ ಉತ್ತಮ ಮೊತ್ತ ಕಲೆ ಹಾಕಿತು. ಒಂದೇ ದಿನದಾಟದಲ್ಲಿ 377 ರನ್ಗಳು ಹರಿದು ಬಂದವು. ಭಾರತದ ಪರ ಏಕಾಂಗಿ ಹೋರಾಟ ನಡೆಸಿದ ವೇಗದ ಬೌಲರ್
ಜಸ್ಪ್ರೀತ್ ಬೂಮ್ರಾ ಮಗದೊಮ್ಮೆ ಐದು ವಿಕೆಟ್ಗಳ (72ಕ್ಕೆ 5) ಸಾಧನೆ ಮಾಡಿದರು.ಟ್ರಾವಿಸ್ ಹೆಡ್ ಹಾಗೂ ಸ್ಟೀವ್ ಸ್ಮಿತ್ ನಾಲ್ಕನೇ ವಿಕೆಟ್ಗೆ ದ್ವಿಶತಕದ (241) ಜೊತೆಯಾಟ ಕಟ್ಟಿದರು. ಇದರಿಂದ ಭಾರತ ಹಿನ್ನಡೆ ಅನುಭವಿಸಬೇಕಾಯಿತು.ಟ್ರಾವಿಸ್ ಹೆಡ್ ಸರಣಿಯಲ್ಲಿ ಸತತ ಎರಡನೇ ಶತಕದ ಸಾಧನೆ ಮಾಡಿದರು. ಅಡಿಲೇಡ್ನಲ್ಲಿ ನಡೆದ ಹಗಲು-ರಾತ್ರಿ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲೂ ಹೆಡ್ ಶತಕ ಗಳಿಸಿದ್ದರು. ಆಕ್ರಮಣಕಾರಿಯಾಗಿ ಬ್ಯಾಟ್ ಬೀಸಿದ ಹೆಡ್ 160 ಎಸೆತಗಳಲ್ಲಿ 18 ಬೌಂಡರಿಗಳು ಸಹೀತ 152 ರನ್ ಗಳಿಸಿದರು.
ಸ್ಟೀವ್ ಸ್ಮಿತ್ ಟೆಸ್ಟ್ ಕ್ರಿಕೆಟ್ನಲ್ಲಿ 33ನೇ ಶತಕದ ಸಾಧನೆ ಮಾಡಿದರು. ಕಲಾತ್ಮಕ ಇನಿಂಗ್ಸ್ ಕಟ್ಟಿದ ಸ್ಮಿತ್ 101 ರನ್ ಗಳಿಸಿ ಔಟ್ ಆದರು.
ಮಳೆಯಿಂದಾಗಿ ಮೊದಲ ದಿನದಾಟ ಬಹುತೇಕ ಸ್ಥಗಿತಗೊಂಡಿತ್ತು. ಮೊದಲ ದಿನದಾಟದಲ್ಲಿ ಆಸ್ಟ್ರೇಲಿಯಾ ವಿಕೆಟ್ ನಷ್ಟವಿಲ್ಲದೆ 28 ರನ್ ಗಳಿಸಿತ್ತು.ಆದರೆ ಇಂದು ಮಳೆ ಅಡ್ಡಿಯಾಗಲಿಲ್ಲ. ಜಸ್ಪ್ರೀತ್ ಬೂಮ್ರಾ ತಮ್ಮ ಎಂದಿನ ಶೈಲಿಯಲ್ಲಿ ನಿಖರ ದಾಳಿ ಸಂಘಟಿಸುವ ಮೂಲಕ ಆರಂಭಿಕರನ್ನು ಹೊರದಬ್ಬಿದರು. ಉಸ್ಮಾನ್ ಖ್ವಾಜಾ (21) ಮತ್ತು ನೇಥನ್ ಮೆಕ್ಸ್ವೀನಿ (9) ಅವರನ್ನು ಬಲೆಗೆ ಬೀಳಿಸಿದರು.
ಇದರ ಬೆನ್ನಲ್ಲೇ ಮಾರ್ನಸ್ ಲಾಬುಷೇನ್ (12) ಅವರಿಗೆ ನಿತೀಶ್ ಕುಮಾರ್ ರೆಡ್ಡಿ ಪೆವಿಲಿಯನ್ ಹಾದಿ ತೋರಿಸಿದರು. ಈ ವೇಳೆ ಆಸ್ಟ್ರೇಲಿಯಾ 75 ರನ್ನಿಗೆ ಮೂರು ವಿಕೆಟ್ ಕಳೆದುಕೊಂಡಿತ್ತು.
ಆದರೆ ನಾಲ್ಕನೇ ವಿಕೆಟ್ಗೆ ಹೆಡ್ ಹಾಗೂ ಸ್ಮಿತ್ ಜೋಡಿಯ ದ್ವಿಶತಕದ ಜತೆಯಾಟವು ಭಾರತಕ್ಕೆ ಹಿನ್ನಡೆಯಾಗಿ ಪರಿಣಮಿಸಿತು. ಆದರೂ ಛಲ ಬಿಡದ ಬೂಮ್ರಾ ಹೆಡ್, ಸ್ಮಿತ್ ಜತೆಗೆ ಮಿಷೆಲ್ ಮಾರ್ಷ್ (5) ಅವರನ್ನು ಪೆವಿಲಿಯನ್ಗೆ ಅಟ್ಟುವ ಮೂಲಕ ಐದು ವಿಕೆಟ್ ಸಾಧನೆ ಮಾಡಿದರು.
ಆ ಮೂಲಕ ಟೆಸ್ಟ್ ವೃತ್ತಿ ಜೀವನದಲ್ಲಿ 12ನೇ ಸಲ ಐದು ವಿಕೆಟ್ಗಳ ಗೊಂಚಲು ಪಡೆದಿದ್ದಾರೆ.
ಅಲೆಕ್ಸ್ ಕ್ಯಾರಿ (45) ಹಾಗೂ ನಾಯಕ ಪ್ಯಾಟ್ ಕಮಿನ್ಸ್ (20) ಸಹ ಅರ್ಧಶತಕದ ಜೊತೆಯಾಟದಲ್ಲಿ ಭಾಗಿಯಾದರು. ಈ ಪೈಕಿ ಕಮಿನ್ಸ್ ಅವರನ್ನು ಮೊಹಮ್ಮದ್ ಸಿರಾಜ್ ಹೊರದಬ್ಬಿದರು. ಕ್ಯಾರಿ ಹಾಗೂ ಮಿಚೆಲ್ ಸ್ಟಾರ್ಕ್ (7) ಮೂರನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.