ಅಹಮದಾಬಾದ್ : ಇಶಾಂತ್ ಶರ್ಮಾ ಕೊನೆಯ ಓವರ್ನಲ್ಲಿ ನಡೆಸಿದ ಬಿಗುವಾದ ಬೌಲಿಂಗ್ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡ, ಐಪಿಎಲ್ ಪಂದ್ಯದಲ್ಲಿ ಅಗ್ರಸ್ಥಾನದಲ್ಲಿರುವ ಗುಜರಾತ್ ಟೈಟನ್ಸ್ ತಂಡವನ್ನು ಐದು ರನ್ಗಳಿಂದ ಮಣಿಸಿತು. ಮೊದಲು ಬ್ಯಾಟ್ ಮಾಡಿದ ಡೆಲ್ಲಿ ತಂಡ, ವೇಗಿ ಮೊಹಮ್ಮದ್ ಶಮಿ (11ಕ್ಕೆ 4) ಅವರ ದಾಳಿಗೆ ತತ್ತರಿಸಿ 20 ಓವರ್ಗಳಲ್ಲಿ 8 ವಿಕೆಟ್ಗಳಿಗೆ 130 ರನ್ ಗಳಿಸಿತು. ಅಮನ್ ಹಕೀಂ ಖಾನ್ (51; 44ಎ, 4X3, 6X3) ಅರ್ಧಶತಕದ ಮೂಲಕ
ಆಸರೆಯಾದರು. ಹಾರ್ದಿಕ್ ಪಾಂಡ್ಯ ನೇತೃತ್ವದ ಟೈಟನ್ಸ್ ಈ ಗುರಿಯನ್ನು ಸುಲಭವಾಗಿ ಬೆನ್ನಟ್ಟಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಡೆಲ್ಲಿ ತಂಡದ ಶಿಸ್ತಿನ ಬೌಲಿಂಗ್ ಮುಂದೆ ಪರದಾಟ ನಡೆಸಿ, 6 ವಿಕೆಟ್ಗಳಿಗೆ 126 ರನ್ ಗಳಿಸಲಷ್ಟೇ ಶಕ್ತವಾಯಿತು. ಹಾರ್ದಿಕ್ (ಅಜೇಯ 59, 53) ನಡೆಸಿದ ಹೋರಾಟ ಸಾಕಾಗಲಿಲ್ಲ. ಇಶಾಂತ್ (23ಕ್ಕೆ 2), ಖಲೀಲ್ ಅಹ್ಮದ್ (24ಕ್ಕೆ 2) ಮತ್ತು ಕುಲದೀಪ್ ಯಾದವ್ (15ಕ್ಕೆ 1) ಗಮನ ಸೆಳೆದರು.
ಪಾಂಡ್ಯ ಮತ್ತು ಅಭಿನವ್ ಮನೋಹರ್ (26 ರನ್, 33 ಎ.) ಐದನೇ ವಿಕೆಟ್ಗೆ 62 ರನ್ ಸೇರಿಸಿದರು. ಕೊನೆಯ ಎರಡು ಓವರ್ಗಳಲ್ಲಿ 33 ರನ್ಗಳು ಬೇಕಿದ್ದವು. ಎನ್ರಿಚ್ ನಾಕಿಯಾ ಬೌಲ್ ಮಾಡಿದ 19ನೇ ಓವರ್ನಲ್ಲಿ ರಾಹುಲ್ ತೆವಾಟಿಯಾ (20 ರನ್, 7 ಎ.) ಕೊನೆಯ ಮೂರು ಎಸೆತಗಳನ್ನು ಸಿಕ್ಸರ್ಗೆ ಅಟ್ಟಿ ಗೆಲುವಿನ ಆಸೆ ಚಿಗುರುವಂತೆ ಮಾಡಿದರು.ಇಶಾಂತ್ ಬೌಲ್ ಮಾಡಿದ ಅಂತಿಮ ಓವರ್ನಲ್ಲಿ 12 ರನ್ಗಳ ಅವಶ್ಯಕತೆಯಿತ್ತು. ಒತ್ತಡದ ನಡುವೆಯೂ ಉತ್ತಮ ಬೌಲ್ ಮಾಡಿದ ಅನುಭವಿ ವೇಗಿ, ತೆವಾಟಿಯಾ ವಿಕೆಟ್ ಪಡೆದರಲ್ಲದೆ ಆರು ರನ್ ಮಾತ್ರ ಬಿಟ್ಟುಕೊಟ್ಟರು.