ಚಿತ್ರ-ಬರಹ: ಶಿವಸುಬ್ರಹ್ಮಣ್ಯ ಕೆ.
ಹಕ್ಕಿಗಳ ಬಣ್ಣ, ನೋಟ, ಹಾರಾಟವೇ ಸೋಜಿಗ. ಅದರ ಮೈ ಮಾಟವೇ ಅದ್ಭುತ. ನಾವು ಸ್ವಲ್ಪ ಮೈ ಹುಷಾರಿಲ್ಲದೇ ಇದ್ದರೆ ವೈದ್ಯರ ಬಳಿ ಓಡುತ್ತೇವೆ. ಹಕ್ಕಿ ಪ್ರಪಂಚದಲ್ಲಿ ವೈದ್ಯರಿಲ್ಲ! ಹಕ್ಕಿಗಳು ತಮಗೆ ತಾವೇ ಚಿಕಿತ್ಸೆ ಮಾಡಿಕೊಳ್ಳಬೇಕು.
ಹಕ್ಕಿಗಳು ನೀರು ಕುಡಿಯಲು ಬಂದು ನೀರಾಟವಾಡುವುದನ್ನು ಹಲವು ವರ್ಷಗಳಿಂದ ನಾನು ಗಮನಿಸುತ್ತಾ ಬಂದಿದ್ದೇನೆ. ನೀರು ಕುಡಿದ ಮೇಲೆ ಮೈ ತಂಪಾಗಿಸಲು ನೀರಲ್ಲಿ ಆಟವಾಡುವುದು ಸಹಜ ಎಂದಷ್ಟೇ ಮೊದಲು ಭಾವಿಸಿದ್ದೆ. ಆದರೆ ಹಕ್ಕಿಗಳು ತಮ್ಮ ಆರೋಗ್ಯ ಕಾಪಾಡಲು ನೀರಲ್ಲಿ
ಆಡುತ್ತವೆ ಎಂದು ಅನಂತರ ತಿಳಿಯಿತು. ನೀರಲ್ಲಿ ಆಡುವುದೆಂದರೆ ಕೇವಲ ಆಟವಲ್ಲ, ಅದೊಂದು ಚಿಕಿತ್ಸೆ.
ಮರ, ಹುಲ್ಲುಗಳ ಮಧ್ಯೆ ಹಕ್ಕಿಗಳು ಸದಾ ಆಹಾರ ಹುಡುಕುತ್ತವೆ. ಆಗ ಅಲ್ಲಿ ವಾಸವಿರುವ ಕೀಟಗಳು, ಹುಳಗಳು ಥಟ್ಟನೆ ಹಕ್ಕಿಗಳ ರೆಕ್ಕೆಯೊಳಗೆ ಸೇರಿಕೊಂಡು ಹೊಸ ಜೀವನ ಆರಂಭಿಸುತ್ತವೆ. ಕೀಟಗಳು, ಹುಳಗಳಿಗೆ ಹೊಸ ಜೀವನ. ಆದರೆ ಹಕ್ಕಿಗಳಿಗೆ ಜೀವಕ್ಕೇ ಸಂಚಕಾರ. ಹಕ್ಕಿಗಳ ರಕ್ತ ಹೀರುತ್ತ ಕೀಟ, ಹುಳಗಳು ಹೊಟ್ಟೆ ತುಂಬಿಸುತ್ತವೆ. ಇದರಿಂದಾಗಿ ಹಕ್ಕಿಗಳು ಕೃಶವಾಗುತ್ತವೆ.
ಸಾಮಾನ್ಯವಾಗಿ ಬಿಸಿಲು ಇರುವಾಗ ಹಕ್ಕಿಗಳು ನೀರಿಗೆ ಇಳಿಯುತ್ತವೆ. ಇದರಿಂದ ಎರಡು ಲಾಭ. ಒಂದನೆಯದು ರೆಕ್ಕೆಗಳು ಮತ್ತು ಮೈ ಒದ್ದೆಯಾಗಿ ತಂಪಾಗುತ್ತದೆ. ಎರಡನೆಯದಾಗಿ ಹಕ್ಕಿ ಪುಕ್ಕಗಳ ಮಧ್ಯೆ ಅವಿತಿರುವ ಹುಳಗಳು ನೀರಿನ ರಭಸಕ್ಕೆ ಒದ್ದೆಯಾಗಿ ಬೀಳುತ್ತವೆ. ಅಷ್ಟಕ್ಕೆ ಹಕ್ಕಿ ತನ್ನ ಒಂದು ದಿನದ ಆಯುಸ್ಸು ವೃದ್ಧಿಸಿಕೊಂಡಂತಾಯ್ತು! ಇದು ಹಕ್ಕಿಗಳು ತಾವೇ ಕಂಡುಕೊಂಡ ಉಪಾಯ.
ಕೆಲವು ಹಕ್ಕಿಗಳು ರೆಕ್ಕೆಗಳನ್ನು ಮಾತ್ರ ಒದ್ದೆ ಮಾಡಿಕೊಳ್ಳುತ್ತವೆ. ಇನ್ನು ಕೆಲವು ತನ್ನ ಗಾತ್ರಕ್ಕೆ ಅನುಗುಣವಾಗಿ ನೀರಿಗೆ ಡೈವ್ ಹೊಡೆದು ತಲೆಯನ್ನೂ ಮುಳುಗಿಸುತ್ತವೆ. ಹಾಗೆ ಮುಳುಗಿ ಏಳುವ ಕ್ಷಣವೇ ಒಂದು ಅದ್ಭುತ ಸೃಷ್ಟಿ. ಒಂದು ಅಪರೂಪದ ಛಾಯಾಚಿತ್ರವೂ ಹೌದು. ಕೆಲವು ಪ್ರಬೇಧದ ಹಕ್ಕಿಗಳು ಗುಂಪು ಗುಂಪಾಗಿ ನೀರಿಗೆ ಇಳಿದರೆ, ಇನ್ನು ಕೆಲವು ಒಂಟಿಯೇ!
ಹಕ್ಕಿಗಳನ್ನು ನೋಡಿ, ಹಕ್ಕಿ ಹಾಡು ಕೇಳಿ ಕವಿಗಳು ನೂರಾರು ಹಾಡು ಬರೆದಿದ್ದಾರೆ. ಹಕ್ಕಿಯ ನೀರಾಟದ ದೃಶ್ಯವನ್ನು ನಾನು ಚಿತ್ರೀಕರಿಸಿದ್ದೇನೆ. ಕವಿಗಳು ಹಕ್ಕಿಗಳ ನೀರಾಟವನ್ನು ಹೇಗೆ ವರ್ಣಿಸಬಹುದುದೆಂದು ಯೋಚಿಸುತ್ತಿರುವೆ.
ಅವಿತು ಕುಳಿತು ಹಕ್ಕಿ ನೀರಾಟವಾಡುವುದನ್ನು ನಾನು ಚಿತ್ರೀಕರಿಸುತ್ತೇನೆ. ಹೀಗೆಯೇ ನನ್ನೊಂದಿಗೆ ಅವಿತು ಕುಳಿತು ಹಕ್ಕಿ ನೀರಾಟದ ಸೊಬಗನ್ನು ಕಣ್ಣಾರೆ ನೋಡಿ ಆನಂದಿಸಿ ಕವಿತೆ ಬರೆಯುತ್ತೀರಾ ಎಂದು ‘ಹಕ್ಕಿಯ ಕೊರಳಿಗೆ ಹಾಡಿನ ಒಡವೆಯ ತೊಡಿಸಿದವರಾರು…’ ಎಂದು ಕವಿತೆ ಬರೆದಿರುವ ಕವಿಯಜ್ಜ ಸುಬ್ರಾಯ ಚೊಕ್ಕಾಡಿಯವರಿಗೆ ಕೇಳುತ್ತೇನೆ.
ಅವರು ಬರೆಯುವ ಹೊಸ ಕವಿತೆಯನ್ನು ಗಾಯಕರು ಹಾಡಿದಾಗ ಹಕ್ಕಿ ಪ್ರಪಂಚವೇ ತಲೆ ತೂಗಿ ಹಾಡು ಹಾಡಬಹುದಲ್ಲವೇ..?
(ಶಿವಸುಬ್ರಹ್ಮಣ್ಯ ಕೆ.ಅವರು ಹಿರಿಯ ಪತ್ರಕರ್ತರು. ಪರಿಸರ, ವನ್ಯಜೀವಿ ಛಾಯಾಚಿತ್ರಕಾರರು)