*ಗಂಗಾಧರ ಕಲ್ಲಪಳ್ಳಿ.
ಸುಳ್ಯ:ಕಳೆದ ಒಂದೆರಡು ವರ್ಷಗಳ ಹಿಂದೆ ತೋಟಗಳ ತುಂಬೆಲ್ಲಾ ಕಾಡಿನಂತೆ ಬೆಳೆಯುತ್ತವೆ ಎಂದು ಹಲವು ಮಂದಿ ಕೊಕ್ಕೊ ಮರಗಳನ್ನು ನಿರ್ದಾಕ್ಷಿಣ್ಯವಾಗಿ ಕಡಿದು ಬಿಸಾಡಿದ್ದರು.ಆದರೆ ಕಳೆದ ಬೇಸಿಗೆಯಲ್ಲಿ ದೊರೆತ ಬಂಪರ್ ಬೆಳೆಯ ಪರಿಣಾವೊ ಎಂಬಂತೆ ಇದೀಗ ಕೊಕ್ಕೊ ಬೆಳೆ ಬೆಳೆಯಲು ಕೃಷಿಕರು ಇನ್ನಿಲ್ಲದ ಒಲವು ವ್ಯಕ್ತಪಡಿಸಿದ್ದಾರೆ. ಆದುದರಿಂದಲೇ ಕೊಕ್ಕೋ ಗಿಡಗಳಿಗೆ ಇನ್ನಿಲ್ಲದ ಡಿಮಾಂಡ್. ರಾಜ್ಯ ಮಾತ್ರವಲ್ಲದೆ ನೆರೆಯ ಕೇರಳ, ತಮಿಳುನಾಡಿನಿಂದಲೂ ಉತ್ತಮ ತಳಿಯ
ಕೊಕ್ಕೋ ಗಿಡಗಳನ್ನು ಅರಸಿ ಸುಳ್ಯದ ನರ್ಸರಿಗಳತ್ತ ಬರುತ್ತಿದ್ದಾರೆ.
ನರ್ಸರಿಗಳಲ್ಲಿ ಕೃಷಿಕರು ಮೊದಲು ಕೇಳುವುದೇ ಕೊಕ್ಕೊ ಗಿಡಗಳು ಇದೆಯಾ.. ನರ್ಸರಿಗಳಲ್ಲಿ ಬಹು ಬೇಡಿಕೆಯ ಗಿಡವಾಗಿ ಕೊಕ್ಕೊ ಗಿಡ ಮಾರ್ಪಾಡಾಗಿದ್ದು ನರ್ಸರಿಗಳಲ್ಲಿನ ಹೀರೋ ಆಗಿದೆ..!
ಸುಮಾರು 30 ಸಾವಿರ ಕೊಕ್ಕೊ ಗಿಡ ತಯಾರಿಸಿ ಮಾರುವ ಯೋಜನೆ ಇತ್ತು. ಆದರೆ ಈಗಾಗಲೇ ಸುಮಾರು ಒಂದು ಲಕ್ಷಕ್ಕೂ ಅಧಿಕೆ ಕೊಕ್ಕೊ ಗಿಡಗಳಿಗೆ ಬೇಡಿಕೆ ಬಂದಿದೆ ಎನ್ನುತ್ತಾರೆ ಸುಳ್ಯದ ಕಸ್ತೂರಿ ನರ್ಸರಿಯ ಮಾಲಕರಾದ ಮಧುಸೂಧನ ಕುಂಭಕ್ಕೋಡು.
ತಮಿಳುನಾಡು, ಕೇರಳಗಳಿಂದ ಅಡಿಕೆ ಮತ್ತಿತರ ಗಿಡಗಳಂತೆ ಕೊಕ್ಕೊ ಗಿಡಕ್ಕೂ ಬೇಡಿಕೆ ಹೆಚ್ಚಿದೆ ಎನ್ನುತ್ತಾರವರು.
ಕಳೆದ ಬೇಸಿಗೆಯಲ್ಲಿ ಕೊಕ್ಕೋ ಬೆಳೆಗೆ ಏರಿದ ಧಾರಣೆಯೇ ಕೊಕ್ಕೊ ಗಿಡಕ್ಕೆ ಬೇಡಿಕೆ ಹೆಚ್ಚಲು ಕಾರಣವಾಗಿದೆ. ಸಾಮಾನ್ಯವಾಗಿ ಕೆಜಿಗೆ ರೂ.50-60 ದೊರೆಯುತ್ತಿದ್ದ ಕೊಕ್ಕೊಗೆ ಈ ಬಾರಿ ಕೆಜಿಗೆ 330 ರೂವರೆಗೆ ಏರಿತ್ತು. ಸರಾಸರಿ ಕೆಜಿಗೆ 250 ರೂ ಸಿಕ್ಕಿತ್ತು. ಕೊಕ್ಕೊ ಕೃಷಿ ಈ ಬಾರಿ ಕೈ ತುಂಬಾ ಆದಾಯವನ್ನು ತಂದಿಟ್ಟಿತ್ತು. ಈ ಹಿನ್ನಲೆಯಲ್ಲಿ ಕೊಕ್ಕೊ ಗಿಡಕ್ಕೆ ಭಾರೀ ಬೇಡಿಕೆ ಉಂಟಾಗಿದೆ. ಹಿಂದೊಮ್ಮೆ ರಬ್ಬರ್ಗೆ ಉತ್ತಮ ಬೆಲೆ ಇದ್ದಾಗ
ರಬ್ಬರ್ ಗಿಡಕ್ಕೆ ಭಾರೀ ಡಿಮಾಂಡ್ ಇತ್ತು ಮತ್ತು ಗಿಡದ ಬೆಲೆ ಕೂಡ ಸಾಕಷ್ಟು ಏರಿತ್ತು. ಇದೀಗ ಕೊಕ್ಕೊದ ಸರದಿ.ತೋಟದಲ್ಲಿ, ಜೊತೆಗೆ ಜಾಗ ಇರುವಲ್ಲೆಲ್ಲಾ ನಾಲ್ಕಾರು ಕೊಕ್ಕೊ ಗಿಡ ನೆಡುವ ಯೋಚನೆ ಕೃಷಿಕನದ್ದು.
ಪರ್ಯಾಯ ಬೆಳೆ, ಉಪ ಬೆಳೆಯ ಗಿಡಗಳತ್ತ ಒಲವು:
ಉತ್ತಮ ದರ ಇರುವ ಕಾರಣ ಮತ್ತು ಈ ಭಾಗದ ಕೃಷಿಕರ ಪ್ರಮುಖ ಆಡಿಕೆ ಬೆಳೆ ಆದ ಕಾರಣ ಅಡಿಕೆ ಗಿಡಗಳಿಗೆ ಹೆಚ್ಚಿನ ಒಲವು ಮತ್ತು ಬೇಡಿಕೆ ಇದ್ದೇ ಇದೆ. ಆದರೆ ಹಳದಿ ಎಲೆ ರೋಗ, ಎಲೆ ಚುಕ್ಕಿ ರೋಗ ಹೀಗೆ ಹಲವು ರೋಗಗಳು ಅಡಿಕೆಗೆ ಆಪತ್ತಾಗಿರುವ ಕಾರಣ ಕೃಷಿಕರು ಉಪ ಬೆಳೆ, ಪರ್ಯಾಯ ಬೆಳೆಗಳ ಗಿಡಗಳನ್ನು ನೆಡಲು ಆಸಕ್ತಿ ತೋರಿರುವುದು ಕಂಡು ಬರುತ್ತಿದೆ.ಕೊಕ್ಕೊ, ಕರಿಮೆಣಸು ಜಾಯಿಕಾಯಿ, ರಾಂಪತ್ರೆ, ಲವಂಗ, ರಂಬೂಟಾನ್, ಡ್ರಾಗನ್ ಪ್ರೂಟ್, ಚಿಕ್ಕು ಹೀಗೆ ಹಲವು ಗಿಡಗಳಿಗೆ ಸಾಕಷ್ಟು ಬೇಡಿಕೆ ಇದೆ. ನರ್ಸರಿಗಳಲ್ಲಿ ಈ ಗಿಡಗಳ ಮಾರಾಟ ಹೆಚ್ಚಿದೆ.
ಅಡಿಕೆಗೆ ಪರ್ಯಾಯ:
ಉತ್ತಮ ಆದಾಯ ಕೊಡುವ ಉಪ ಬೆಳೆ ಎನ್ನುವುದಕ್ಕಿಂದ
ಕೊಕ್ಕೊ, ಕರಿಮೆಣಸು, ಜಾಯಿಕಾಯಿ, ರಾಂಪತ್ರೆ, ಲವಂಗ, ರಂಬೂಟಾನ್, ಡ್ರಾಗನ್ ಪ್ರೂಟ್, ಚಿಕ್ಕು ಈ ರೀತಿಯ ಬೆಳೆಗಳು ಅಡಿಕೆಗೆ ಪರ್ಯಾಯವೂ ಹೌದು ಎನ್ನುತ್ತಾರೆ ಮಧುಸೂಧನ ಕುಂಭಕ್ಕೋಡು. ಡ್ರಾಗನ್ ಫ್ರೂಟ್ ನೀರು ಅತೀ ಕಡಿಮೆ ಬೇಕಾಗುವ ಕೃಷಿ. ಕ್ಯಾಕ್ಟಸ್ ಗಿಡದಂತೆ ನೀರಿಲ್ಲದೆ ಬದುಕುವ ಡ್ರಾಗನ್ ಫ್ರೂಟ್ ಗಿಡಕ್ಕೆ ಅಡಿಕೆಯ ಶೇ.10 ಮಾತ್ರ ನೀರು ಸಾಕು.ಉತ್ಪಾದನಾ ವೆಚ್ಚ ಕಡಿಮೆ ಇರುವ ಮತ್ತು ಉತ್ತಮ ದರ ಇರುವ ಡ್ರಾಗನ್ ಪ್ರೂಟ್ ಬೆಳೆ ಹಲವು ಮಂದಿ ಕೃಷಿಕರು ಜೀವನೋಪಾಯದ
ಮಧುಸೂದನ ಕುಂಭಕ್ಕೋಡು.
ಕೃಷಿಯಾಗಿ ಮಾಡಿದ್ದಾರೆ. ಡ್ರಾಗನ್ ಪ್ರೂಟ್, ರಂಬೂಟಾನ್, ವಿವಿಧ ತಳಿಯ ಸಪೋಟಾಗಳಿಗೆ ದೊಡ್ಡ ಮಾರುಕಟ್ಟೆ ಇದೆ. ಅದೇ ರೀತಿ ರಾಂಪತ್ರೆ, ಜಾಯಿಕಾಯಿ, ಲವಂಗ ಬೆಳೆಗೆ ಉತ್ತದ ಬೇಡಿಕೆ ಇದೆ. ಈ ಬೆಳೆಗಳ ನಿರ್ವಹಣೆ ಸುಲಭ ಮತ್ತು ಉತ್ಪಾದನಾ ವೆಚ್ಚ ಕಡಿಮೆ ಇರುವ ಕಾರಣ ಕೃಷಿಕರು ಈ ರೀತಿಯ ಕೃಷಿಗೆ ಒಲವು ತೋರಿಸುತ್ತಿದ್ದಾರೆ ಎಂಬುದು ಅವರ ಅಭಿಮತ.
ವಿಜ್ಞಾನಿಗಳಿಂದ ಅಥವಾ ತಜ್ಞರಿಂದ ಮಾಹಿತಿ ಪಡೆದುಕೊಂಡು ಈ ರೀತಿಯ ಕೃಷಿಯ ಬಗ್ಗೆ ಕೃಷಿಕರಿಗೆ ಮಾಹಿತಿಯನ್ನೂ ಅವರು ನೀಡುತ್ತಾರೆ. ಈ ರೀತಿಯ ಬೆಳೆಯ ಗಿಡಗಳಿಗೆ ಸಾಕಷ್ಟು ಬೇಡಿಕೆ ಇದೆ.ಸಾಧ್ಯ ಆದಷ್ಟು ಆ ರೀತಿಯ ಗಿಡಗಳನ್ನು ಸರಬರಾಜು ಮಾಡುತ್ತೇವೆ ಎನ್ನುತ್ತಾರೆ ಮಧುಸೂದನ ಕುಂಭಕ್ಕೋಡು.