ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಅಡಿಕೆಗೆ ಎಲೆಚುಕ್ಕಿ ಹಾಗೂ ಹಳದಿ ಎಲೆರೋಗ ಬಾಧಿಸಿರುವುದನ್ನು ತಡೆಯಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌವಾಣ್ ಅವರನ್ನು ಭೇಟಿಯಾಗಿ ಮನವಿ ಮಾಡಿದ್ದಾರೆ.ದಕ್ಷಿಣ ಕನ್ನಡದಲ್ಲಿ ಅಡಿಕೆ ಕೃಷಿಯನ್ನು ತೀವ್ರವಾಗಿ ಬಾಧಿಸಿರುವ ಅಡಿಕೆ ಎಲೆಚುಕ್ಕಿ ಹಾಗೂ ಹಳದಿ ಎಲೆರೋಗದ ಗಂಭೀರತೆಯನ್ನು ಕೃಷಿ ಸಚಿವರಿಗೆ
ಮನವರಿಕೆ ಮಾಡಿದ್ದಾರೆ. ಎಲೆಚುಕ್ಕೆ ಹಾಗೂ ಹಳದಿ ಎಳೆ ರೋಗದಿಂದ ಪಾರು ಮಾಡುವುದಕ್ಕೆ ಶಾಶ್ವತ ಕ್ರಮ ತೆಗೆದುಕೊಳ್ಳುವಂತೆ ಕೋರಿದ್ದಾರೆ.ಅತಿವೃಷ್ಟಿ, ಪ್ರತಿಕೂಲ ಹವಾಗುಣ ಮುಂತಾದ ಕಾರಣಗಳಿಂದಾಗಿ ಅಡಿಕೆ ಬೆಳೆಗೆ ನಿರಂತರವಾಗಿ ರೋಗಬಾಧೆ ಕಾಣಿಸಿಕೊಂಡು ಇಳುವರಿ ಗಣನೀಯವಾಗಿ ಕಡಿಮೆಯಾಗುತ್ತಿದೆ. ಇದರಿಂದ ಅಡಿಕೆ ಕೃಷಿಕರ ಆದಾಯ ಕುಸಿದು ಆರ್ಥಿಕವಾದ ಸವಾಲುಗಳು ಎದುರಿಸುತ್ತಿದ್ದಾರೆ. ಹೀಗಾಗಿ, ಸಂಕಷ್ಟದಲ್ಲಿರುವ ಜಿಲ್ಲೆಯ ಅಡಿಕೆ ಬೆಳೆಗಾರರ ರಕ್ಷಣೆಗೆ ಕೇಂದ್ರ ಸರ್ಕಾರ ಕೂಡಲೇ ಸ್ಪಂದಿಸುವಂತೆ ಕ್ಯಾ. ಚೌಟ ಮನವಿ ಮಾಡಿದ್ದಾರೆ.
ದಕ್ಷಿಣ ಕನ್ನಡದ ಹವಾಗುಣವು ಕಾಫಿ ಬೆಳೆಗೆ ಪೂರಕವಾಗಿದ್ದು, ಇಲ್ಲಿ ಕಾಫಿ ಕೃಷಿಗೆ ವಿಪುಲ ಅವಕಾಶಗಳಿವೆ. ಹೀಗಾಗಿ, ಕಾಫಿ ಬೋರ್ಡ್ ಮೂಲಕ ದಕ್ಷಿಣ ಕನ್ನಡ ಭಾಗದಲ್ಲಿಯೂ ಕಾಫಿ ಬೆಳೆಗಾರರನ್ನು ಉತ್ತೇಜಿಸುವುದಕ್ಕೆ ಸೂಕ್ತ ತಾಂತ್ರಿಕ ಮಾರ್ಗದರ್ಶನ, ಸಬ್ಸಿಡಿ, ಗುಣಮಟ್ಟದ ಸಸಿ ಒದಗಿಸುವುದಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಕೃಷಿ ಸಚಿವರನ್ನು ಒತ್ತಾಯಿಸಿದ್ದಾರೆ.
ಲೋಕಸಭಾ ಸದಸ್ಯರಾದ ಕೋಟ ಶ್ರೀನಿವಾಸ್ ಪೂಜಾರಿ,ರಾಘವೇಂದ್ರ ವಿಶ್ವೇಶ್ವರಯ್ಯ ಹೆಗಡೆ ಕಾಗೇರಿ , ಕ್ಯಾಪ್ಟನ್ ಬ್ರಿಜೇಶ್ ಚೌಟ ಮತ್ತಿತರರ ನಿಯೋಗ ಸಚಿವರನ್ನು ಭೇಟಿ ಮಾಡಿದರು.