*ಡಾ.ಸುಂದರ ಕೇನಾಜೆ.
ಕಳೆದ ಎಪ್ಪತ್ತು ವರ್ಷಗಳ ನಂತರದ ಕಾಸರಗೋಡಿನ ಸ್ಥಿತಿಗತಿಯನ್ನು ಅವಲೋಕಿಸಿದರೆ, ಇಂಥವರು ಎಂದೆಂದಿಗೂ ಪ್ರಾತಃಸ್ಮರಣೀಯರು. ದುಡಿದ ಅನ್ನವನ್ನಾದರೂ ಬಿಡಬಹುದು, ನುಡಿವ ಅಕ್ಷರವನ್ನು ಬಿಡುವುದು ಮಾತೃವಿಯೋಗದಂತೆ. ತನ್ನ ನೆಲದ ಭಾಷೆಯನ್ನೇ ಕಳೆದುಕೊಳ್ಳುವ ಕಾಸರಗೋಡಿನ ಕನ್ನಡಿಗರು, ನೆಕ್ಕಿ ಜೀವ ತೆಗೆಯುವ ಕರಡಿಯ ಕ್ರೌರ್ಯಕ್ಕೆ ಒಳಗಾದವರಂತೆ. ಹೌದು, ೧೯೫೬ರ ಭಾಷಾವಾರು ಪ್ರಾಂತ್ಯ ರಚನೆ ಭಾರತದ ಅನೇಕ ರಾಜ್ಯಗಳ ಗಡಿ ಭಾಗದ ಜನರಿಗೆ ನೀಡಿದ ಪರಿಹಾರವಿಲ್ಲದ ಯಾತನೆ ಇಂತಹದ್ದೇ. ಭಾಷೆಯನ್ನಾಡುವ ಜನ ಮತ್ತು ಸಂಸ್ಕೃತಿಯ ಆಧಾರದಲ್ಲಿ ರಾಜ್ಯ ವಿಂಗಡಣೆಯಾಗದೇ ರಾಜಕೀಯ ಮತ್ತು
ಆರ್ಥಿಕ ನೆಲೆಗಟ್ಟಿನ ಮೇಲೆ ನೆಲ ವಿಭಜಿಸಿದ ಪ್ರಮಾದವೇ ಇಂದಿನ ಸಂಕಟಗಳಿಗೆ ಕಾರಣ. ಈ ಕಾಲಘಟ್ಟದಲ್ಲಿ ಅದಕ್ಕೆ ಸಾಂತ್ವನ ನೀಡಲು ಒಂದಷ್ಟು ಮಹನೀಯರು ಇನ್ನಿಲ್ಲದಂತೆ ಪ್ರಯತ್ನಿಸಿದ್ದು, ಕೊನೆಗೆ ಮ್ಲಾನತೆಯಿಂದ ಉಳಿದದ್ದು ಈಗ ಇತಿಹಾಸ.
ಕಾಸರಗೋಡು ಮಲೆಯಾಳಂ ಭೂಮಿಗೆ ಸೇರಿದಂದಿನಿಂದ ಇಂದಿನವರೆಗೂ ಈ ಭಾಗದಲ್ಲಿ ಒಂದಲ್ಲ ಒಂದು ಹೋರಾಟ ನಿರಂತರ ನಡೆಯುತ್ತಲೇ ಬಂದಿದೆ. ಇನ್ನೇನೋ ಎರಡು ವರ್ಷ ಕಳೆದರೆ ಈ ಹೋರಾಟಕ್ಕೆ ಎಪ್ಪತ್ತು ವರ್ಷಗಳು! ಹೀಗೆ ನಡೆದ ಹೋರಾಟಗಳಿಗೆ ಎರಡು ಆಯಾಮಗಳಿವೆ, ರಾಜಕೀಯ ಸಂಘಟನೆ ಅಥವಾ ಹೋರಾಟ ಸಮಿತಿಯನ್ನು ಇಟ್ಟುಕೊಂಡು ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಒತ್ತಡ, ಭಾಷಣ, ಮನವಿ, ಸಭೆ, ಸಮಾರಂಭಗಳ ಮೂಲಕ ಜಾಗೃತಿ ಮೂಡಿಸುವ ನೇರ ಕಾರ್ಯಾಚರಣೆ ಒಂದು. ಇದನ್ನು ಕಾಸರಗೋಡು ಕಳೆದ ಅರವತ್ತೆಂಟು ವರ್ಷಗಳಲ್ಲಿ ತೀವ್ರವಾಗಿಯೇ ಕಂಡಿದೆ. ಅನೇಕ ಮಹನೀಯರು (ಉಮೇಶ ರಾವ್, ಬಿ.ಎಸ್ ಕಕ್ಕಿಲ್ಲಾಯ, ಕಳ್ಳಿಗೆ ಮಹಾಬಲ ಭಂಡಾರಿ, ಜನಾಬ್ ಎಂ.ಎಸ್ ಮೊಗ್ರಾಲ್, ಯು.ಪಿ ಕುಣಿಕುಳ್ಳಾಯ, ಕೈಯಾರ ಕಿಞ್ಞಂಣ್ಣ ರೈ, ಎಂ.ಎಸ್ ಕಡಂಬಳಿತ್ತಾಯ, ಏವಂದೂರು ಕೃಷ್ಣ ಮಣಿಯಾಣಿ ಹೀಗೆ….)ಈ ಸ್ವರೂಪದ ಭಾಷಾ ಹೋರಾಟವನ್ನು ಕರ್ನಾಟಕದ ಏಕೀಕರಣದ ಸ್ವರೂಪದಲ್ಲೇ ನಡೆಸಿದ್ದಾರೆ. ಈ ಹೋರಾಟ ಮಹಾಜನ್ ಅಯೋಗ ರಚಿಸಿ ಅದರ ಸಕಾರಾತ್ಮಕ ವರದಿ ಪಡೆಯುವಷ್ಟರ ಮಟ್ಟಿಗೆ ಸಫಲವಾಗಿದೆ. ಆದರೆ ಕಾರ್ಯರೂಪ ಇಂದಿಗೂ ವಿಫಲವಾಗಿಯೇ ಉಳಿದಿದೆ.
ಜಾರಿಯಾಗದೇ ಉಳಿದ ಮಹಾಜನ್ ವರದಿಯನ್ನು ಒತ್ತಟ್ಟಿಗಿಟ್ಟು, ಕಾಸರಗೋಡಿನಲ್ಲಿ ತಣ್ಣನೆ ಕನ್ನಡ ಕಟ್ಟುವ ಮತ್ತು ಉಸಿರೊಡನೆ ಉಳಿಸುವ ಕೆಲಸ ಗುಪ್ತಗಾಮಿನಿಯಂತೆ ನಡೆಸಿದ್ದು ಇನ್ನೊಂದು ಆಯಾಮ. ಇಲ್ಲಿ ಪ್ರಚಾರವಿರಲಿಲ್ಲ. ಸಭೆ, ಸಮಾರಂಭಗಳೆಂಬ ಭೌತಿಕ ನಡೆಗಳಿರಲಿಲ್ಲ. ಹೋರಾಟದ ಘೋಷವಾಕ್ಯಗಳಾಗಲಿ, ಬೇಕೇಬೇಕೆನ್ನುವ ಹಕ್ಕೊತ್ತಾಯವಾಗಲಿ ಕಾಣಸಿಗುವುದಿಲ್ಲ. ಬದಲಾಗಿ ವ್ಯಕ್ತಿಯ ಹೃದಯದ ಮಿಡಿತಗಳಲ್ಲಿ ಭಾಷೆಯನ್ನು ಎರಕ ಹೊಯ್ಯವ ಕಾಯಕ ಮಾತ್ರವಿತ್ತು. ಇದೂ ಈ ಕಾಸರಗೋಡಿನಲ್ಲಿ ಸದ್ದಿಲ್ಲದೇ ನಡೆದಿದೆ. ಹಾಗೆ ನಡೆಸಿದ ಮಹನೀಯರ( ಪ್ರೊ.ಸುಬ್ರಾಯ ಭಟ್ಟ, ಪ್ರೊ.ಬಿ.ಕೆ ತಿಮ್ಮಪ್ಪ, ಪ್ರೊ.ವೇಣುಗೋಪಾಲ ಕಾಸರಗೋಡು, ವೆಂಕಟರಾಜ ಪುಣಿಂಚತ್ತಾಯ, ಪ್ರೊ.ಪದ್ಮನಾಭ, ಪುರುಷೋತ್ತಮ ಮಾಸ್ತರ್, ನಿವೃತ್ತ-ಪ್ರವೃತ್ತ ಅಧ್ಯಾಪಕರ) ಮಧ್ಯೆ ಮುಕುಟ ಪ್ರಾಯವಾಗಿ ಗುರುತಿಸಬಹುದಾದ ಹೆಸರೇ ಇವರದು. ಪ್ರೊ.ಪಿ.ಶ್ರೀಕೃಷ್ಣ ಭಟ್ ಕಾಸರಗೋಡಿನ ಸಾವಿರಾರು ವಿದ್ಯಾರ್ಥಿಗಳ ನರನಾಡಿಯಲ್ಲಿ ಕನ್ನಡದ ಶಕ್ತಿಮದ್ದನ್ನು ಅರೆದು ಸೇರಿಸಿದವರು. ಈ ಕೆಲಸವನ್ನು ಕಳೆದ ಐವತ್ತಕ್ಕೂ ಹೆಚ್ಚು ವರ್ಷಗಳಿಂದ ವಿಭಿನ್ನ ರೀತಿಯಲ್ಲಿ ಮಾಡುತ್ತಾ ಬಂದವರು. ಇದೀಗ ತನ್ನ ಎಂಬತ್ತಮೂರನೇ ವಯಸ್ಸಿನಲ್ಲೂ ತನ್ನ ಪಾಡಿಗೆ ತಾನು ಕನ್ನಡದ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಲೇ ಇದ್ದಾರೆ.
ಕಾಸರಗೋಡು ಕೇರಳಕ್ಕೆ ಸೇರಿದ ನಂತರ ಅಲ್ಲಿ ಕನ್ನಡಕ್ಕೆ ಆಶಾದಾಯಕವಾಗಿದ್ದದ್ದು ಇಲ್ಲಿಯ ಸರಕಾರಿ ಮತ್ತು ಅನುದಾನಿತ ಕನ್ನಡ ಶಾಲೆಗಳು(ಇಂದು ಮತ್ತೆ ರಾಜಕೀಯ ಕಾರಣಕ್ಕೆ ಇವೆಲ್ಲವೂ ಏದುಸಿರು ಬಿಡುತ್ತಿವೆ) ಮತ್ತು ಎರಡು ಉನ್ನತ ವ್ಯಾಸಂಗದ ಕಾಲೇಜುಗಳು. ಅದರಲ್ಲಿ ಮಂಜೇಶ್ವರ ಸರಕಾರಿ ಕಾಲೇಜು ಗಡಿ ಭಾಗದಲ್ಲಿದ್ದರೆ, ಕಾಸರಗೋಡು ಸರಕಾರಿ ಕಾಲೇಜು ಹೃದಯ ಭಾಗದಲ್ಲಿದೆ. ಪ್ರೊ.ಶ್ರೀಕೃಷ್ಣ ಭಟ್ಟರು ಇಲ್ಲಿ ಕನ್ನಡ ಪ್ರಾಧ್ಯಾಪಕರಾಗಿ, ಮುಖ್ಯಸ್ಥರಾಗಿ ಇದ್ದಷ್ಟೂ ಕಾಲ( ೧೯೭೦-೧೯೯೭)ಹಾಗೂ ಆ ನಂತರವೂ ಸಾವಿರಾರು ವಿದ್ಯಾರ್ಥಿಗಳು, ಪದವಿ ಪೂರ್ವ ಹಂತದಿಂದ ಸ್ನಾತಕೋತ್ತರ ಹಂತದವರೆಗೆ ಕನ್ನಡವನ್ನು ಉತ್ಸಾಹದಿಂದ ಬಳಸುವಂತೆ ಮಾಡಿದವರು.
ಹೀಗೆ ವಿದ್ಯಾರ್ಥಿಗಳಲ್ಲಿ ಕನ್ನಡವನ್ನು ನಿಡುಗಾಲ ಗಟ್ಟಿಗೊಳಿಸುವುದರ ಜತೆಗೆ ಕನ್ನಡ ಸಂಶೋಧನಾ ವಿಭಾಗ ಹಾಗೂ ಭಾರತೀಯ ಭಾಷಾ ಅದ್ಯಯನಾಂಗವನ್ನೂ ಸ್ಥಾಪಿಸಿ ಮುನ್ನಡೆಸಿದವರು. ಸುಮಾರು ೧೬ ವಿದ್ಯಾರ್ಥಿಗಳಿಗೆ ಎಂ.ಫಿಲ್, ೧೧ ವಿದ್ಯಾರ್ಥಿಗಳಿಗೆ ಪಿಎಚ್.ಡಿಗೆ ಪ್ರತ್ಯಕ್ಷವಾಗಿ ಹಾಗೂ ಈ ಕಾಲೇಜಿನ ಬಹುತೇಕ ಕನ್ನಡ ಸಂಶೋಧನಾಸಕ್ತರಿಗೆ ಪರೋಕ್ಷವಾಗಿ ಮಾರ್ಗದರ್ಶಕರಾಗಿಯೂ ಗುರುತಿಸಲ್ಪಟ್ಟವರು. ಕಲ್ಲಿಕೋಟೆ ಮತ್ತು ಕಣ್ಣೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡಕ್ಕೆ ಸಂಬಂಧಿಸಿದ ಯಾವ ಕೆಲಸ ಕಾರ್ಯಗಳಿದ್ದರೂ ಅಲ್ಲಿ ಪ್ರೊ.ಶ್ರೀಕೃಷ್ಣ ಭಟ್ ರವರ ಕೊಡುಗೆ ಇದ್ದೇ ಇರುತ್ತದೆ.
ಶಾಸ್ತ್ರೀಯ ಅಧ್ಯಯನದಲ್ಲಿ ವಿಶೇಷ ಆಸಕ್ತಿ, ಅರಿವು ಮತ್ತು ತನಗೆ ಒಪ್ಪಿಸಿದ ಕೆಲಸವನ್ನು ಅತ್ಯಂತ ಬದ್ಧತೆಯಿಂದ ಮಾಡುವುದರಿಂದಲೋ ಏನೋ ಕೇರಳದ ಬಹುತೇಕ ಎಲ್ಲ ಕನ್ನಡ ಪಠ್ಯ ತಯಾರಿ, ಪರೀಕ್ಷಾಂಗ, ಜತೆಗೆ ಕರ್ನಾಟಕದ ಕಾಲೇಜು ಶಿಕ್ಷಣದಲ್ಲಿ ಅಷ್ಟೂ ವರ್ಷಗಳಿಂದ ಇವರ ಹೆಸರು ಬಳಕೆಯಾಗುತ್ತಲೇ ಬಂದಿದೆ. ಇದರೊಂದಿಗೆ ಶಾಸ್ತ್ರಕ್ಕೆ ಸಂಬಂಧಿಸಿದ ಹಲವು ಕೃತಿಗಳು, ಅನೇಕ ಸಂಶೋಧನಾ ಲೇಖನಗಳೂ ಬೆಳಕಿಗೆ ಬಂದಿವೆ. ಕಾಸರಗೋಡು ಭಾಗದಿಂದ ಶಾಸ್ತ್ರೀಯ ಕನ್ನಡದ ಕೊಂಡಿಯಂತ್ತಿರುವ ಶ್ರೀಕೃಷ್ಣ ಭಟ್ಟರು ಪಂಡಿತ ಪರಂಪರೆಯೊಂದಿಗೆ ನಿಕಟ ಸಂಪರ್ಕ ಹೊಂದಿದವರು. ಈ ಹಿನ್ನೆಲೆಯೇ ಕಾಸರಗೋಡು ಸರಕಾರಿ ಕಾಲೇಜು ಅಭಿಜಾತ ಕನ್ನಡ ಕಾವ್ಯ ಮತ್ತು ಭಾಷಾ ಪರಂಪರೆಯ ಗಟ್ಟಿ ನೆಲವಾಗಿ ರೂಪಗೊಳ್ಳಲು ಕಾರಣ. ಕರ್ನಾಟಕದ ಉಳಿದ ಭಾಗಗಳಿಗೆ ಹೋಲಿಸಿದರೆ ಇಂದಿಗೂ ಈ ಕಾಲೇಜು ಕನ್ನಡ ಭಾಷೆ, ಕಾವ್ಯ, ಶಾಸ್ತ್ರ ಸಂಬಂಧಿ ವಿಷಯಗಳಲ್ಲಿ ಮುಂಚೂಣಿಯ ಗೌರವ ಪಡೆಯುತ್ತಿದೆ. ಇದಕ್ಕೆ ಶ್ರೀಕೃಷ್ಣ ಭಟ್ಟರ ಶಾಸ್ತ್ರ ಸಂಬಂಧೀ ಆಸಕ್ತಿಯೂ ಕಾರಣ. ಕನ್ನಡ, ಹಿಂದಿ, ಸಂಸ್ಕೃತ ಭಾಷೆಗಳಲ್ಲಿ ಅಧಿಕೃತ ಪಾಂಡಿತ್ಯ ಹೊಂದಿರುವ ಇವರು ತಮ್ಮ ವಿದ್ಯಾರ್ಥಿಗಳಲ್ಲೂ ಅದನ್ನು ಬೆಳೆಸಲು ಶ್ರಮಿಸಿದವರು.
ಆದ್ದರಿಂದ ಅಪರಿಚಿತವಾಗಬಹುದಾದ ನೆಲವೊಂದರಲ್ಲಿ ಭಾಷೆಯನ್ನು ಶಿಕ್ಷಣದ ಮೂಲಕ ನೆಲೆ ಉಳಿಯುವಂತೆ ಶ್ರಮಿಸಿದ ಪ್ರೊ.ಶ್ರೀಕೃಷ್ಣ ಭಟ್ಟರವರ ಕೆಲಸ ಯಾವ ಹೋರಾಟಕ್ಕೂ ಕಡಿಮೆಯಾದದ್ದಲ್ಲ. ಕಾಸರಗೋಡಿನ ಕನ್ನಡಕ್ಕಾಗಿ ದುಡಿದ ಮತ್ತು ದುಡಿಯುತ್ತಿರುವ ಅಸಂಖ್ಯ ಅಧ್ಯಾಪಕರನ್ನು ಕನ್ನಡದ ಆಸ್ತಿಗಳಾಗಿ ರೂಪಿಸಿದ, ತನ್ನದೇ ವರ್ಚ್ಚಸ್ಸಿನಿಂದ ಈ ಆಸ್ತಿಗಳನ್ನು ಸಮೃದ್ಧಗೊಳ್ಳುವಂತೆ ಮಾಡಿದ ಪ್ರೊ.ಡಾ.ಶ್ರೀಕೃಷ್ಣ ಭಟ್ಟರ ಪ್ರಾಂಜಲ ನಡೆ ಎಂದೆಂದಿಗೂ ಅಭಿನಂದನಾರ್ಹವಾದುದು. ಹೀಗಿರುವಾಗ ಇವರಿಂದ ಉಪಕೃತರಾದವರು ಹುಟ್ಟೂರಲ್ಲಿ ಇವರನ್ನು ಅಭಿನಂದಿಸಿ ಗೌರವಿಸಲಿದ್ದಾರೆ. ಇವರ ನೂರರ ಆ ಕಾಲದಲ್ಲೂ ಹೀಗೇ ಗೌರವಿಸುವ ಸೌಭ್ಯಾಗ್ಯ ಎಲ್ಲರಿಗೂ ಬರಲಿ ಎಂದು ಆಶಿಸೋಣ.

(ಡಾ.ಸುಂದರ ಕೇನಾಜೆ ಅಧ್ಯಾಪಕರು, ಜಾನಪದ ಸಂಶೋಧಕರು, ಕಲೆ, ಸಾಹಿತ್ಯ ಸಂಸ್ಕೃತಿಯ ವಿಶ್ಲೇಷಕರು)