ಸುಳ್ಯ: ತಾಯಿಯಿಂದ ದೂರವಾಗಿ ಒಂಟಿಯಾದ ಮರಿ ಆನೆಯ ಒಡಲಾಳದ ಕೂಗು ನೋಡುಗರ ಮನ ಕಲಕುವಂತಿತ್ತು. ಮುದ್ದಾದ ಕಂದಮ್ಮ ತಾಯಿ ಮಡಿಲು ಸೇರಲು ನಡೆಸುತ್ತಿದ್ದ ಪ್ರಯತ್ನ ನೋಡುಗರ ಕಣ್ಣಂಚಿನಲ್ಲಿ ನೀರು ಹನಿ ತರುವಂತಿತ್ತು. ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ತುದಿಯಡ್ಕದಲ್ಲಿ ಎರಡು ಮರಿ ಆನೆಗಳು ಸೇರಿದಂತೆ ನಾಲ್ಕು ಆನೆಗಳ ಹಿಂಡು ನಾಡಿಗೆ ಇಳಿದ ಸಂದರ್ಭ ಕೆರೆಯಲ್ಲಿ ಸಿಲುಕಿಕೊಂಡಿತು. ಅರಣ್ಯ ಇಲಾಖೆ ಮತ್ತು ಸಾರ್ವಜನಿಕರು ಕಾರ್ಯಾಚರಣೆ ನಡೆಸಿ
ಆನೆಗಳನ್ನು ಸುರಕ್ಷಿತವಾಗಿ ಕೆರೆಯಿಂದ ಮೇಲೆ ತಂದು ಕಾಡಿಗೆ ಬಿಡಲಾಯಿತು. ಆದರೆ ಕೆಲವೇ ತಿಂಗಳು ಪ್ರಾಯದ ಮರಿ ಆನೆಯು ಕೆರೆಯಿಂದ ಮೇಲೆ ಬರಲು ಕಷ್ಟ ಆದರೂ ಮರಿಯನ್ನು ಮೇಲಕ್ಕೆ ತಂದು ಕಾಡಂಚಿಗೆ ಬಿಡಲಾಯಿತು. ಆದರೆ ಮರಿ ಆನೆ ಹಿಂಡಿನ ಜೊತೆ ಸೇರದೆ ಬೇರ್ಪಟ್ಟಿತ್ತು. ಇದರಿಂದ ದಿಕ್ಕು ತೋಚದಾದ ಮರಿ ಆನೆ ತಾಯಿಯನ್ನು ಅರಸುತ್ತಾ ಕೂಗಾಡುತ್ತಾ ತಿರುಗಾಡುತ್ತಿತ್ತು. ವಿಷಯ ತಿಳಿದು ಸುಳ್ಯ ವಲಯ ಅರಣ್ಯಾಧಿಕಾರಿ ಎನ್.ಮಂಜುನಾಥ್ ನೇತೃತ್ವದಲ್ಲಿ ಅರಣ್ಯ ಇಲಾಖೆಯ ತಂಡ
ಆಗಮಿಸಿ ಮರಿಯನ್ನು ಆನೆ ಹಿಂಡಿಗೆ ಸೇರಿಸುವ ಪ್ರಯತ್ನ ನಡೆಸಿದರೂ ಫಲಪ್ರದವಾಗಲಿಲ್ಲ. ಶುಕ್ರವಾರ ದಿನ ಪೂರ್ತಿ ಆನೆ ಹಿಂಡಿನ ಜೊತೆ ಸೇರಿಸುವ ಪ್ರಯತ್ನ ಮುಂದುವರಿದಿತ್ತು.
ಆನೆ ಮರಿಗೆ ನೀರು, ಆಹಾರ, ಪೌಷ್ಠಿಕಾಂಶ ನೀಡಿ ಆರೈಕೆ ಮಾಡಲಾಗುತಿದೆ. ಆನೆ ಮರಿಯನ್ನು ಗುಂಪಿಗೆ ಸೇರಿಸುವ ಪ್ರಯತ್ನ ಇಂದು ಕೂಡ ಮುಂದುವರಿಸಲಾಗುವುದು. ಅದಕ್ಕಾಗಿ ಪರಿಣಿತರಾದ ವಿಶೇಷ ತಂಡವೂ ಆಗಮಿಸಲಿದೆ ಎಂದು ವಲಯ ಅರಣ್ಯಾಧಿಕಾರಿ ಎನ್.
ಮಂಜುನಾಥ್ ಅವರು ತಿಳಿಸಿದ್ದಾರೆ.