ಗುತ್ತಿಗಾರು:ಕಳೆದ ಒಂದು ವಾರದಿಂದ ತ್ರಿಫೇಸ್ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯವಾಗಿರುವುದರಿಂದ ಗುತ್ತಿಗಾರು 33 ಕೆ ವಿ ವಿದ್ಯುತ್ ಉಪ ಕೇಂದ್ರದ ವ್ಯಾಪ್ತಿಯ ಕೃಷಿಕರು ತೀವೃ ಬವಣೆಯನ್ನು ಅನುಭವಿಸಿದ್ದಾರೆ.ಇದನ್ನು ಕೂಡಲೇ ಸರಿಪಡಿಸಬೇಕು ಎಂದು ದ.ಕ.ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ವೆಂಕಟ್ ದಂಬೆಕೋಡಿ ಆಗ್ರಹಿಸಿದ್ದಾರೆ.ಮಾಡಾವಿನಿಂದ ಸರಬರಾಜಾಗುತ್ತಿರುವ ವಿದ್ಯುತ್ ಲೈನ್ನಲ್ಲಿ ಬೆಳ್ಳಾರೆ ಪರಿಸರದಲ್ಲಿ
ಯುಜಿ ಕೇಬಲ್ ತೊಂದರೆಯಿಂದಾಗಿ ಈ ರೀತಿ ವ್ಯತ್ಯಯವಾಗುತ್ತಿದೆ ಎಂದು ಹೇಳಲಾಗಿದ್ದು ಕಳೆದ 5-6 ದಿನಗಳಿಂದ ವಿದ್ಯುತ್ ಸರಬರಾಜಿನಲ್ಲಿ ಅಡಚಣೆ ಉಂಟಾಗಿದ್ದರೂ ಅದನ್ನು ಸರಿಪಡಿಸದೆ ತ್ರಿಫೇಸ್ ವಿದ್ಯುತ್ ಕಡಿತ ಆಗಿ ತೋಟಕ್ಕೆ ನೀರು ಹಾಕಲು ಸಾಧ್ಯವಾಗದೆ ಕೃಷಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಅಡಿಕೆ ತೋಟಕ್ಕೆ ಅತೀ ಅಗತ್ಯವಾಗಿ ನೀರುಣಿಸಬೇಕಾದ ಈ ಸಂದರ್ಭದಲ್ಲಿ ಈ ರೀತಿ ಆದರೆ ರೈತರ ಪಾಡೇನು ಎಂದು ಎಂದು ಪ್ರಶ್ನಿಸಿದ ಅವರು ಈಗಾಗಲೇ ಎಲೆಚುಕ್ಕಿ ರೋಗ ಹಳದಿ ರೋಗ ಭಾದೆಯಿಂದ ಅಡಿಕೆ ತೋಟ ನಾಶವಾಗುತ್ತಾ ಬಂದಿದೆ.ಉಳಿದ ಅಲ್ಪಸಲ್ಪ ಅಡಿಕೆ ತೋಟವನ್ನು ಸಕಾಲದಲ್ಲಿ ನೀರು ಹಾಕಿ ಉಳಿಸಿಕೊಳ್ಳುವ ಎಂದು ಪೇಚಾಡುತ್ತಿರುವ ಕೃಷಿಕರಿಗೆ ಮೆಸ್ಕಾಂ ಈ ಮೂಲಕ ಶಾಕ್ ನೀಡಿದೆ ಎಂದರು.
ಯುಜಿ ಕೇಬಲ್ ಎಲ್ಲೇ ತೊಂದರೆ ಆದರೂ ಅದನ್ನು ಕಂಡುಹಿಡಿಯುವ ಉಪಕರಣ ನಮ್ಮಲ್ಲಿದೆ ಎಂದು ಹೇಳುತ್ತಿದ್ದ ಅಧಿಕಾರಿಗಳು ಸಮಸ್ಯೆಯನ್ನೇ ಕಂಡು ಹಿಡಿಯಲು ಪೇಚಾಡುತ್ತಿರುವುದು ದುರದೃಷ್ಟಕರ. ಆದ್ದರಿಂದ ಹಾನಿಗೀಡಾದ ಕೇಬಲ್ ಅಥವಾ ತಂತಿಗಳನ್ನು ಪತ್ತೆ ಹಚ್ಚಿ ಸರಿಪಡಿಸಿ ಕೂಡಲೇ ವಿದ್ಯುತ್ ಸರಬರಾಜು ಸರಿಪಡಿಸಬೇಕು ಎಂದು ವೆಂಕಟ್ ದಂಬೆಕೋಡಿ ಒತ್ತಾಯಿಸಿದ್ದಾರೆ.ಅಲ್ಲದೆ ಗುತ್ತಿಗಾರು 33 ಕೆವಿ ಉಪಕೇಂದ್ರದಲ್ಲಿ ಕೆಲಸವಾಗದೆ ನೆನೆಗುದ್ದಿಗೆ ಬಿದ್ದಿರುವ 4-5 ಫೀಡರ್ಗಳ ಕೆಲಸವನ್ನು ಅತಿ ತುರ್ತಾಗಿ ಕೈಗೆತ್ತಿಕೊಂಡು ಕೂಡಲೇ ವಿದ್ಯುತ್ ಸಂಪರ್ಕ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರೂ ಆಗಿರುವ ಅವರು ಇಲಾಖೆ ಅಧಿಕಾರಿಗಳನ್ನು ಎಚ್ಚರಿಸಿದ್ದಾರೆ. ತಪ್ಪಿದಲ್ಲಿ ನಾಗರಿಕ ಹಿತ ರಕ್ಷಣಾ ವೇದಿಕೆ ವತಿಯಿಂದ ಇಲಾಖೆಯ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.