ಸುಳ್ಯ: ಸುಳ್ಯಕ್ಕೆ ಮಂಜೂರಾಗಿರುವ 110 ಕೆವಿ ಸಬ್ ಸ್ಟೇಷನ್ನ ಅನುಷ್ಠಾನಕ್ಕಾಗಿ ಟವರ್ ಹಾಗೂ ಲೈನ್ ನಿರ್ಮಾಣಕ್ಕೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಶಾಸಕಿ ಭಾಗೀರಥಿ ಮುರುಳ್ಯ ನೇತೃತ್ವದಲ್ಲಿ ವಿಶೇಷ ಸಭೆ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಮಾ.26ರಂದು ನಡೆಯಿತು. ಕೆಪಿಟಿಸಿಎಲ್, ಮೆಸ್ಕಾಂ, ಅರಣ್ಯ, ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು, ಲೈನ್ ಹಾದು ಬರುವ ಪ್ರದೇಶಗಳ
ರೈತರು, ಪ್ರಮುಖರು ಸಭೆಯಲ್ಲಿ ಭಾಗವಹಿಸಿದ್ದರು. ಲೈನ್ ಹಾದು ಬರುವ ಪ್ರದೇಶದ ಜನರು ಸಭೆಯಲ್ಲಿ ಭಾಗವಹಿಸಿ ತಮ್ಮ ಅಹವಾಲು ಮಂಡಿಸಿದರು’ ರೈತ ಸಂಘಟನೆಗಳ ಮುಖಂಡರು ಹಾಗೂ ಆ ಭಾಗದ ಜನರು ಮಾತನಾಡಿ ಲೈನ್ ನಿರ್ಮಾಣಕ್ಕೆ ಮೊದಲು ಅಧಿಕಾರಿಗಳು ಹಾಗೂ ರೈತರು ಸೇರಿ ಜಂಟಿ ಸರ್ವೇ ನಡೆಸಿ ಸೂಕ್ತವಾದ ಮಾರ್ಗದಲ್ಲಿ ಲೈನ್ ನಿರ್ಮಾಣ ಮಾಡಬೇಕು, ಕೃಷಿಕರಿಗೆ, ಸಾರ್ವಜನಿಕರಿಗೆ ಹೆಚ್ಚು ತೊಂದರೆ

ಆಗದಂತೆ ಹಾಲಿ ಇರುವ 33 ಕೆವಿ ಲೈನ್ ಮಾರ್ಗದಲ್ಲಿಯೇ 110 ಕೆವಿ ಲೈನ್ ನಿರ್ಮಾಣ ಮಾಡಬೇಕು, ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಇತ್ಯಾದಿ ಬೇಡಿಕೆಗಳನ್ನು ಮುಂದಿರಿಸಿದರು. ಯುಜಿ ಕೇಬಲ್ ಅಳವಡಿಸಿ 110 ಕೆವಿ ಲೈನ್ ನಿರ್ಮಿಸಿ ಇತ್ಯಾದಿ ಸಲಹೆ ಸೂಚನೆಗಳನ್ನು ನೀಡಿದರು.
ಕೆಪಿಟಿಸಿಎಲ್ ಇಂಜಿನಿಯರ್ಗಳು ಮಾಹಿತಿ ನೀಡಿ 33 ಕೆವಿ ಲೈನ್ನ ಮಾರ್ಗದಲ್ಲಿ 110 ಕೆವಿ ಲೈನ್ ನಿರ್ಮಾಣ ಮಾಡಲು ಸಾಧ್ಯವಿಲ್ಲ, ಮಾತ್ರವಲ್ಲದೆ ಡಿಪಿಆರ್ ಆಗಿ ಟೆಂಡರ್ ಆಗಿ ಕಾಮಗಾರಿ ಆರಂಭ ಆಗಿರುವ ಕಾರಣ 110 ಕೆವಿ ಲೈನ್ ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು. ಟವರ್, ಲೈನ್ ನಿರ್ಮಾಣ ಮಾಡುವ ಸ್ಥಳಕ್ಕೆ ಭೂಮಾಲಿಕರಿಗೆ, ಕೃಷಿಗೆ ಸೂಕ್ತವಾದ ಪರಿಹಾರ ನೀಡಲಾಗುವುದು ಎಂದು ವಿವರಿಸಿದರು. ಹಲವು ಮಂದಿ ಕೃಷಿಕರು ತಮ್ಮ ಸಭೆಯಲ್ಲಿ ಮಾತನಾಡಿ ಅಭಿಪ್ರಾಯ ವ್ಯಕ್ತಪಡಿಸಿದರು. ಜನರ ಹಾಗೂ

ಅಧಿಕಾರಿಗಳಿಂದ ಮಾಹಿತಿ ಪಡೆದ ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ ಸುಳ್ಯಕ್ಕೆ 110 ಕೆವಿ ಸಬ್ ಸ್ಟೇಷನ್ ಮತ್ತು ಲೈನ್ ನಿರ್ಮಾಣ ಅನಿವಾರ್ಯವಾಗಿದೆ. ಇದಕ್ಕೆ ಉಂಟಾಗಿರುವ ತಡೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಎಲ್ಲರ ಅಭಿಪ್ರಾಯ ಸಂಗ್ರಹ ಮಾಡುವುದಕ್ಕಾಗಿ ಸಭೆಯನ್ನು ಕರೆಯಲಾಗಿದೆ. ಸುಳ್ಯ ಹಾಗೂ ಪುತ್ತೂರು ತಾಲೂಕು ವ್ಯಾಪ್ತಿಯಲ್ಲಿ ಲೈನ್ ಹಾದು ಬರುವ ಕಾರಣ ಲೈನ್ ಹಾದು ಬರುವ ಜನರ ಅಭಿಪ್ರಾಯ ಪಡೆದು ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಮುಂದಿನ ಹಂತದಲ್ಲಿ ವಿಸ್ತೃತ ಸಭೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಕೆಪಿಟಿಸಿಎಲ್ ಅಧೀಕಕ್ಷಕ ಇಂಜಿನಿಯರ್ ಜಿ.ಎನ್.ಚೈತನ್ಯ, ಕಾರ್ಯನಿರ್ವಾಹಕ ಇಂಜಿನಿಯರ್ ಕೆ, ಮೆಸ್ಕಾಂ ಪುತ್ತೂರು ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ರಾಮಚಂದ್ರ ಮಾಹಿತಿ ನೀಡಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ,ಪ್ರಮುಖರಾದ ವೆಂಕಟರಾಯ ಹಾಲುಮಜಲು, ಈಶ್ವರ ಭಟ್ ಕಲಾವನ, ಅಶ್ವಿನ್ ಬೈತ್ತಡ್ಕ, ಅರುಣ್ ಕುರುಂಜಿ, ಕಿರಣ್ ಕುರುಂಜಿ ಮತ್ತಿತರರು ಮಾತನಾಡಿದರು.

ಸುಳ್ಯ ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ತಹಶೀಲ್ದಾರ್ ಎಂ.ಮಂಜುಳಾ,ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಪ್ರಮುಖರಾದ ಹರೀಶ್ ಕಂಜಿಪಿಲಿ, ಸುಬೋಧ್ ಶೆಟ್ಟಿ ಮೇನಾಲ, ಚನಿಯ ಕಲ್ತಡ್ಕ, ಸುಳ್ಯ ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಹರೀಶ್ ನಾಯ್ಕ್,ಕೆಪಿಟಿಸಿಎಲ್ ಸಹಾಯಕ ಇಂಜಿನಿಯರ್ಗಳಾದ ವಿವೇಕಾನಂದ ಶೆಣೈ, ಸಚಿನ್ ಕುಮಾರ್, ವಲಯ ಅರಣ್ಯಾಧಿಕಾರಿಗಳಾದ ಎನ್.ಮಂಜುನಾಥ್, ಕಿರಣ್ ಮತ್ತಿತರರು ಉಪಸ್ಥಿತರಿದ್ದರು.