ಬುಲವಾಯ:ಏಕದಿನ ವಿಶ್ವಕಪ್ನ ಅರ್ಹತಾ ಸುತ್ತಿನ ಪಂದ್ಯದಲ್ಲಿ ಸ್ಕಾಟ್ಲ್ಯಾಂಡ್ ವಿರುದ್ಧ ಸೋಲನುಭವಿಸುವ ಮೂಲಕ ವೆಸ್ಟ್ ಇಂಡೀಸ್ ತಂಡ ಏಕದಿನ ವಿಶ್ವಕಪ್ನಿಂದ ಹೊರಬಿದ್ದಿದೆ. ಇದರಿಂದ ಇತಿಹಾಸದಲ್ಲಿ ಮೊದಲ ಬಾರಿಗೆ ಎರಡು ಬಾರಿಯ ಚಾಂಪಿಯನ್ ವೆಸ್ಟ್ ಇಂಡೀಸ್ ಇಲ್ಲದ ವಿಶ್ವಕಪ್ ಟೂರ್ನಿ ನಡೆಯಲಿದೆ.
ಸ್ಕಾಟ್ಲೆಂಡ್ ವಿರದ್ದ ಪಂದ್ಯ ವೆಸ್ಟ್ ಇಂಡೀಸ್ ಪಾಲಿಗೆ ಮಾಡು ಇಲ್ಲವೇ ಮಡಿ ಪಂದ್ಯವಾಗಿತ್ತು. ಈ ಪಂದ್ಯದಲ್ಲಿ ಗೆಲುವು ವಿಂಡೀಸ್ ತಂಡದ
ಏಕದಿನ ವಿಶ್ವಕಪ್ ಕನಸನ್ನು ಜೀವಂತವಾಗಿರಿಸುತ್ತಿತ್ತು. ಆದರೆ ಎರಡು ಬಾರಿ ಚಾಂಪಿಯನ್ ವೆಸ್ಟ್ ಇಂಡೀಸ್ ಇದೀಗ ಏಕದಿನ ಟೂರ್ನಿಯಿಂದ ಹೊರಗುಳಿಯಲಿದೆ. 1975 ಮತ್ತು 1979 ರಲ್ಲಿ ವಿಶ್ವ ಚಾಂಪಿಯನ್ ಆಗಿದ್ದ ವಿಂಡೀಸ್ ಇದೇ ಮೊದಲ ಬಾರಿಗೆ ಏಕದಿನ ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿರುವುದು ಕ್ರೀಡಾ ಅಭಿಮಾನಿಗಳಿಗೆ ನಿರಾಸೆ ಉಂಟು ಮಾಡಿದೆ.
ಈ ಬಾರಿಯ ಏಕದಿನ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ವೆಸ್ಟ್ ಇಂಡೀಸ್ ತಂಡವು ಯುಎಸ್ಎ ಮತ್ತು ನೇಪಾಳ ವಿರುದ್ಧ ಜಯಗಳಿಸಿತ್ತು. ಆದರೆ ಜಿಂಬಾಬ್ವೆ ಹಾಗೂ ನೆದರ್ಲ್ಯಾಂಡ್ಸ್ ವಿರುದ್ಧ ಸೋಲನುಭವಿಸಿತ್ತು. ಇದಾಗ್ಯೂ 2 ಗೆಲುವಿನೊಂದಿಗೆ ಕೆರಿಬಿಯನ್ ಪಡೆ ಅರ್ಹತಾ ಸುತ್ತಿನ ಸೂಪರ್ ಸಿಕ್ಸ್ ಹಂತಕ್ಕೇರಿತು.ಆದರೆ ಸೂಪರ್ ಸಿಕ್ಸ್ನ ಮೊದಲ ಪಂದ್ಯದಲ್ಲೇ ಸ್ಕಾಟ್ಲ್ಯಾಂಡ್ ವಿರುದ್ಧ ಪರಾಜಯಗೊಂಡಿದೆ. ಇದರೊಂದಿಗೆ ಭಾರತದಲ್ಲಿ ಏಕದಿನ ವಿಶ್ವಕಪ್ ಆಡುವಿ ವೆಸ್ಟ್ ಇಂಡೀಸ್ ತಂಡದ ಕನಸು ಕಮರಿದೆ. ಅರ್ಹತಾ ಸುತ್ತಿನಲ್ಲಿ ತಲಾ 6 ಅಂಕ ಪಡೆದಿರುವ ಶ್ರೀಲಂಕಾ ಹಾಗೂ ಜಿಂಬಾಬ್ವೆ ತಂಡ ಬಹುತೇಕ ಅರ್ಹತೆ ಪಡೆಯಲಿದೆ. ಆದರೆ ವೆಸ್ಟ್ ಇಂಡೀಸ್, ನೆದರ್ಲೆಂಡ್, ಒಮನ್ ತಂಡಗಳು ಟೂರ್ನಿಯಿಂದ ಹೊರಬೀಳಲಿದೆ.