ಸುಬ್ರಹ್ಮಣ್ಯ:ಮನಸ್ಸನ್ನು ಅರಳಿಸುವ ಭಾರತೀಯ ಕಲಾ ಪ್ರಕಾರಗಳು ಎಂದೆಂದಿಗೂ ವಿದ್ಯಾರ್ಥಿಗಳಿಗೆ ಸಂತಸ ನೀಡುವುದರೊಂದಿಗೆ ಪಠ್ಯ ವಿಚಾರದಲ್ಲಿ ಹುಮ್ಮಸ್ಸಿನಿಂದ ತೊಡಗಿಕೊಳ್ಳಲು ಸ್ಪೂರ್ತಿ ನೀಡುತ್ತದೆ. ಪ್ರಫುಲ್ಲಿತ ಮನಸುಗಳ ನಿರ್ಮಾಣಕ್ಕೆ ಕಲಾಸಂಪತ್ತು ಅಭೂತಪೂರ್ವ ಕೊಡುಗೆ ನೀಡಿದೆ. ವಿದ್ಯಾರ್ಥಿಗಳು ತಮ್ಮ ಕಲಾಸಂಪತ್ತಿನ ಶ್ರೇಷ್ಠತೆಗೆ ತಮ್ಮದೆ ಆದ ಕೊಡುಗೆ ನೀಡಬೇಕು ಎನ್ನುವ ಉದ್ದೇಶದಿಂದ ಪ್ರತಿಭಾ
ಪ್ರದರ್ಶನವನ್ನು ಆಯೋಜಿಸಲಾಗಿದೆ ಎಂದು ಎಸ್ಎಸ್ಪಿಯು ಕಾಲೇಜಿನ ಪ್ರಾಚಾರ್ಯ ಸೋಮಶೇಖರ ನಾಯಕ್ ಹೇಳಿದರು. ಸುಬ್ರಹ್ಮಣ್ಯದ ಎಸ್.ಎಸ್.ಪಿ.ಯು.ಕಾಲೇಜಿನ ಬೆಳ್ಳಿಹಬ್ಬ ಸಭಾಂಗಣದಲ್ಲಿ ಶನಿವಾರ ಕಾಲೇಜಿನ ಸಾಂಸ್ಕೃತಿಕ ಸಂಘವನ್ನು ಉದ್ಘಾಟಿಸಿ ಪ್ರತಿಭಾ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ವಿಶೇಷ ಪ್ರತಿಭೆಗಳನ್ನು ಗುರುತಿಸಿ ಅವುಗಳನ್ನು ಪೋಷಿಸುವ ಉದ್ದೇಶದಿಂದ ಕಲಾ ಪ್ರದರ್ಶನ ಏರ್ಪಡಿಸಲಾಗಿದೆ. ಸಂಸ್ಥೆಯ ವಿದ್ಯಾರ್ಥಿಗಳ ಪ್ರತಿಭೆಯು ಸರ್ವರಿಗೂ ತಿಳಿಸುವ ಉದ್ದೇಶದಿಂದ ಸಾಂಸ್ಕೃತಿಕ ತಂಡ ರಚಿಸಲಾಗುತ್ತದೆ. ತಂಡವನ್ನು ಸಂಘದ ಸಂಚಾಲಕರ ನೇತೃತ್ವದಲ್ಲಿ ಸಾರ್ವಜನಿಕ ವೇದಿಕೆಯಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಲು ಸಜ್ಜುಗೊಳಿಸಲಾಗುವುದು. ಕುಕ್ಕೆ ಸೇರಿದಂತೆ ವಿವಿಧ
ಊರುಗಳಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಕಾಲೇಜಿನ ತಂಡವನ್ನು ಕಳುಹಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಸೋಮಶೇಖರ ನಾಯಕ್ ಹೇಳಿದರು.
ಪಂಚ ವಾದ್ಯಗಳ ಕಲರವ:
ಕಾಲೇಜಿನ ಪ್ರಾಚಾರ್ಯ ಸೋಮಶೇಖರ ನಾಯಕ್ ದೀಪ ಪ್ರಜ್ವಲನದ ಮೂಲಕ ಸಾಂಸ್ಕೃತಿಕ ಸಂಘವನ್ನು ಉದ್ಘಾಟಿಸಿದರು. ಈ ವೇಳೆ ಕೇರಳ ಚೆಂಡೆಯ ಪ್ರಾವಿಣ್ಯತೆ ಹೊಂದಿದ ವಿದ್ಯಾರ್ಥಿಗಳು ಸಿಂಗಾರಿ ಮೇಳ ನೆರವೇರಿಸಿದರು. ಬಳಿಕ ಪ್ರಾಚಾರ್ಯರು ಚೆಂಡೆ ವಾದನದ ಮೂಲಕ ಪ್ರತಿಭಾ ಪ್ರದರ್ಶನಕ್ಕೆ ಚಾಲನೆ ನೀಡಿದರು.ಬಳಿಕ ವೇದಿಕೆಯಲ್ಲಿದ್ದ ಗಣ್ಯರು ಚೆಂಡೆ, ಡೋಲು, ತಾಸೆ, ತಾಸೆಡೋಲು, ಯಕ್ಷಗಾನ ಚೆಂಡೆಯನ್ನೊಳಗೊAಡ ಪಂಚ ವಾದ್ಯವನ್ನು ನುಡಿಸಿದರು.
ತೀರ್ಪುಗಾರರಾದ ಗ್ರಾ.ಪಂ.ಸದಸ್ಯೆ ಭಾರತಿ ದಿನೇಶ್, ಇನ್ನರ್ವ್ಹೀಲ್ ಅಧ್ಯಕ್ಷೆ ಸರೋಜಾ ಮಾಯಿಲಪ್ಪ, ಉಪನ್ಯಾಸಕಿ ಮತ್ತು ಭಾಗವತೆ ಭವ್ಯಶ್ರೀ ಹರೀಶ್ ಕುಲ್ಕುಂದ ಮುಖ್ಯಅತಿಥಿಗಳಾಗಿದ್ದರು. ಸಾಂಸ್ಕೃತಿಕ ತಂಡದ ಸಂಚಾಲಕಿ ರೇಖಾರಾಣಿ ಸೋಮಶೇಖರ್, ವಿದ್ಯಾರ್ಥಿ ಸರಕಾರದ ಸಂಚಾಲಕ ಜಯಪ್ರಕಾಶ್.ಆರ್, ಸಾಂಸ್ಕೃತಿಕ ಸಂಘದ ಕಾರ್ಯದರ್ಶಿ ವಿದ್ಯಾಲಕ್ಷ್ಮಿ ವೇದಿಕೆಯಲ್ಲಿದ್ದರು.
ಸಾಂಸ್ಕೃತಿಕ ಸಂಘದ ಸಹಸಂಚಾಲಕ ರತ್ನಾಕರ ಸುಬ್ರಹ್ಮಣ್ಯ ಸ್ವಾಗತಿಸಿದರು. ಉಪನ್ಯಾಸಕ ಶ್ರೀಧರ್ ಪುತ್ರನ್ ವಂದಿಸಿದರು.ಉಪನ್ಯಾಸಕಿ ಶೃತಿ ಯಾಲದಾಳು ಕಾರ್ಯಕ್ರಮ ನಿರೂಪಿಸಿದರು.ಸಾಂಸ್ಕೃತಿಕ ಸಂಘದ ಮಹೇಶ್.ಎಚ್ ಸಹಕರಿಸಿದರು.ವಿದ್ಯಾರ್ಥಿಗಳು, ಉಪನ್ಯಾಸಕರು ಉಪಸ್ಥಿತರಿದ್ದರು. ಕಾಲೇಜು ವಿದ್ಯಾರ್ಥಿಗಳ ಪ್ರತಿ ತರಗತಿಯ ನಡುವೆ ನಡೆದ ಪ್ರತಿಭಾ ಸ್ಪರ್ಧೆಯಲ್ಲಿ ಕಾಲೇಜಿನ ಸುಮಾರು ೧೦ ತಂಡಗಳು ಪ್ರತಿಭೆಯನ್ನು ಪ್ರದರ್ಶಿಸಿದರು.