ಸುಳ್ಯ:80 ವರ್ಷ ಮತ್ತು ಅದಕ್ಕಿಂತ ಹೆಚ್ಚು ವಯಸ್ಸಿನ ಹಿರಿಯ ನಾಗರಿಕರು ಹಾಗೂ ಅಂಗವಿಕಲರಿಗೆ ಮನೆಯಿಂದಲೇ ಮತದಾನ ಮಾಡುವ ಅವಕಾಶವನ್ನು ನೀಡಲಾಗಿದ್ದು ಏ.29 ರಂದು ಮತದಾನ ಆರಂಭಗೊಂಡಿದೆ. ರಾಜ್ಯದಲ್ಲಿ ಸಾವಿರಾರು ಮನೆಗಳು ಕೆಲಕಾಲ ಮತಗಟ್ಟೆಗಳಾಗಿ ಪರಿವರ್ತನೆಯಾಗಿದ್ದು ಮೊದಲ ದಿನ 33,036 ಮಂದಿ ಮನೆಯಿಂದಲೇ ಮತ ಚಲಾಯಿಸಿದರು. ಸುಳ್ಯ ತಾಲೂಕಿನಲ್ಲಿ ಮೊದಲ
ದಿನ 184 ಮಂದಿ ಹಕ್ಕು ಚಲಾಯಿಸಿದರು. 137 ಹಿರಿಯ ನಾಗರಿಕರು ಹಾಗೂ 47 ಅಂಗವಿಕಲರು ಮತ ಚಲಾಯಿಸಿದರು. ಸುಳ್ಯ ತಾಲೂಕಿನಲ್ಲಿ 1385 ಹಿರಿಯ ನಾಗರಿಕರು ಹಾಗೂ 396 ಅಂಗವಿಕಲರು ಸೇರಿ 1781 ಮತದಾರರಿಗೆ ಮನೆಯಿಂದಲೇ ಮತ ಚಲಾಯಿಸುವ ಅವಕಾಶ ಇದೆ. ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಹಿರಿಯ ನಾಗರಿಕರು ಮತ್ತು ಅಂಗವಿಕಲರು ಮತ ಚಲಾಯಿಸಲು ಮತಗಟ್ಟೆಯವರೆಗೂ ಬರುವುದನ್ನು ತಪ್ಪಿಸುವುದಕ್ಕಾಗಿ ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಮನೆಯಿಂದಲೇ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಶನಿವಾರ ಆರಂಭವಾದ ಈ ಪ್ರಕ್ರಿಯೆ ಮೇ 6ರವರೆಗೂ ನಡೆಯಲಿದೆ. ಬೆಳಿಗ್ಗೆ 9ರಿಂದ ಸಂಜೆ 5ರ ಅವಧಿಯಲ್ಲಿ ಮತ ಚಲಾಯಿಸಲಿದ್ದಾರೆ.
ಮನೆಯಿಂದ ಮತದಾನಕ್ಕೆ ಅವಕಾಶ ಕೋರಿದ್ದ ಅರ್ಹ ಮತದಾರರ ಮನೆಗಳಿಗೆ ಮತಗಟ್ಟೆ ಅಧಿಕಾರಿ, ಸಹಾಯಕ ಸಿಬ್ಬಂದಿ, ಪೊಲೀಸರು ಸೇರಿದಂತೆ ಭದ್ರತಾ ಸಿಬ್ಬಂದಿಯೊಂದಿಗೆ ತೆರಳಿದರು. ಮತಪತ್ರ, ಮೊಹರು ಮಾಡಿರುವ ಮತಪೆಟ್ಟಿಗೆ, ಮತ ಚಲಾಯಿಸುವಾಗ ಗೋಪ್ಯತೆ ಕಾಯ್ದುಕೊಳ್ಳಲು ರಟ್ಟಿನ ತಡೆಗೋಡೆ ಎಲ್ಲವನ್ನೂ ತಂದಿದ್ದರು. ಕೆಲಕಾಲ ಮನೆಯ ಕೊಠಡಿಗಳನ್ನೇ ಮತಗಟ್ಟೆಗಳನ್ನಾಗಿ ಪರಿವರ್ತಿಸಿ ಮತ ಚಲಾವಣೆಗೆ ಅವಕಾಶ ಕಲ್ಪಿಸಲಾಯಿತು.
ರಾಜ್ಯದಲ್ಲಿ 80 ವರ್ಷ ಮತ್ತು ಅದಕ್ಕಿಂತ ಹೆಚ್ಚು ವಯಸ್ಸಾದ 80,250 ಮಂದಿ ಹಾಗೂ 19,279 ಅಂಗವಿಕಲರು ಮನೆಯಿಂದ ಮತದಾನಕ್ಕೆ ಹೆಸರು ನೋಂದಣಿ ಮಾಡಿಸಿಕೊಂಡಿದ್ದಾರೆ.