ಬೆಳ್ಳಾರೆ:ಗ್ರಾಮೀಣ ಭಾಗದ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದಿರುವ ಜನರ ಉನ್ನತ ಶಿಕ್ಷಣದ ಅಪೇಕ್ಷೆಗಳನ್ನು ಪೂರೈಸುವ ದೂರದೃಷ್ಟಿಯನ್ನು ಇಟ್ಟುಕೊಂಡು ಪ್ರಾರಂಭವಾದ ಡಾ.ಕೆ ಶಿವರಾಮ ಕಾರಂತ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಬೆಳ್ಳಾರೆ- ಪೆರುವಾಜೆ ಸುತ್ತಲಿನ ಪರಿಸರದ ಉನ್ನತ ಶಿಕ್ಷಣ ಆಕಾಂಕ್ಷಿಗಳಿಗೆ ಭರವಸೆಯ ಕೇಂದ್ರವಾಗಿದೆ. ಬೆಳ್ಳಾರೆಯ ಹಿರಿಯರು ತಮ್ಮ ದೂರ ದೃಷ್ಟಿಯ ಆಲೋಚನೆಯ ಮೂಲಕ ಈ

ಪೆರುವಾಜೆಯ ಡಾ.ಕೆ ಶಿವರಾಮ ಕಾರಂತ ಸರಕಾರಿ ಕಾಲೇಜು
ಸಂಸ್ಥೆಯನ್ನು ಕಟ್ಟಿ ಬೆಳೆಸಿರುತ್ತಾರೆ.1991ರಲ್ಲಿ ಕರ್ನಾಟಕ ಸರಕಾರವು ಗ್ರಾಮೀಣ ಭಾಗದ ವಿದ್ಯಾರ್ಥಿಗಳ ವಿದ್ಯಾರ್ಜನೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಸಂಸ್ಥೆಯನ್ನು ಸ್ಥಾಪಿಸಿದೆ.
ಪ್ರಸ್ತುತ ಬಿ.ಎ, ಬಿ.ಕಾಂ ಮತ್ತು ಬಿ.ಎಸ್ ಡಬ್ಯ್ಲು ಸ್ನಾತಕ ಪದವಿಯ ಅಧ್ಯಯನದ ಜೊತೆಗೆ ಎಂ.ಕಾಂ ಮತ್ತು ಎಂ.ಎಸ್.ಡಬ್ಲ್ಯು ಸ್ನಾತಕೋತ್ತರ ಪದವಿ ಅಧ್ಯಯನಕ್ಕೆ ಸಂಸ್ಥೆ ಅವಕಾಶ ಕಲ್ಪಿಸಿಕೊಟ್ಟಿದೆ. ಮುಂದಿನ ದಿನಗಳಲ್ಲಿ ಬಿ.ಸಿ.ಎ ಪದವಿ ಅಧ್ಯಯನದ ಅವಕಾಶವನ್ನು ಕಲ್ಪಿಸಿಕೊಡಲಿದೆ. ಪ್ರಾರಂಭದ ವರ್ಷಗಳಲ್ಲಿ ಕಾಲೇಜು ಬೆಳ್ಳಾರೆ ಪೇಟೆಯಲ್ಲಿ ತಾತ್ಕಾಲಿಕ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿತ್ತು. ನಂತರದ ದಿನಗಳಲ್ಲಿ ಪೆರುವಾಜೆಯಲ್ಲಿರುವ ವಿಶಾಲವಾದ ಪ್ರದೇಶದಲ್ಲಿ ಸ್ವಂತ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಾ ಬಂದಿದೆ. ಈ ಸಂಸ್ಥೆಯು ರಾಷ್ಟ್ರೀಯ ಮೌಲ್ಯಾಂಕನ ಸಂಸ್ಥೆ ನ್ಯಾಕ್ನಿಂದ ಬಿ+ ಶ್ರೇಣಿಯನ್ನು ಪಡೆದುಕೊಂಡಿದೆ.

ಸುಸಜ್ಜಿತವಾದ ಕಟ್ಟಡ, ವಿಶಾಲವಾದ ತರಗತಿ ಕೋಣೆಗಳು, ಅನುಭವಿ ಪ್ರಾಧ್ಯಾಪಕ ವೃಂದ ಸುಸಜ್ಜಿತವಾದ ಕಂಪ್ಯೂಟರ್ ಲ್ಯಾಬ್, ಪ್ರತ್ಯೇಕ ಗಂಥಾಲಯ ಕಟ್ಟಡ (ಪ್ರತ್ಯೇಕ ರೀಡಿಂಗ್ ರೂಮ್, ಪೀರಿಯಾಡಿಕಲ್ಸ್ ವಿಭಾಗ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ಪ್ರತ್ಯೇಕ ಪುಸ್ತಕಗಳು) ಸ್ಮಾರ್ಟ್ ಕ್ಲಾಸ್ ರೂಮ್ ವ್ಯವಸ್ಥೆ, ಕ್ರೀಡಾ ಚಟುವಟಿಕೆಗಳಿಗೆ ಪೂರಕವಾದ ಕ್ರೀಡಾಂಗಣ, ಕ್ರಿಯಾಶೀಲ ಉದ್ಯೋಗ ಕೋಶದ ಮೂಲಕ ಉದ್ಯೋಗ ಮಾಹಿತಿ, ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ, ರಾಜ್ಯದಲ್ಲಿಯೇ ಪ್ರಥಮವಾಗಿ ಪ್ರಾರಂಭಗೊಂಡಿರುವ ಮಧ್ಯಾಹ್ನದ ಬಿಸಿಯೂಟದ ಯೋಜನೆ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ವ್ಯವಸ್ಥೆ, ವಿದ್ಯಾರ್ಥಿಗಳಿಗೆ ಬಿಸಿಎಂ ಹಾಸ್ಟೆಲ್ ವ್ಯವಸ್ಥೆ ಇವುಗಳು ಸರಕಾರಿ ಸಂಸ್ಥೆಯ ಹೆಮ್ಮೆ.


ಕಾಲೇಜಿನ ಸುಸಜ್ಜಿತ ಗ್ರಂಥಾಲಯ
ಪ್ರತೀ ವಾರ ನಡೆಯುವ ಕಂಪ್ಯೂಟರ್ ತರಬೇತಿ ತರಗತಿಗಳು ಮತ್ತು ಕಂಪ್ಯೂಟರ್ ಸರ್ಟಿಫಿಕೇಟ್ ಕೋರ್ಸುಗಳು, ಯಕ್ಷಗಾನ ನಾಟ್ಯ ತರಬೇತಿ, ಇತರ ಸಾಂಸ್ಕೃತಿಕ ಪ್ರಕಾರಗಳ ತರಬೇತಿಗಳು, ರಾಷ್ಟ್ರೀಯ ಸೇವಾ ಯೋಜನೆ, ಯುವ ರೆಡ್ಕ್ರಾಸ್ ಘಟಕ, ರೋವರ್ಸ್ ಮತ್ತು ರೇಂಜರ್ಸ್ ಘಟಕಗಳ ಮೂಲಕ ವಿದ್ಯಾರ್ಥಿ ನಾಯಕತ್ವ ಬೆಳವಣಿಗೆಗೆ ಪೂರಕವಾದ ವಾತಾವರಣ ಮತ್ತು ಸಮಾಜಮುಖಿ ಚಟುವಟಿಕೆಗಳಿಗೆ ವಿಶೇಷ ಅವಕಾಶಗಳು.ಶೈಕ್ಷಣಿಕವಾಗಿ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ರ್ಯಾಂಕ್ ಸಾಧನೆ, ಕ್ರೀಡಾ ವಿಭಾಗದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ವಿಶೇಷ ಸಾಧನೆಗಳು.


ಕಾಲೇಜಿನಲ್ಲಿ ಬಿಸಿ ಊಟದ ವ್ಯವಸ್ಥೆ
ಸರಕಾರದ ವಿವಿಧ ವಿದ್ಯಾರ್ಥಿವೇತನಗಳು, ವಿದ್ಯಾರ್ಥಿನಿಯರಿಗೆ ಶುಲ್ಕ ಮರುಪಾವತಿಯ ಅವಕಾಶ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕಾಲೇಜು ಶಿಕ್ಷಣ ಇಲಾಖೆ ವತಿಯಿಂದ ವಿಶೇಷ ವಿದ್ಯಾರ್ಥಿ ವೇತನ ಮತ್ತು ತರಬೇತಿಯ ಅವಕಾಶ, ಎಲ್ಎಂಎಸ್ ಮೂಲಕ ವಿದ್ಯಾರ್ಥಿಗಳಿಗೆ ಆನ್ಲೈನ್ ಕಲಿಕಾ ಸಾಮಾಗ್ರಿಗಳ ಪೂರೈಕೆ ಇವುಗಳು ವಿದಾರ್ಥಿಗಳ ಶೈಕ್ಷಣಿಕ ಬದುಕನ್ನು ಗಟ್ಟಿಗೊಳಿಸಿಕೊಳ್ಳಲು ಸೂಕ್ತ ವೇದಿಕೆಯಾಗಿದೆ ಎನ್ನುತ್ತಾರೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ದಾಮೋದರ ಕಣಜಾಲು.

