ಒಡಿಶಾ: ಒಡಿಶಾದ ಬಾಲಸೂರ್ ಭೀಕರ ರೈಲು ದುರಂತದಲ್ಲಿ ಐವತ್ತಕ್ಕೂ ಹೆಚ್ಚು ಪ್ರಯಾಣಿಕರು ಸಾವನ್ನಪ್ಪಿದ್ದು, 300ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಇದೀಗ ಅಪಘಾತದಲ್ಲಿ ಮೃತರ ಕುಟುಂಬಕ್ಕೆ ಕೇಂದ್ರ ಸರ್ಕಾರ 10 ಲಕ್ಷ ರೂಪಾಯಿ ಘೋಷಿಸಿದೆ. ಅಪಘಾತದಲ್ಲಿ ಗಾಯಗೊಂಡವರಿಗೆ 2 ಲಕ್ಷ ರೂ. ಹಾಗೂ ಸಣ್ಣ ಪುಟ್ಟ
ಗಾಯಗಳಾದವರಿಗೆ 50 ಸಾವಿರ ರೂಪಾಯಿ ಪರಿಹಾರ ನೀಡುವುದಾಗಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಒಡಿಶಾದ ಘಟನಾ ಸ್ಥಳಕ್ಕೆ ತೆರಳುತ್ತಿದ್ದು, ಗಾಯಾಳುಗಳ ಚೇತರಿಕೆ ಪ್ರಾರ್ಥಿಸುತ್ತೇವೆ. ಭುವನೇಶ್ವರ ಮತ್ತು ಕೊಲ್ಕತಾಗಳಿಂದ ರಕ್ಷಣಾ ತಂಡಗಳು ಸ್ಥಳಕ್ಕೆ ತಲುಪಿವೆ. ಎನ್ಡಿಆರ್ಎಫ್, ರಾಜ್ಯ ಸರ್ಕಾರಗಳ ತಂಡ ಹಾಗೂ ವಾಯುಪಡೆಯ ತಂಡ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿವೆ. ರಕ್ಷಣಾ ಕಾರ್ಯಾಚರಣೆಗೆ ಸಾಧ್ಯವಿರುವ ಎಲ್ಲ ಕ್ರಮಗಳನ್ನೂ ಕೈಗೊಳ್ಳಲಾಗುತ್ತಿದೆ ಎಂದು ಅಶ್ವಿನಿ ವೈಷ್ಣವ್ ಟ್ವೀಟ್ ಮಾಡಿದ್ದಾರೆ. ಶಾಲಿಮಾರ್-ಚೆನ್ನೈ ಕೊರೊಮಂಡಲ್ ಎಕ್ಸ್ಪ್ರೆಸ್ ರೈಲುಗಾಡಿಯ 10-12 ಕೋಚ್ಗಳು ಬಾಲಸೂರ್ ಸಮೀಪ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದು ಹಳಿ ತಪ್ಪಿದೆ.ಪಕ್ಕದ ಇನ್ನೊಂದು ಹಳಿ ಮೇಲೆ ಬಿದ್ದು ಈ ಅಪಘಾತ ಸಂಭವಿಸಿದೆ.
ಈ ಸಮಯದ ಆ ಹಳಿಯ ಮೇಲೆ ಬಂದ ಯಶವಂತಪುರ- ಹೌರಾ ರೈಲು ಈ ಮೊದಲೇ ಹಳಿ ತಪ್ಪಿ ಬಿದ್ದಿದ್ದ ರೈಲಿಗೆ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಯಶವಂತಪುರ- ಹೌರಾ ರೈಲಿನ 3-4 ಬೋಗಿಗಳು ಹಳಿ ತಪ್ಪಿ ಅವಘಡ ಸಂಭವಿಸಿದೆ.