ಮಡಿಕೇರಿ:ತಲಕಾವೇರಿಯಲ್ಲಿ ಅ.17ರಂದು ಮಧ್ಯಾಹ್ನ 1.44ಕ್ಕೆ ‘ಕಾವೇರಿ ಪವಿತ್ರ ತೀರ್ಥೋದ್ಭವ’ ನಡೆಯಲಿದೆ.ತೀರ್ಥೋದ್ಭವಕ್ಕಾಗಿ ಸಕಲ ಸಿದ್ಧತಾ ಕಾರ್ಯಗಳೂ ಪೂರ್ಣಗೊಂಡಿವೆ. ಭಗಂಡೇಶ್ವರ- ತಲಕಾವೇರಿ ದೇವಾಲಯಗಳು ಸಿಂಗಾರಗೊಂಡಿವೆ. ಮಧ್ಯಾಹ್ನದ ವೇಳೆ ತೀರ್ಥೋದ್ಭವ ನಡೆಯುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ
ಭಕ್ತರು ಬರುವ ನಿರೀಕ್ಷೆ ಇದೆ. ಅದಕ್ಕಾಗಿ ಬಿಗಿಬಂದೋಬಸ್ತ್ ಏರ್ಪಡಿಸಲಾಗಿದೆ. ಭಕ್ತರನ್ನು ಭಾಗಮಂಡಲದಿಂದ ತಲಕಾವೇರಿಗೆ ಕರೆದೊಯ್ಯಲು ಕೆಎಸ್ಆರ್ಟಿಸಿ ಬಸ್ಗಳನ್ನು ನಿಯೋಜಿಸಲಾಗಿದೆ. ಬ್ರಹ್ಮಕುಂಡಿಕೆಯನ್ನು ಹೂವುಗಳಿಂದ ಸಿಂಗರಿಸಲಾಗಿದೆ.
ಕೊಡಗು ಏಕೀಕರಣ ರಂಗದ ವತಿಯಿಂದ ಒಂದು ತಿಂಗಳು ನಿರಂತರ ಅನ್ನಸಂತರ್ಪಣಾ ಕಾರ್ಯ ನಡೆಯಲಿದೆ. ವರ್ಷಕ್ಕೊಮ್ಮೆ ಘಟಿಸುವ ಈ ವಿಸ್ಮಯವನ್ನು ಕಣ್ತುಂಬಿಕೊಳ್ಳಲು ದೇಶದ ಹಲವು ಭಾಗಗಳಿಂದ ಸಹಸ್ರಾರು ಸಂಖ್ಯೆಯ ಭಕ್ತರು ಆಗಮಿಸಲಿದ್ದಾರೆ. ಇದಕ್ಕಾಗಿ ತಲಕಾವೇರಿ ಹಾಗೂ ತ್ರಿವೇಣಿ ಸಂಗಮ ಭಾಗಮಂಡಲದಲ್ಲಿ ಸಕಲ ಸಿದ್ಧತೆ ಮಾಡಲಾಗಿದೆ. ತೀರ್ಥ ಸಂಗ್ರಹಣೆಗೆ ಸಹಕರಿಸಲು ಸ್ವಯಂಸೇವಕರನ್ನು ನಿಯೋಜಿಸಲಾಗಿದೆ. ತೀರ್ಥೋದ್ಭವದ ನಂತರ ಒಂದು ತಿಂಗಳು ತಲಕಾವೇರಿಯಲ್ಲಿ ಜಾತ್ರೆ ನಡೆಯಲಿದ್ದು ಸಾವಿರಾರು ಭಕ್ತರು ನಿತ್ಯವೂ ಆಗಮಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಮುಜರಾಯಿ ಖಾತೆ ಸಚಿವ ರಾಮಲಿಂಗಾರೆಡ್ಡಿ ಭಾಗಿಯಾಗಲಿದ್ದಾರೆ.
ಬ್ರಹ್ಮ ಕುಂಡಿಕೆಯಿಂದ ಪವಿತ್ರ ತೀರ್ಥ ಉಕ್ಕಿಬರಲಿದೆ. ಈ ವಿಸ್ಮಯ ನೋಡಲು ಜನರು ಕಾತರರಾಗಿ ಕಾಯುತ್ತಿದ್ದಾರೆ. ತೀರ್ಥೋದ್ಭವಕ್ಕೂ ಮೊದಲು ತಲಕಾವೇರಿ ಕ್ಷೇತ್ರದಲ್ಲಿ ಧಾರ್ಮಿಕ ಪೂಜೆಗಳು ಜರುಗಲಿವೆ. ಬೆಳಿಗ್ಗೆ 11:30 ರಿಂದಲೇ ತೀರ್ಥೋದ್ಭವದ ತನಕ ಪೂಜಾ ಕೈಂಕರ್ಯಗಳು ನಡೆಯಲಿದೆ















