ಸುಳ್ಯ:17 ಕೋಟಿ ವೆಚ್ಚದ ವೆಂಟೆಡ್ ಡ್ಯಾಂ ಕಾಮಗಾರಿ ಕೇವಲ ನಾಲ್ಕು ತಿಂಗಳಲ್ಲಿ ಪೂರ್ಣ. ಸುಳ್ಯ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡಲು ನಗರದ ಕಲ್ಲುಮುಟ್ಲುವಿನಲ್ಲಿ ನಿರ್ಮಾಣವಾಗುತ್ತಿರುವ ವೆಂಟೆಡ್ ಡ್ಯಾಂ ನಿರ್ಮಣ ಕಾಮಗಾರಿ ದಾಖಲೆ ವೇಗದಲ್ಲಿ ಮುನ್ನಡೆದಿದೆ. ಸುಳ್ಯ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ತೀರಾ ಹಳೆಯದಾದ ವ್ಯವಸ್ಥೆಯಿಂದಾಗಿ ಕಳೆದ ಹಲವು ವರ್ಷಗಳಿಂದ ಸುಳ್ಯ ನಗರಕ್ಕೆ ನೀರು
ಸರಬರಾಜು ದೊಡ್ಡ ತಲೆ ನೋವಾಗಿ ಪರಿಣಮಿಸಿತ್ತು.ಈ ಹಿನ್ನಲೆಯಲ್ಲಿ ಸುಳ್ಯ ನಗರಕ್ಕೆ ನೀರು ಸರಬರಾಜು ಮಾಡಲು ಶಾಶ್ವತ ಯೋಜನೆ ರೂಪಿಸಲು ವೆಂಟೆಡ್ ಡ್ಯಾಂ ಮತ್ತು ಸಮಗ್ರ ಕುಡಿಯುವ ನೀರಿನ ಯೋಜನೆ ಮಂಜೂರಾಗಿದೆ. ಸಣ್ಣ ನೀರಾವರಿ ಇಲಾಖೆಯಿಂದ ವೆಂಟೆಡ್ ಡ್ಯಾಂ ನಿರ್ಮಾಣಕ್ಕೆ 17 ಕೋಟಿ ರೂ ಅನುದಾನ ಮಂಜೂರಾಗಿತ್ತು. ಡಿಸೆಂಬರ್ ತಿಂಗಳಲ್ಲಿ ಸಚಿವ ಎಸ್.ಅಂಗಾರ ಅವರು ಗುದ್ದಲಿ ಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಲಾಗಿತ್ತು.ಇದೀಗ ಕೇವಲ 4 ತಿಂಗಳಲ್ಲಿ ವೆಂಟೆಡ್ ಡ್ಯಾಂನ ಕಾಮಗಾರಿ ಅಂತಿಮ ಹಂತಕ್ಕೆ ತಲುಪಿದ್ದು ಬಹುತೇಕ ಪೂರ್ಣಗೊಂಡಿದ್ದು, ಇನ್ನು 10-15 ದಿನಗಳಲ್ಲಿ ಕಾಮಗಾರಿ ಪೂರ್ತಿಯಾಗುವ ನಿರೀಕ್ಷೆ ಇದೆ ಎಂದು ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ವಿಜಯಕುಮಾರ್ ಕಂದಡ್ಕ ಹೇಳಿದ್ದಾರೆ. ಮಳೆಗಾಲ ಆರಂಭವಾದರೆ ಕಾಮಗಾರಿ ನಡೆಸಲು ಸಾಧ್ಯವಿಲ್ಲ. ಈ ಹಿನ್ನಲೆಯಲ್ಲಿ ಬೇಸಿಗೆ ಮುಗಿಯುವ ಮುನ್ನ ಕಾಮಗಾರಿ ಮುಗಿಸಲು ಸೂಚಿಸಲಾಗಿತ್ತು.ಈ ಹಿನ್ನಲೆಯಲ್ಲಿ ದಾಖಲೆ ವೇಗದಲ್ಲಿ ಕಾಮಗಾರಿ ನಡೆದಿದೆ.

ಕರ್ನಾಟಕ ನಗರ ನೀರು ಸರಬರಾಜು ಮಂಡಳಿ ವತಿಯಿಂದ 60 ಕೋಟಿ ರೂ ವೆಚ್ಚದಲ್ಲಿ ಸಮಗ್ರ ಕುಡಿಯುವ ನೀರಿನ ಯೋಜನೆ ಮಂಜೂರಾಗಿದ್ದು ಟೆಂಡರ್ ಹಂತದಲ್ಲಿದೆ ಎಂದು ಅವರು ತಿಳಿಸಿದ್ದಾರೆ. ಸುಮಾರು 4 ದಶಕಗಳ ಹಿಂದಿನ ಕುಡಿಯುವ ನೀರಿನ ವ್ಯವಸ್ಥೆ ಸುಳ್ಯ ನಗರದಲ್ಲಿದೆ.ಇದರಿಂದ ನೀರು ಸರಬರಾಜು ವ್ಯವಸ್ಥೆ ತೀರಾ ಹದಗೆಟ್ಟಿತ್ತು.ಇದರ ಪರಿಹಾರಕ್ಕಾಗಿ ವೆಂಟೆಡ್ ಡ್ಯಾಂ ಹಾಗು ಸಮಗ್ರ ಕುಡಿಯುವ ನೀರಿನ ಯೋಜನೆ ಮಂಜೂರಾಗಿದೆ. ಬೇಸಿಗೆಯಲ್ಲಿ ಪಯಸ್ವಿನಿ ನದಿಯಲ್ಲಿ ನೀರಿನ ಹರಿವು ತೀರಾ ಕಡಿಮೆಯಾಗುತ್ತದೆ. ಈ ಸಂದರ್ಭದಲ್ಲಿ ಕಲ್ಲುಮುಟ್ಲುವಿನಲ್ಲಿ ಮರಳು ತುಂಬಿದ ಗೋಣಿ ಚೀಲ ಇರಿಸಿ ತಾತ್ಕಾಲಿಕ ಕಟ್ಟ ನಿರ್ಮಿಸಲಾಗುತ್ತಿತ್ತು. ಇದೇ ಸ್ಥಳದಲ್ಲಿ ಶಾಶ್ವತ ವೆಂಟೆಡ್ ಡ್ಯಾಂ ನಿರ್ಮಾಣಗೊಂಡಿದೆ.

‘ಸುಳ್ಯ ಬಹುಕಾಲದ ಬೇಡಿಕೆ ಸುಳ್ಯ ನಗರಕ್ಕೆ ಸಮಗ್ರ ಕುಡಿಯುವ ಯೋಜನೆ ಹಾಗು ವೆಂಟೆಡ್ ಡ್ಯಾಂ ನಿರ್ಮಣ. ಇದೀಗ ವೆಂಟೆಡ್ ಡ್ಯಾಂ ಕಾಮಗಾರಿ ದಾಖಲೆಯ ವೇಗದಲ್ಲಿ ನಿರ್ಮಾಣ ಆಗಿದ್ದು ಕಾಮಗಾರಿ ಅಂತಿಮ ಹಂತದಲ್ಲಿದೆ. ಸಮಗ್ರ ಕುಡಿಯುವ ನೀರಿನ ಯೋಜನೆಗೆ 60 ಕೋಟಿಯ ಕಾಮಗಾರಿ ಟೆಂಡರ್ ಹಂತದಲ್ಲಿದ್ದು ಮುಂದಿನ ಹಂತದಲ್ಲಿ ಕಾಮಗಾರಿ ನಡೆಯಲಿದೆ’
ವಿನಯಕುಮಾರ್ ಕಂದಡ್ಕ
ಅಧ್ಯಕ್ಷರು
ನಗರ ಪಂಚಾಯತ್ ಸುಳ್ಯ.