ಸುಳ್ಯ: ಪೆರಾಜೆ ಶ್ರೀಶಾಸ್ತಾವು ದೇವಸ್ಥಾನದಲ್ಲಿ ಇಂದು ಶ್ರೀಭಗವತಿಯ ದೊಡ್ಡಮುಡಿ ವೈಭವ. ದೊಡ್ಡಮುಡಿಯ ವೈಭವದ ದರ್ಶನ ಪಡೆಯಲು ಕೇರಳ, ಕರ್ನಾಟಕ ರಾಜ್ಯಗಳಿಂದ ಸಾವಿರಾರು ಭಕ್ತರ ಗಡಣವೇ ಆಗಮಿಸಲಿದ್ದಾರೆ. ಸುಮಾರು 30 ಅಡಿಗಳಿಗಿಂತಲೂ ಎತ್ತರದ ವೈವಿಧ್ಯಮಯ ಅಲಂಕಾರಗಳಿಂದ ಕೂಡಿದ ಭಗವತಿಯ ಮುಡಿ ಇಲ್ಲಿನ ವಿಶೇಷತೆ.30 ಅಡಿ ಎತ್ತರದ ತೆಳ್ಳಗೆ ಸಿಗಿದ ಬಿದಿರಿನ ಸಲಾಕೆಗಳಿಂದ
ಗೋಪುರಾಕಾರ ನಿರ್ಮಿಸಿ, ಅದಕ್ಕೆ ಕೆಂಪು ಬಣ್ಣದ ಬಟ್ಟೆ ಸುತ್ತಿ, ಹೂವುಗಳಿಂದ ಸಿಂಗರಿಸಿದ ಮುಡಿಯ ವೈಭವವನ್ನು ಭಕ್ತರು ಕಣ್ತುಂಬಿ ಕೊಳ್ಳಲಿದ್ದಾರೆ. ಸಂಜೆ 4 ಗಂಟೆಗೆ ದೊಡ್ಡಮುಡಿ ಹೊತ್ತ ಭಗವತಿ ಹೊರಡಲಿದೆ. ಪೆರಾಜೆಯಲ್ಲಿ ಮೂಲ ದೇವರಾ ಗಿ ಧರ್ಮಶಾಸ್ತಾರನ ಆರಾಧನೆ ಮಾಡ ಲಾಗುತ್ತದೆ. ಪಾರ್ವತಿಯ ರೂಪವಾಗಿ ಭಗವತಿ ದೇವಿಯನ್ನು ಆರಾಧಿಸಲಾಗುತ್ತದೆ. ಭೂತರಾಧನೆಗೆ ಪ್ರಸಿದ್ಧಿ ಪಡೆದ ಈ ಕ್ಷೇತ್ರದಲ್ಲಿ ಭಗವತಿ ಹಾಗು ವಿವಿಧ ದೈವಗಳ ಭೂತ ಕೋಲಗಳನ್ನು ಕಟ್ಟಿ ಆಡಿಸಲಾಗುತ್ತದೆ.
ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನ ಪೆರಾಜೆಯಲ್ಲಿ ಮಾ.10 ರಿಂದ ಕಾಲಾವಧಿ ಜಾತ್ರೋತ್ಸವ ಪ್ರಾರಂಭಗೊಂಡಿದ್ದು, ಏ.10ರವರೆಗೆ ನಡೆಯಲಿದೆ. ಪ್ರತಿವರ್ಷ ಏ.1ರಂದು ನಡೆಯುವ ಭಗವತಿಯ ದೊಡ್ಡಮುಡಿ ಇಲ್ಲಿನ ಪ್ರಮುಖ ಆಕರ್ಷಣೆ.
ಮಾ.26 ಮತ್ತು 27ರಂದು ಜಾತ್ರೋತ್ಸವದ ಅಂಗವಾಗಿ ದೇವರ ಶ್ರೀಭೂತ ಬಲಿ, ದೇವರ ನೃತ್ಯ ಬಲಿ, ಕಟ್ಟೆ ಪೂಜೆ, ದೇವರ ದರ್ಶನ ಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ ನಡೆಯಿತು.28 ರಿಂದ ದೇವಸ್ಥಾನದಲ್ಲಿ ದೈವಗಳ ಕೋಲಗಳು ನಡೆಯಿತು
ಮಾ.31ರಂದು ಕಾಳಪುಲಿಯನ್ ಮತ್ತು ಪುಲಿಕಂಡನ್ ದೈವಗಳು, ಬೇಟೆ ಕರಿಮಗನ್ ಈಶ್ವರನ್ ದೈವ ನಡೆದು ರಾತ್ರಿ 7.30ರಿಂದ ಭಗವತಿ ದೇವಿ ಸಮಾರಾಧನೆ, ರಾತ್ರಿ 8ರಿಂದ ಪುಲ್ಲೂರ್ ಕಣ್ಣನ್ ದೈವಗಳ ಬೆಳ್ಳಾಟ, ತುಳು ಕೋಲಗಳ ಬೆಳ್ಳಾಟ, ಮಲೆಕಾರಿ ಬೆಳ್ಳಾಟ, ವಿಷ್ಣುಮೂರ್ತಿ, ರಕ್ತೇಶ್ವರಿ, ಪೊಟ್ಟನ್ ದೈವ ತೊಡಂಙಲ್, ಬೇಟೆ ಕರಿಮಗನ್ ಬೆಳ್ಳಾಟ ನಡೆಯಿತು. ಭಗವತಿ ಕಲಶ ಬಂದು ಬಳಿಕ ಭಗವತಿ ತೋಟ್ಟಂ, ಆಯರ್ ಭಗವತಿ ತೋಟ್ಟಂ, ಪುಲ್ಲೂರು ಕಾಳಿ ತೋಟ್ಟಂ, ತುಳು ಕೋಲ ಮತ್ತು ಮಲೆಕಾರಿ ತಿರುವಪ್ಪಗಳು ಸಂಪನ್ಬಗೊಂಡಿತು ಏ.1ರಂದು ಬೆಳಿಗ್ಗೆ 6 ರಿಂದ ಪೊಟ್ಟನ್ ದೈವ, ರಕ್ತೇಶ್ವರಿ, ಆಯರ್ ಭಗವತಿ, ಪುಲ್ಲೂರು ಕಾಳಿ, ಪುಲ್ಲೂರು ಕಣ್ಣನ್, ವಿಷ್ಣುಮೂರ್ತಿ, ಬೇಟೆ ಕರಿಮಗನ್ ಈಶ್ವರನ್ ದೈವಗಳ ಕೋಲಗಳು ಭಕ್ತರನ್ನು ಹರಸಿತು.ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ ನಡೆದು ಅಪರಾಹ್ನ ಗಂಟೆ 4 ಕ್ಕೆ ಶ್ರೀ ಭಗವತಿ ದೊಡ್ಡಮುಡಿ ನಡೆಯಲಿದೆ. ರಾತ್ರಿ 8ಕ್ಕೆ ಪಯ್ಯೋಳಿ ನಡೆಯಲಿದೆ. ದೇವಸ್ಥಾನದ ಆಡಳಿತ ಮೊಕ್ತೇಸರರಾದ ಜಿತೇಂದ್ರ ನಿಡ್ಯಮಲೆ, ಆಡಳಿತ ಕಾರ್ಯದರ್ಶಿ ತೇಜಪ್ರಸಾದ್ ಅಮೆಚೂರು, ದೇವತಕ್ಕರು, ತಕ್ಕ ಮುಖ್ಯಸ್ಥರು, ಆಡಳಿತ ಮಂಡಳಿ ಸದಸ್ಯರು, ಸಿಬ್ಬಂದಿ ವರ್ಗ, ಊರ ಪರವೂರ ಭಕ್ತಾಭಿಮಾನಿಗಳು ಇದ್ದರು.